

ಬೆಂಗಳೂರು: ಹೊಂಗಸಂದ್ರದಲ್ಲಿ ಒಂಟಿ ಮಹಿಳೆಯ ಮೇಲೆ ಹಲ್ಲೆಗೈದು ಉಸಿರುಗಟ್ಟಿಸಿ ಕೊಲೆಗೈದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ಪುತ್ರ ಸೇರಿ ಇಬ್ಬರನ್ನು ಬೊಮ್ಮನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜಯಮ್ಮ ಅವರ ಹಿರಿಯ ಪುತ್ರ ಆನೇಕಲ್ ನಿವಾಸಿಯಾದ ಉಮೇಶ್(೩೫) ಮತ್ತು ಈತನ ಸಂಬಂಧಿ ಸುರೇಶ್(೪೫) ಬಂಧಿತರು. ಆರೋಪಿಗಳು ನ.೮ ರಂದು ಹೊಂಗಸಂದ್ರ ನಿವಾಸಿ ಜಯಮ್ಮ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಜಯಮ್ಮ ಅವರ ಕಿರಿಯ ಪುತ್ರ ಗಿರೀಶ್ ಅವರು ನೀಡಿದ್ದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಆರೋಪಿ ಉಮೇಶ್ ಜಯಮ್ಮ ಅವರ ಮೊದಲನೇ ಮಗನಾಗಿದ್ದು, ನಗರದಲ್ಲಿಯೇ ವಾಸವಾಗಿದ್ದುಕೊಂಡಿದ್ದು, ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಆಗಾಗ್ಗೆ ಮನೆಗೆ ಬಂದು ಹೋಗುತ್ತಿದ್ದ. ಇದೇ ರೀತಿ ನ.೮ ರಂದು ತಾಯಿ ಜಯಮ್ಮನ ಮನೆಗೆ ಬಂದಿದ್ದ ಉಮೇಶ್ ತಾಯಿ ಜಯಮ್ಮ ಅವರ ಜತೆ ಜಗಳ ಮಾಡಿ ಮುಖಕ್ಕೆ ಗುದ್ದಿ ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದ. ಮತ್ತೊಬ್ಬ ಆರೋಪಿಯಾಗಿರುವ ಸುರೇಶ್ ಈತನ ಸಂಬಂಧಿಯಾಗಿದ್ದು, ಕೃತ್ಯಕ್ಕೆ ಸಾಥ್ ನೀಡಿದ್ದ. ತನಿಖೆ ಕೈಗೊಂಡಿದ್ದ ಪೊಲೀಸರು ಇಬ್ಬರು ಮಕ್ಕಳನ್ನು ವಿಚಾರಣೆ ನಡೆಸಿದ್ದಾಗ ಉಮೇಶ್ ಕೊಲೆ ಮಾಡಿರುವುದು ಪತ್ತೆಯಾಗಿದೆ. ನಂತರ ಉಮೇಶ್‌ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸಿದ್ದಾಗ ಕೊಲೆ ಮಾಡಿರುವುದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಂತರ ಕೊಲೆ ಮಾಡಲು ಸಹಕರಿಸಿದ್ದ ಮತ್ತೊಬ್ಬ ಆರೋಪಿ ಸುರೇಶ್‌ನನ್ನು ಸಹ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದುಡ್ಡಿಗಾಗಿ ಹೆತ್ತ ತಾಯಿಯನ್ನೆ ಕೊಂದ:
ಜಯಮ್ಮ ಅವರು ಎರಡನೇ ಮಗನಿಗೆ ಹಣ ಕೊಡುತ್ತಿದ್ದರು. ಆದರೆ ಮೊದಲನೇ ಮಗನಾದ ಸುರೇಶ್‌ಗೆ ಹಣ ಕೊಡುತ್ತಿರಲಿಲ್ಲ ಎನ್ನಲಾಗಿದೆ. ಎರಡನೇ ಮಗನ ಮೇಲೆ ನಿಂಗೆ ಪ್ರೀತಿ ಜಾಸ್ತಿ ಇದೆ ಆದರೆ ಮೊದಲನೇ ಮಗನ ಮೇಲೆ ನಿನಗೆ ಪ್ರೀತಿಯೇ ಇಲ್ಲ ಎಂದು ಸುರೇಶ್ ಜಗಳವಾಡುತ್ತಿದ್ದ. ಇದೇ ವಿಚಾರವಾಗಿ ತಾಯಿ ಮಗನ ಮಧ್ಯೆ ಮನಸ್ತಾಪ ಉಂಟಾಗಿತ್ತು. ಸದಾ ಜಗಳ ಮಾಡುತ್ತಿದ್ದ ಮಗನನ್ನು ತಾಯಿ ಇತ್ತೀಚೆಗೆ ಮನೆಯಿಂದ ಹೊರ ಹಾಕಿದ್ದರು. ಅಲ್ಲದೇ ಜಯಮ್ಮ ಅವರು ಇತ್ತೀಚೆಗೆ ತಮಿಳುನಾಡಿನ ಡೆಂಕಣಿಕೋಟೆಯಲ್ಲಿದ್ದ ಆಸ್ತಿಯನ್ನು ಮಾರಾಟ ಮಾಡಿದ್ದರು. ಅದರಿಂದ ಬಂದ ಹಣವನ್ನು ಎರಡನೇ ಮಗನಿಗೆ ಕೊಟ್ಟಿದ್ದರು. ಆದರೆ ಸುರೇಶ್‌ಗೆ ಕೊಟ್ಟಿರಲಿಲ್ಲ. ದುಡ್ಡು ಕೊಡದಿದಕ್ಕೆ ಆರೋಪಿ ಆಕ್ರೋಶಗೊಂಡ ತಾಯಿಯ ಜತೆ ಜಗಳ ಮಾಡಿ ಹಲ್ಲೆ ಮಾಡಿ ಬಳಿಕ ಉಸಿರುಗಟ್ಟಿಸಿ ಕೊಲೆ ಮಾಡಿದ್ದ. ಇದಕ್ಕೆ ಈತನ ಸಂಬಂಧಿಕ ಸುರೇಶ್ ಕೂಡ ಕುಮ್ಮಕ್ಕು ನೀಡುತ್ತಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.