ವಿವಾಹ ವಾರ್ಷಿಕೋತ್ಸವ ದಿನವೇ ಪೋಷಕರನ್ನು ಬರ್ಬರವಾಗಿ ಹತ್ಯೆಗೈದ ಪಾಪಿ ಪುತ್ರ! ಆತ ಕೊಟ್ಟ ಕಾರಣ ಕೇಳಿದ್ರೆ... | Son Stabs

ವಿಜಯವಾಣಿ - 2024-12-05T121418.060
Published on

ನವದೆಹಲಿ: ಒಂದೇ ಕುಟುಂಬದ ಮೂವರನ್ನು ಕೊಲೆ ಪ್ರಕರಣಕ್ಕೆ ಇದೀಗ ಶಾಕಿಂಗ್​ ಟ್ವಿಸ್ಟ್‌ ಸಿಕ್ಕಿದ್ದು, ಹತ್ಯೆಗೈದ ಆರೋಪಿ ಬೇರಾರೂ ಅಲ್ಲ ಮೃತ ದಂಪತಿಯ ಮಗ ಎಂಬುದು ಪೊಲೀಸರಿಗೆ ಸ್ಪಷ್ಟವಾಗಿದೆ. ಕೊಲೆಗೈದ ವ್ಯಕ್ತಿಯನ್ನು ಅರ್ಜುನ್ ಎಂದು ಹೇಳಲಾಗಿದ್ದು, ಈತ ಮೃತ ದಂಪತಿಯ ಮಗ ಎಂದು ಪೊಲೀಸರ ವರದಿಯಲ್ಲಿ ಉಲ್ಲೇಖವಾಗಿದೆ. ಬುಧವಾರ 6:30ರ ಸುಮಾರಿಗೆ ಬೆಳಗ್ಗೆ ವಾಕಿಂಗ್ ಮುಗಿಸಿ ಹಿಂತಿರುಗಿದ ಪೋಷಕರು ನಂತರ ಪತ್ತೆಯಾಗಿದ್ದು ಶವವಾಗಿ ಎಂದು ಹೇಳಿದ್ದ ಅರ್ಜುನ್ (Son Stabs),​ ಈಗ ಆರೋಪಿಯಾಗಿ ಪೊಲೀಸರ ಮುಂದೆ ಕುಳಿತಿದ್ದಾನೆ.

ಶುಭ ದಿನವೇ ಅಶುಭ

ತನ್ನ ತಂದೆ-ತಾಯಿ ಮತ್ತು ತಂಗಿ ಕೊಲೆಯಾಗಿದ್ದಾರೆ ಎಂದು ಅಕ್ಕ-ಪಕ್ಕದ ಮನೆಯವರಿಗೆ ಹೇಳಿ, ತಾನು ಅಮಾಯಕನಂತೆ ವರ್ತಿಸಿದ್ದ ಅರ್ಜುನ್​, ಈ ಕ್ರೂರ ಹತ್ಯೆಯ ಮಾಸ್ಟರ್ ಮೈಂಡ್ ತಾನೇ ಎಂಬುದನ್ನು ಇದೀಗ ದೆಹಲಿ ಪೊಲೀಸರು ತನಿಖೆಯಲ್ಲಿ ಬಾಯ್ಬಿಡಿಸಿದ್ದಾರೆ. ನಿವೃತ್ತ ಸೇನಾ ಅಧಿಕಾರಿ ರಾಜೇಶ್ ಕುಮಾರ್ (51) ಮತ್ತು ಅವರ ಪತ್ನಿ ಕೋಮಲ್ (46) ತಮ್ಮ 27ನೇ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವ ದಿನವೇ ಈ ಹತ್ಯೆ ಸಂಭವಿಸಿದೆ. ದಂಪತಿಗಳು ತಮ್ಮ ಪುತ್ರಿ ಕವಿತಾ (23) ಜತೆಗೆ ದಕ್ಷಿಣ ದೆಹಲಿಯ ಡಿಯೋಲಿ ಗ್ರಾಮದ ತಮ್ಮ ನಿವಾಸದಲ್ಲಿ ಚಾಕು ಇರಿತಕ್ಕೆ ಬಲಿಯಾಗಿದ್ದಾರೆ.

ಕೊಲೆಗೆ ಇದೇ ಕಾರಣ

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಎರಡನೇ ವರ್ಷದ ವಿದ್ಯಾರ್ಥಿಯಾಗಿರುವ ಅರ್ಜುನ್, ತನ್ನ ಹೆತ್ತ ತಂದೆ-ತಾಯಿ ಮತ್ತು ಸಹೋದರಿಯನ್ನು ಚಾಕುವಿನಿಂದ ಬರ್ಬರವಾಗಿ ಹತ್ಯೆಗೈದಿದ್ದಾನೆ. ಬಳಿಕ ನೆರೆಹೊರೆಯವರಿಗೆ ಈ ಬಗ್ಗೆ ಮಾಹಿತಿ ನೀಡಿ, ನನ್ನ ಕುಟುಂಬದವರನ್ನು ಯಾರೋ ಕೊಲೆ ಮಾಡಿಬಿಟ್ಟಿದ್ದಾರೆ ಎಂದು ನಾಟಕವಾಡಿದ್ದಾನೆ. ಘಟನೆ ನಡೆದ ಸ್ಥಳಕ್ಕೆ ಬಂದ ಪೊಲೀಸರಿಗೆ ಅರ್ಜುನ್​ ನಡೆ-ನುಡಿಯಲ್ಲಿ ಗೊಂದಲವಿರುವುದು ಗೊತ್ತಾಗಿದೆ. ಈ ಹಿನ್ನಲೆ ಆತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ನಿರಂತರ ವಿಚಾರಣೆಯಲ್ಲಿ ಕಡೆಗೂ ತನ್ನ ತಪ್ಪೊಪ್ಪಿಕೊಂಡ ಆರೋಪಿ, ತಂದೆ-ತಾಯಿ ಮತ್ತು ತಂಗಿ ಜೊತೆಗಿನ ಸಂಬಂಧ ಹಳಸಿದ ಕಾರಣದಿಂದ ಬೇಸತ್ತು ಕೊಲೆ ಮಾಡಿದೆ ಎಂದು ಹೇಳಿದ್ದಾನೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net