

ಕೋಲಾರ: ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೈಗಾರಿಕೆ ಪ್ರದೇಶ ನಿರ್ಮಾಣವಾದರೆ ನನಗೆ ಹೆಸರು ಬರುತ್ತದೆ ಅನ್ನೋ ಕಾರಣಕ್ಕೆ ಕೆಲವರು ಸರ್ಕಾರದ ಮೇಲೆ ಒತ್ತಡ ಹಾಕಿ ಆಗದಂತೆ ತಡೆ ಹಾಕುತ್ತಿದ್ದಾರೆ. ಯಾರು ಎಷ್ಟೇ ಒತ್ತಡ ಹಾಕಿದರೂ ನನ್ನ ಹೋರಾಟ ನಿಲ್ಲುವುದಿಲ್ಲ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಜನ ಐದು ಸಲ ಶಾಸಕರನ್ನಾಗಿ ಆಯ್ಕೆ ಮಾಡಿದ್ದು, ಋಣ ತೀರಿಸಲು ಕೈಗಾರಿಕಾ ವಲಯ ಮಾಡಲೇಬೇಕು, ಈಗಾಗಲೇ ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತಿದ್ಧೇನೆ. ಸದನದಲ್ಲಿಯೂ ಡಿಸಿಎಂ, ಡಿ.ಕೆ ಶಿವಕುಮಾರ್ ಮತ್ತು ಸಚಿವರ ಗಮನಕ್ಕ ತಂದಿದ್ದೇನೆ ಎಂದರು.
5 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯವಾದರೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ. ಮಾವು ಸಂಸ್ಕರಣ ಘಟಕ ನಿರ್ಮಾಣ ಮಾಡಲು ಉದ್ಯಮಿಗಳು ಮುಂದೆ ಬರುತ್ತಾರೆ. ನೆಲವಂಕಿ ಪ್ರದೇಶದಲ್ಲಿ ಕೈಗಾರಿಕೆಗಳ ನಿಮಾರ್ಣಕ್ಕೆ ಸೂಕ್ತವೆನಿಸುವ ಮೂಲಭೂತ ಸೌಕರ್ಯವಿದೆ. ಈಗಾಗಲೇ ಅಧಿಕಾರಿಗಳು ಜಾಗವನ್ನು ಪರಿಶೀಲಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಎತ್ತಿನಹೊಳೆ ಯೋಜನೆ ಜಾರಿಗೆ ತಂದಿದ್ದು ನಮ್ಮ ಜಿಲ್ಲೆಗಾಗಿ, ಆದರೆ ತುಮಕೂರು-, ಹಾಸನ ಭಾಗದಲ್ಲಿ ಎತ್ತಿನಹೊಳೆ ನೀರನ್ನು ಅಲ್ಲಿನ ಕೆರೆಗಳಿಗೆ ತುಂಬಿಸಿಕೊಳ್ಳುತ್ತಿದ್ದಾರೆ. ಕೋಟ್ಯಾಂತರ ರೂ ಸರ್ಕಾರ ವೆಚ್ಚ ಮಾಡಿದ್ದು, ಮೊದಲು ನಮ್ಮ ಜಿಲ್ಲೆಗೆ ನೀರು ಕೊಟ್ಟ ನಂತರ ಇತರೆ ಜಿಲ್ಲೆಗೆ ಕೊಡಲಿ ಎಂದು ಸಲಹೆ ನೀಡಿದರು.
ಯಾರಿಗೋ ಲಾಭ ಮಾಡಿಕೊಳ್ಳುವುದಕ್ಕೆ ಖಾಸಗಿ ಸಹಭಾಗಿತ್ವದಲ್ಲಿ ಮೆಡಿಕಲ್ ಕಾಲೇಜು ಮಾಡಿದರೆ ಏನು ಪ್ರಯೋಜನವಾಗುವುದಿಲ್ಲ. ಈಗಾಗಲೇ ಖಾಸಗಿ ಮೆಡಿಕಲ್ ಕಾಲೇಜು ಇದೆ. ಇನ್ನೊಂದು ಸರ್ಕಾರದ ಸಹಭಾಗಿತ್ವದ ಖಾಸಗಿ ಮೆಡಿಕಲ್ ಕಾಲೇಜು ಅವಶ್ಯಕತೆ ಇಲ್ಲ. ಸರ್ಕಾರವೇ ಮಾಡಿದರೆ ಕೋಲಾರ ಜಿಲ್ಲೆಯ ಜನಕ್ಕೆ - ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.
* ಕೃಷ್ಣಾ ನದಿ ನೀರು ಹರಿಸುವ ಭರವಸೆ
ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹಾಗೂ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ಅವರನ್ನು ನಾನು ಮತ್ತು ಸಂಸದ ಮಲ್ಲೇಶ್ಬಾಬು ದೆಹಲಿಯಲ್ಲಿ ಭೇಟಿ ಮಾಡಿ ಜಿಲ್ಲೆಗೆ ಕೃಷ್ಣ ನದಿ ನೀರು ಹರಿಸುವ ಸಂಬಂಧ ಚರ್ಚಿಸಿದ್ದು, ಆಂಧ್ರದಲ್ಲಿ ನೀರಿನ ಅವಶ್ಯಕತೆಯ ಬಗ್ಗೆ ಅಧಿಕಾರಿಗೊಂದಿಗೆ ಚರ್ಚಿಸಿದ ನಂತರ ತೀಮಾರ್ನ ತೆಗೆದುಕೊಳ್ಳುವುದಾಗಿ ಅವರು ಭರವಸೆ ಕೊಟ್ಟಿದ್ದಾರೆ ಎಂದು ಮಾಹಿತಿ ನೀಡಿದರು.
* ಉಸ್ತುವಾರಿಗೆ ಜಿಲ್ಲೆ ನನ್ನದು ಎಂಬ ಭಾವನೆಯಿಲ್ಲ
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಬರ್ತಾರೆ ಹೋಗ್ತಾರೆ ಹೊರತು ಅಭಿವೃದ್ದಿ ಕೆಲಸಗಳು ಏನು ಆಗಿಲ್ಲ. ಜಿಲ್ಲೆ ನನ್ನದು ಎಂಬ ಭಾವನೆ ಸಚಿವರಿಗೆ ಬಂದಾಗ ಮಾತ್ರ ಅಭಿವೃದ್ದಿ ಕಾಣಲು ಸಾಧ್ಯ. ಮಂತ್ರಿಗಳು, ಶಾಸಕರು ಹೇಗಿರುತ್ತಾರೂ ಅಧಿಕಾರಿಗಳು ಅದೇ ರೀತಿ ಕೆಲಸ ಮಾಡಿಕೊಂಡು ಹೋಗುವಾಗ ಅಭಿವೃದ್ದಿ ಕೆಲಸಗಳು ನಡೆಯುವುದಾದರೂ ಹೇಗೆ ಎಂದು ವೆಂಕಟಶಿವಾರೆಡ್ಡಿ ಪ್ರಶ್ನಿಸಿದರು.