

Sonu Nigam : ಬೆಂಗಳೂರಿನ ಕಾಲೇಜೊಂದರಲ್ಲಿ ನಡೆದ ಈವೆಂಟ್ ಕಾರ್ಯಕ್ರಮದಲ್ಲಿ ಗಾಯಕ ಸೋನು ನಿಗಮ್ 'ಕನ್ನಡ ಹಾಡು ವಿನಂತಿ ಮಾಡಿದಕ್ಕೆ ನಾಲಿಗೆ ಹರಿಬಿಟ್ಟಿದ್ದು, ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಪಹಲ್ಗಾಮ್ ದಾಳಿಗೂ ಹಾಗೂ ಭಾಷಾ ಹೇರಿಕೆಗೂ ತಳುಕು ಹಾಕಿ ಮಾತನಾಡಿರುವ ಸೋನು ನಿಗಂಗೆ ಕನ್ನಡಿಗರು ಛೀಮಾರಿ ಹಾಕುತ್ತಿದ್ದಾರೆ. ಭಯೋತ್ಪಾದಕ ದಾಳಿಗೂ ಕನ್ನಡ ಹಾಡಿಗೂ ಎಲ್ಲಿಗೆಲ್ಲಿಯ ಸಂಬಂಧ ಅಂತ ಕೇಳಿ ಸೋನು ನಿಗಂ ವಿರುದ್ಧ ಕನ್ನಡಿಗರು ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಎಕ್ಸ್ ವೇದಿಕೆಯಲ್ಲಿ #ShameOnYouSonuNigam ಟ್ರೆಂಡಿಂಗ್ ಆಗುತ್ತಿದೆ.
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜ್ ಆಫ್ ಎಂಜಿನಿಯರಿಂಗ್ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೇದಿಕೆಯಲ್ಲಿ ಸೋನ್ ನಿಗಮ್ ಗಾಯನ ಮಾಡುತ್ತಿದ್ದ ಸಮಯದಲ್ಲಿ ಕೆಲವರು, ಕನ್ನಡ, ಕನ್ನಡ(ಕನ್ನಡ ಹಾಡು ಹೇಳಿ) ಎಂದಿದ್ದಕ್ಕೆ ಸೋನು ನಿಗಮ್ ಏಕಾಏಕಿ ಗರಂ ಆಗಿದ್ದಾರೆ. ಮುಂದುವರೆದು, ''ಕನ್ನಡ.. ಕನ್ನಡ.. ಇದೇ ಕಾರಣ.. ಪಹಲ್ಗಾಮ್ನಲ್ಲಿ ಆಗಿದ್ಯಲ್ಲ.. ಅದಕ್ಕೆ ಇದೇ ಕಾರಣ. ಈಗ ನೀವು ಏನು ಮಾಡಿದ್ರಲ್ಲ.. ಅದೇ ಕಾರಣ!'' ಎಂದಿದ್ದಾರೆ.
"ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕದಲ್ಲಿ ಪ್ರದರ್ಶನಗಳನ್ನು ನೀಡಿದಾಗಲೆಲ್ಲಾ, ನಾನು ತುಂಬಾ ಗೌರವದಿಂದ ಬರುತ್ತೇನೆ. ನೀವು ನನ್ನನ್ನು ನಿಮ್ಮ ಕುಟುಂಬದ ಭಾಗವೆಂದು ಪರಿಗಣಿಸಿದ್ದೀರಿ. ಅಲ್ಲಿರುವ ಒಬ್ಬ ಹುಡುಗ ಕನ್ನಡದಲ್ಲಿ ಹಾಡಲು ಕೇಳಿದಾಗ ನನಗೆ ಅದು ಇಷ್ಟವಾಗಲಿಲ್ಲ. ನಾನು ಕನ್ನಡದಲ್ಲಿ ಹಾಡುತ್ತಿರುವ ವರ್ಷಗಳ ಸಂಖ್ಯೆ ಅವನ ವಯಸ್ಸಿಗಿಂತ ಹೆಚ್ಚಾಗಿರಬೇಕು. ಅವನು [ಪ್ರೇಕ್ಷಕ] 'ಕನ್ನಡ, ಕನ್ನಡ' ಎಂದು ತುಂಬಾ ಅಸಭ್ಯವಾಗಿ ಬೆದರಿಕೆ ಹಾಕುತ್ತಿದ್ದನು. ಪಹಲ್ಗಾಮ್ ದಾಳಿಗೆ ಇದೇ ಕಾರಣ.. ಇಲ್ಲಿ ಈಗ ಏನು ಮಾಡಲಾಗಿದೆ.. ನಿಮ್ಮ ಮುಂದೆ ಯಾರು ನಿಂತಿದ್ದಾರೆಂದು ನೋಡಿ. ನಾನು ಕನ್ನಡಿಗರನ್ನು ಪ್ರೀತಿಸುತ್ತೇನೆ, ನಾನು ನಿಮ್ಮನ್ನು ಪ್ರೀತಿಸುತ್ತೇನೆ." ಎಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘’ಸೋನು ನಿಗಂ, ನೀವು ಇಲ್ಲಿಯವರೆಗೆ ಕನ್ನಡಿಗರಿಂದ ಗಳಿಸಿದ್ದ ಎಲ್ಲಾ ಪ್ರೀತಿ ಮತ್ತು ಗೌರವವನ್ನು ಕಳೆದುಕೊಂಡಿದ್ದೀರಿ. ಕರ್ನಾಟಕದಲ್ಲಿ ನಡೆದ ಕಾನ್ಸರ್ಟ್ನಲ್ಲಿ ಕನ್ನಡ ಹಾಡನ್ನು ವಿನಂತಿಸಿದ್ದಕ್ಕೆ, ಅದನ್ನು ಭಯೋತ್ಪಾದಕ ದಾಳಿಗೆ ನೀವು ಹೇಗೆ ಹೋಲಿಸುತ್ತೀರಿ?’' ಎಂದು ವಿಜಯೇಂದ್ರ ಇಂಗಳಗಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದೆ.
‘’ಅಭಿಮಾನಿಯೊಬ್ಬರು ಸೋನು ನಿಗಂ ಅವರನ್ನು ಕನ್ನಡದಲ್ಲಿ ಹಾಡಲು ಕೇಳಿಕೊಂಡರು. ಇದಕ್ಕೆ ಸೋನು ನಿಗಂ ಹೇಳಿದ್ದು - ‘’ಅದಕ್ಕಾಗಿಯೇ ಪಹಲ್ಗಾಮ್ ದಾಳಿ ನಡೆದಿದ್ದು’’. ಇದು ಅಜ್ಞಾನವಲ್ಲ. ಶುದ್ಧ ದ್ವೇಷ. ಕನ್ನಡ ನಮ್ಮ ಹೆಮ್ಮೆ, ಕರ್ನಾಟಕ ನಮ್ಮ ಆತ್ಮ. ಈ ಮನುಷ್ಯನನ್ನ ಎಕ್ಸ್ಪೋಸ್ ಮಾಡಬೇಕು ಎಂದು ಮತ್ತೊಬ್ಬ ನೆಟ್ಟಿಗರು ಸೋನು ನಿಗಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.(ಏಜೆನ್ಸೀಸ್)