ಮದ್ವೆಯಾದ ಕೆಲವೇ ವರ್ಷಗಳಲ್ಲಿ ಮಗ ಸಾವು: ಸೊಸೆಗೆ ಮರುಮದುವೆ ಮಾಡಿಸಿದ ಮಾಜಿ ಶಾಸಕ

Odisha MLA
Published on

ಭುವನೇಶ್ವರ: ಮದುವೆಯಾದ ಕೆಲವೇ ವರ್ಷಗಳಲ್ಲಿ ಕಾಯಿಲೆಯಿಂದ ಮಗ ತೀರಿಕೊಂಡ ಬಳಿಕ ಸೊಸೆಗೆ ಬೇರೊಬ್ಬನ ಜೊತೆ ಮರುವಿವಾಹ ಮಾಡಿಸುವ ಮೂಲಕ ಒಡಿಶಾದ ಮಾಜಿ ಶಾಸಕರೊಬ್ಬರು ಮಾದರಿಯಾಗಿದ್ದಾರೆ. ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಶಾಸಕರಿಗೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಶಾಸಕರ ಹೆಸರು ನಬಿನ್​ ನಂದಾ. ಒಡಿಶಾದ ಧೆನಂಕನಲ್​ ಜಿಲ್ಲೆಯ ಗಂಡಿಯಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ. ಅವರ ಪುತ್ರ ಸಂಬಿತ್​ ಜೊತೆ ಮಧುಸ್ಮಿತಾ ಎಂಬ ಯುವತಿಗೆ ಮದುವೆ ನಿಶ್ಚಯ ಮಾಡಿ, ಅದ್ಧುರಿಯಾಗಿ ಮದುವೆ ಮಾಡಿದ್ದರು. ಆದರೆ, ಕರೊನಾದಿಂದ ಬಳಲಿದ ಸಂಬಿತ್​ರನ್ನು ಕಟಕ್​ನ ಅಶ್ವಿನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ 2021ರ ಮೇ 22ರಂದು ಸಂಬಿತ್​ ತೀರಿಕೊಂಡಿದ್ದ.

ಸಂಬಿತ್ ಸಾವಿನ ನಂತರ ಮಧುಸ್ಮಿತಾ ಒಂಟಿಯಾದರು. ಮಾಜಿ ಶಾಸಕ ನಬಿನ್​ ಅವರು ಸೊಸೆಯ ಒಂಟಿತನವನ್ನು ಸಹಿಸಲಾಗದೆ ಆಕೆಯನ್ನು ಮರು ಮದುವೆಗೆ ಒತ್ತಾಯ ಮಾಡಿ, ಸೊಸೆ ಹಾಗೂ ಕುಟುಂಬಸ್ಥರಿಗೆ ಮನವರಿಕೆ ಮಾಡಿಕೊಟ್ಟು ಬಾಲಸೋರ್ ಜಿಲ್ಲೆಯ ಶಿವಚಂದನ್ ಎಂಬ ಯುವಕನೊಂದಿಗೆ ಮರು ವಿವಾಹ ಮಾಡಿಸಿದ್ದಾರೆ. ಮಂಗಳವಾರ ಭುವನೇಶ್ವರದ ನಾಯಪಲ್ಲಿ ಲಕ್ಷ್ಮಿ ದೇವಸ್ಥಾನದಲ್ಲಿ ಸರಳವಾಗಿ ವಿವಾಹ ಕಾರ್ಯಕ್ರಮ ನಡೆದಿದೆ. ಕಾಕತಾಳೀಯವೆಂಬಂತೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದಂದೇ ಮದುವೆ ನಡೆದಿದೆ. ನಬಿನ್ ನಂದಾ ಅವರ ಸೊಸೆ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವೈರಲ್ ಆಗುತ್ತಿದೆ.

ಈ ದಿನವನ್ನು ನಾನೆಂದು ಮರೆಯಲಾರೆ. ನಾನು ತಪ್ಪು ಮಾಡಿದೆನೋ ಗೊತ್ತಿಲ್ಲ. ಹಿಂದೂ ಆಚಾರ-ವಿಚಾರಗಳಿಗೆ ವಿರುದ್ಧವಾಗಿ ನನ್ನ ಸೊಸೆಯನ್ನು ಮರು ಮದುವೆ ಮಾಡಿಸಿದೆ. ನನ್ನ ಹಿರಿಯ ಮಗ ಸತ್ತು ಹೋದ್ದರಿಂದ ಆಕೆಯ ಒಂಟಿತನವನ್ನು ನೋಡಲಾಗದೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ನಮ್ಮ ಮನೆಗೆ ಸೊಸೆಯಾಗಿ ಬಂದಳು. ಈಗ ಆಕೆ ಓರ್ವ ಹೆಣ್ಣು ಮಗಳಿದ್ದಾಳೆ ಎಂದು ನಬಿನ್​ ಹೇಳಿದರು.

ನಬಿನ್​ ಅವರು ಈ ಹಿಂದೆ ಬಿಜೆಡಿ ಪರವಾಗಿ ಗಾಂಧಿಯಿಂದ ಶಾಸಕರಾಗಿ ಗೆದ್ದಿದ್ದರು. 2019 ರ ಒಡಿಶಾ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು ಆದರೆ ಗೆಲ್ಲಲು ವಿಫಲವಾದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net