

ಬೆಂಗಳೂರು: ಮಕ್ಕಳಲ್ಲಿನ ಸಣ್ಣ ಬದಲಾವಣೆಯನ್ನೂ ಅಮ್ಮ ಗುರುತು ಹಿಡಿಯುತ್ತಾಳೆ ಎಂಬ ಮಾತಿದೆ. ಅದಾಗ್ಯೂ ಇಲ್ಲೊಬ್ಬ ಮಗ ಅಮ್ಮನಿಗೆ ಗುರುತು ಸಿಗಬಾರದು ಎಂದು ವರ್ಷಗಳ ಬಳಿಕ ವಿದೇಶದಿಂದ ಬಂದು ನೇರ ಮೀನು ಮಾರ್ಕೆಟ್ಗೆ ಹೋಗಿ ಮುಖಮುಚ್ಚಿಕೊಂಡು ತಾಯಿಯ ಬಳಿ ವ್ಯಾಪಾರಿಯ ರೀತಿ ನಡೆದುಕೊಂಡರೂ ಆಕೆ ಗುರುತು ಹಿಡಿದುಬಿಟ್ಟಿದ್ದಾಳೆ!
ಇಂಥದ್ದೊಂದು ಮಾತೃವಾತ್ಸಲ್ಯದ ಅನಾವರಣದಂಥ ಸನ್ನಿವೇಶ ಉಡುಪಿ ಜಿಲ್ಲೆಯ ಗಂಗೊಳ್ಳಿಯ ಮೀನು ಮಾರ್ಕೆಟ್ನಲ್ಲಿ ಕಂಡು ಬಂದಿದೆ. ಗಂಗೊಳ್ಳಿಯ ನಿವಾಸಿ ರೋಹಿತ್ ಎಂಬ ಯುವಕ ದುಬೈನಲ್ಲಿ ಉದ್ಯೋಗದಲ್ಲಿದ್ದು, ಮೂರು ವರ್ಷಗಳ ಬಳಿಕ ಹುಟ್ಟೂರಿಗೆ ಮರಳಿದ್ದಾನೆ. ಹೀಗೆ ಬಂದವ ತಾಯಿಗೊಂದು ಅಚ್ಚರಿ ಕೊಡಬೇಕು ಎಂದು ಯೋಜನೆಯೊಂದನ್ನು ಹಾಕಿಕೊಂಡಿದ್ದ.
ದುಬೈನಿಂದ ಮರಳಿದ ಈತ ನೇರವಾಗಿ ಮೀನು ಮಾರ್ಕೆಟ್ಗೆ ಬಂದು, ಅಲ್ಲಿ ಮೀನು ಮಾರುತ್ತಿದ್ದ ತಾಯಿಯ ಬಳಿಗೆ ಮುಖ ಮುಚ್ಚಿಕೊಂಡು ಹೋಗಿ, ವ್ಯಾಪಾರಿಯ ರೀತಿಯಲ್ಲಿ ಮೀನು ಖರೀದಿಗೆ ಮುಂದಾಗಿದ್ದ. ತನ್ನ ತಾಯಿ ಗುರುತಿಸುತ್ತಾರೋ ಇಲ್ಲವೋ ಎಂದು ಈತ ಇವೆಲ್ಲವನ್ನೂ ವಿಡಿಯೋ ಮಾಡಿಸಿಕೊಂಡಿದ್ದ.
ಮಾಮೂಲಿಯಂತೆ ವ್ಯಾಪಾರದ ವೇಳೆ ಎಲ್ಲರಿಗೂ ಸ್ಪಂದಿಸುವಂತೆ ಈ ತಾಯಿ ಮೀನು ಆರಿಸಿಕೊಡಲು ಮುಂದಾಗಿದ್ದಾಳೆ. ಆದರೆ ಈ ಹೀಗೆ ಮಾಡುತ್ತಿದ್ದಾಗ ಈ ಹೆಂಗರುಳು ಎದುರಿಗಿರುವುದು ತನ್ನ ಮಗ ಎಂಬುದರ ಸುಳಿವು ಹಿಡಿದಿತ್ತು. ಅನುಮಾನ ಬಂದ ತಾಯಿ ಈತ ಮುಖಕ್ಕೆ ಮುಚ್ಚಿಕೊಂಡಿದ್ದ ಬಟ್ಟೆಯನ್ನು ಸರಿಸಿ ನೋಡಿದ್ದಳು. ಆಗ ಅದು ನಿಜವಾಗಿಯೂ ತನ್ನ ಮಗನೇ ಆಗಿದ್ದರಿಂದ ಈ ಅಮ್ಮ ಆತನನ್ನು ಪ್ರೀತಿಯಿಂದ ಅಪ್ಪಿಕೊಂಡಿದ್ದು, ಮೀನು ಮಾರ್ಕೆಟ್ನಲ್ಲಿ ಮಾತೃವಾತ್ಸಲ್ಯದ ಅನಾವರಣಗೊಂಡಿದೆ. ಈ ವಿಡಿಯೋ ಈಗ ಎಲ್ಲೆಡೆ ಹರಿದಾಡಲಾರಂಭಿಸಿದ್ದು, ಭಾರಿ ಮೆಚ್ಚುಗೆಗೆ ಪಾತ್ರವಾಗುತ್ತಿದೆ.