

ಸಮರ್‌ಸಾಲ್ಟ್ ಭಾಮಾ ಎಂದು ವಿವಾದ ಮೈಮೇಲೆ ಎಳೆದುಕೊಂಡ ಮಾಜಿ ಸಿಎಂ ಸ್ಟಾಲಿನ್
ಧಾರಾಪುರಂ ಉಪಚುನಾವಣೆಯ ಪ್ರಚಾರದ ವೇಳೆ ನಡೆದ ಘಟನೆ
ಮಹಿಳಾ ದಲಿತ ಅಭ್ಯರ್ಥಿಯ ಮೈಕಟ್ಟು ಮತ್ತು ದೇಹದ ಆಕಾರ ಹೀಯಾಳಿಸಲಾಗಿದೆ ಎಂದು ಕಿಡಿ
ಧಾರಾಪುರಂ ಉಪಚುನಾವಣೆ ಪ್ರಚಾರದ ವೇಳೆ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಅವರು ಟಿವಿಕೆ ಅಭ್ಯರ್ಥಿ ಸತ್ಯಭಾಮ ಅವರನ್ನು ಗುರಿಯಾಗಿಸಿ ಸಮರ್‌ಸಾಲ್ಟ್ ಭಾಮಾ ಎಂದು ಕರೆದಿರುವುದು ರಾಜಕೀಯವಾಗಿ ತೀವ್ರ ಹಗ್ಗ-ಜಗ್ಗಾಟಕ್ಕೆ ಕಾರಣವಾಗಿದೆ.
ತಮಿಳುನಾಡು ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮಹಿಳಾ ದಲಿತ ಅಭ್ಯರ್ಥಿಗೆ ಬಾಡಿ ಶೇಮ್ ಮಾಡಿದ್ದಾರೆ. ಅವರು ಅಭ್ಯರ್ಥಿ ಬಳಿ ಕ್ಷಮೆಯಾಚಿಸಬೇಕು. ಇದು ದಲಿತ ಮಹಿಳೆಗೆ ಅಪಮಾನ ಎಂದು ಟಿವಿಕೆ ಪಟ್ಟು ಹಿಡಿದಿದೆ.
ಧಾರಾಪುರಂ ಉಪಚುನಾವಣೆಗೆ ನಡೆಯುತ್ತಿದ್ದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಎಂಕೆ ಸ್ಟಾಲಿನ್ ಅವರು, 'ಈಗ ಅವರು ಯಾರು ಸತ್ಯಭಾಮಾ ಅವರನ್ನು ನೀವು 'ಪೆಟ್ಟಿ ಭಾಮಾ' (ಸೂಟ್‌ಕೇಸ್-ಭಾಮಾ) ಎಂದು ಕರೆಯುತ್ತಿದ್ದೀರಿ. ಮತ್ತೊಂದು ಹೆಸರೂ ಇದೆ - 'ಪಲ್ಟಿ ಭಾಮಾ' (ಸಮರ್‌ಸಾಲ್ಟ್ ಭಾಮಾ). ಆಕೆಯ ಆ ಶರೀರದೊಂದಿಗೆ ಪಲ್ಟಿ ಹೊಡೆದದ್ದು ಹೇಗೆ ಎಂಬುದು ನನಗೆ ಗೊತ್ತಿಲ್ಲ" ಎಂದು ವ್ಯಂಗ್ಯವಾಡಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಸ್ಟಾಲಿನ್ ಅವರ ಈ ಹೇಳಿಕೆ ಮಹಿಳೆಯರಿಗೆ ಮತ್ತು ದಲಿತ ಸಮುದಾಯಕ್ಕೆ ಮಾಡಿರುವ ದೊಡ್ಡ ಅವಮಾನ ಎಂದು ಟಿವಿಕೆ ನಾಯಕ ಹಾಗೂ ಆರೋಗ್ಯ ಸಚಿವ ಅರುಣ್ ರಾಜ್ ಕಿಡಿಕಾರಿದ್ದಾರೆ. ಸತ್ಯಭಾಮ ಅವರಿಗೆ ಕ್ಷಮೆ ಕೋರುವಂತೆ ಒತ್ತಾಯಿಸಿದ್ದಾರೆ.
ಟಿವಿಕೆ ಕೈಗಾರಿಕಾ ಸಚಿವೆ ಕೀರ್ತನಾ ಮಾತನಾಡಿ, ಸ್ಟಾಲಿನ್ ಅವರ ಮಾತುಗಳು ಅವರ ಕೀಳು ಮಟ್ಟದ ಮನಸ್ಥಿತಿಯನ್ನು ತೋರಿಸಿದೆ. ಮಹಿಳೆಯರ ಗೌರವಕ್ಕೆ ಧಕ್ಕೆ ತರುವ ಇಂತಹ ಕಾಮೆಂಟ್‌ಗಳು ಸಂಪೂರ್ಣ ಖಂಡನೀಯ ಎಂದಿದ್ದಾರೆ. ಮಹಿಳೆಯರ ಗೌರವಕ್ಕಾಗಿ ಅಕ್ಟೋಬರ್ 6 ರಂದು ಧಾರಾಪುರಂ ಮಹಿಳೆಯರು ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ನಮಗೆ ನಿಮ್ಮ ಮೇಲೆ ಗೌರವ ಇತ್ತು ಸ್ಟಾಲಿನ್ ಸರ್. ಆದರೆ, ಈ ನಿಮ್ಮ ದುರ್ನಡತೆ ನಿಜಕ್ಕೂ ಅಸಹ್ಯವೆನಿಸುತ್ತಿದೆ. ನೀವು ಒಬ್ಬ ಮಹಿಳೆಯ ದೇಹದ ಬಗ್ಗೆ ಮಾತನಾಡಿದ್ದು ಕಿಂಚಿತ್ತೂ ಸರಿ ಎನಿಸಲಿಲ್ಲ ಎಂದು ಎಕ್ಸ್ನಲ್ಲಿ ವಿಶಾಲ್ ಎಂಬುವವರು ಬರೆದುಕೊಂಡಿದ್ದಾರೆ
ಮಿಥುನ್ ಕೆ ರಾಮನ್ ಎಂಬುವವರು ಮಾತನಾಡಿ, ತಮಿಳುನಾಡು ರಾಜಕೀಯದಲ್ಲಿ ಇದಕ್ಕಿಂತ ಕೀಳು ಮಟ್ಟ ಮತ್ತೊಂದಿಲ್ಲ. 50 ವರ್ಷಗಳ ರಾಜಕೀಯ ಅನುಭವ ಹೊಂದಿರುವ, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕರಾಗಿರುವ ಸ್ಟಾಲಿನ್, ಅಭ್ಯರ್ಥಿ ಸತ್ಯ ಭಾಮಾ ಅವರ ಕುರಿತು ಮಾತನಾಡಿರುವುದು ಅವರ ಮನಸ್ಥಿತಿ ಎಂಥ ಕೀಳುಮಟ್ಟದಲ್ಲಿದೆ ಎನ್ನುವುದನ್ನು ತೋರಿಸುತ್ತದೆ ಎಂದು ಕಿಡಿಕಾರಿದರು, (ಏಜೆನ್ಸೀಸ್).