ನಮ್ಮ ಮನೆಯಲ್ಲಿ ನನಗೂ ದೆವ್ವಗಳ ಇರುವಿಕೆ ಅನುಭವವಾಗಿದೆ: ಸೋನಾಕ್ಷಿ ಸಿನ್ಹಾ..Sonakshi Sinha

Sonakshi Sinha- Final
Published on

Sonakshi Sinha :ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ತಮ್ಮ ಸಹೋದರ ಕುಶ್ ನಿರ್ದೇಶನದ 'ನಿಕಿತಾ ರಾಯ್' ಚಿತ್ರದ ಬಿಡುಗಡೆಗೂ ಮುನ್ನ, ಸಿನಿಮಾ ಪ್ರಚಾರದಲ್ಲಿ ನಿರತರಾಗಿದ್ದಾರೆ. ಇತ್ತೀಚಿನ ಪ್ರಚಾರಗಳಲ್ಲಿ, ಸೋನಾಕ್ಷಿ ತಮ್ಮ ವೈಯಕ್ತಿಕ ಅನುಭವವನ್ನು, ಅದರಲ್ಲೂ ತಮ್ಮ ಮನೆಯಲ್ಲಿ ನಡೆದ ಘಟನೆಯನ್ನು ಹಂಚಿಕೊಳ್ಳುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರು ತಮ್ಮ ಬಾಂದ್ರಾ ಮನೆಯಲ್ಲಿ ದೆವ್ವದ ಅನುಭವವನ್ನು ಪಡೆದಿದ್ದಾಗಿ ಬಹಿರಂಗಪಡಿಸಿದ್ದಾರೆ. ತಮ್ಮ ಹೊಸ ಪ್ಯಾರನಾರ್ಮಲ್ ಚಿತ್ರ 'ನಿಕಿತಾ ರಾಯ್' ಪ್ರಚಾರದ ಭಾಗವಾಗಿ ಮಾತನಾಡುತ್ತಾ ನಟಿ ಈ ಆಘಾತಕಾರಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಒಂದು ದಿನ ಬೆಳಗಿನ ಜಾವ 4 ಗಂಟೆ ಸುಮಾರಿಗೆ ತನ್ನ ಮಲಗುವ ಕೋಣೆಯಲ್ಲಿ ವಿಚಿತ್ರವಾದ ಅನುಭವವಾಯಿತು. ಏನೋ ಒತ್ತಡ ಇದ್ದಂತೆ, ಯಾರೋ ನನ್ನನ್ನು ಎಬ್ಬಿಸಲು ಪ್ರಯತ್ನಿಸುತ್ತಿರುವಂತೆ ಭಾಸವಾಯಿತು. ನನ್ನ ಇಡೀ ದೇಹವು ಬೆವರುತ್ತಿತ್ತು, ಹಾಸಿಗೆಯಿಂದ ಏಳಲು ಸಹ ನನಗೆ ಧೈರ್ಯವಿರಲಿಲ್ಲ ಎಂದು ಸೋನಾಕ್ಷಿ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದರು.

ಕಳೆದ ವರ್ಷ ಸೋನಾಕ್ಷಿ ಮಾರಾಟ ಮಾಡಿದ ಬಾಂದ್ರಾ ಮನೆಯಲ್ಲಿ ಈ ಘಟನೆ ನಡೆದಿತ್ತು. ಆ ಮನೆಯಲ್ಲಿ ಏನೋ ವಿಚಿತ್ರವಿತ್ತು. ಆದರೆ ಅದು ದುಷ್ಟಶಕ್ತಿಯಾಗಿರಲಿಲ್ಲ, ಬಹುಶಃ ಅದು ನಿರುಪದ್ರವಿಯಾಗಿರಬಹುದು. 'ನಿಕಿತಾ ರಾಯ್' ಎಂಬ ಅಲೌಕಿಕ ಚಿತ್ರದಲ್ಲಿ ನಟಿಸುವಾಗ ತನ್ನ ಮನೆಯಲ್ಲಿ ಅಂತಹ ಅನುಭವವನ್ನು ಪಡೆದಿದ್ದರಿಂದ ಪಾತ್ರವನ್ನು ಹೆಚ್ಚು ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯವಾಯಿತು ಎಂದು ನಟಿ ಹೇಳಿದರು.

ಸೋನಾಕ್ಷಿ ಹೀಗೆ ಹೇಳುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕೆಲವು ಅಭಿಮಾನಿಗಳು ಸೋನಾಕ್ಷಿಯವರ ಧೈರ್ಯವನ್ನು ಹೊಗಳಿದ್ದರೆ, ಇನ್ನು ಕೆಲವರು ಅವರು ಚಿತ್ರದ ಪ್ರಚಾರಕ್ಕಾಗಿ ಮಾಡಿರುವ ಪ್ರಯತ್ನ ಎಂದು ಆರೋಪಿಸಿದ್ದಾರೆ.

ಕುಶ್ ಎಸ್ ಸಿನ್ಹಾ ನಿರ್ದೇಶನದ 'ನಿಕಿತಾ ರಾಯ್' ಚಿತ್ರವು ಅಲೌಕಿಕ ವಿದ್ಯಮಾನಗಳನ್ನು ತನಿಖೆ ಮಾಡುವ ಯುವತಿಯ ಕಥೆಯನ್ನು ಹೇಳುತ್ತದೆ. ಈ ಚಿತ್ರದಲ್ಲಿ ಪರೇಶ್ ರಾವಲ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net