

ಗೋವಿಂದರಾಜು ಚಿನ್ನಕುರ್ಚಿ ಬೆಂಗಳೂರು
ಹೈಕಮಾಂಡ್ ಸೂಚನೆ ಮೇರೆಗೆ ಸರ್ಕಾರದ ಕಾರ್ಯವೈಖರಿ ಪರೀಕ್ಷೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮುಂದಾಗಿದ್ದು, ಕ್ಲೋಸ್ ಡೋರ್ ಮೀಟಿಂಗ್‌ನಲ್ಲಿ ಸಚಿವರು ಮತ್ತು ಜಿಲ್ಲಾ ಉಸ್ತುವಾರಿಗಳ ನಡವಳಿಕೆಗಳನ್ನು ಶಾಸಕರು ದಾಖಲೆ ಸಮೇತ ಬಿಚ್ಚಿಡುತ್ತಿದ್ದಾರೆ. ಇದರಿಂದ ಕೆಲ ಸಚಿವರಿಗೆ ತಮ್ಮ ಸ್ಥಾನಕ್ಕೆ ಕುತ್ತು ಬರುವ ಆತಂಕ ಶುರುವಾಗಿದೆ.
ಕಾಂಗ್ರೆಸ್ ಆಡಳಿತಕ್ಕೆ ಬಂದ ದಿನದಿಂದ ಸ್ವಪಕ್ಷಿಯ ಶಾಸಕರೇ ಸರ್ಕಾರ ಮತ್ತು ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಅದರಲ್ಲಿಯೂ ಸಚಿವರು ಮತ್ತು ಜಿಲ್ಲಾ ಉಸ್ತುವಾರಿಗಳು ಭೇಟಿಗೆ ಸಿಗುತ್ತಿಲ್ಲ. ಕ್ಷೇತ್ರ ಅಭಿವೃದ್ಧಿ ಕೆಲಸಕ್ಕೆ ಅನುದಾನದ ಕೊರತೆ ಕಾಡುತ್ತಿದೆ ಎಂದು ಸಾರ್ವಜನಿಕ ವೇದಿಕೆಯಲ್ಲಿ ಹೇಳುವ ಮೂಲಕ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರು. ಆರೇಳು ತಿಂಗಳ ಹಿಂದೆ ಜನರ ಮೆಚ್ಚುಗೆ ಮತ್ತು ಸರ್ಕಾರದ ವರ್ಚಸ್ಸು ಬರುವಂತೆ ಕೆಲಸ ಮಾಡದ ಆರೇಳು ಸಚಿವರನ್ನು ಬದಲಾಯಿಸಬೇಕೆಂದು ಹೈಕಮಾಂಡ್ ನಿರ್ಧರಿಸಿತ್ತು. ಸಿಎಂ ಒತ್ತಾಸೆ ಮೇರೆಗೆ ಕೊನೇ ಕ್ಷಣದಲ್ಲಿ ನಿರ್ಧಾರ ಕೈಬಿಟ್ಟು, ಸಚಿವರ ಮತ್ತು ಇಲಾಖೆಯ ಕಾರ್ಯವೈಖರಿ ಬಗ್ಗೆ ವರದಿ ಪಡೆದು ಆನಂತರ ಬದಲು ಮಾಡುವುದಾಗಿ ಹೇಳಿಕೆ ನೀಡಿತ್ತು.
ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡು ಸಮಾಧಾನಪಟ್ಟುಕೊಂಡಿದ್ದ ಸಚಿವರನೇಕರು, ತಾವು ಮಂತ್ರಿಯಾಗಿ ಏನು ಕೆಲಸ ಮಾಡಿದ್ದೇವೆಂದು ಪುಸ್ತಕ ಮುದ್ರಿಸಿ ದೆಹಲಿಗೆ ತೆರಳಿ ಹೈಕಮಾಂಡ್‌ಗೆ ತಿಳಿಸುವ ಪ್ರಯತ್ನ ಮಾಡಿದ್ದರು. ಇದೀಗ ಶಾಸಕರ ಅಭಿಪ್ರಾಯದ ಮೂಲಕ ಸಚಿವರ ಪರಾಮರ್ಶೆಗೆ ನೇರವಾಗಿ ಹೈಕಮಾಂಡ್ ಅಖಾಡಕ್ಕೆ ಇಳಿದಿರುವುದು ಸಚಿವರಿಗೆ ಆತಂಕ ಹುಟ್ಟಿಸಿದೆ. ಶಾಸಕರಿಂದ ಒನ್ ಟು ಒನ್ ಸಭೆ ನಡೆಸುತ್ತಿರುವ ಸರ್ಜೇವಾಲಾ, ಎಲ್ಲ ಸಮಸ್ಯೆಗಳನ್ನು ಆಲಿಸಿ ನೋಟ್ ಮಾಡಿಕೊಳ್ಳುತ್ತಿದ್ದಾರೆ. ಬಹುತೇಕ ಶಾಸಕರು, ಕೆಲ ಇಲಾಖೆ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುವ ಜತೆಗೆ ತಾವು ಬರೆದಿರುವ ಪತ್ರಗಳನ್ನು ಮುಂದಿಟ್ಟು ವಿವರಿಸುವ ಪ್ರಯತ್ನ ಮಾಡಿದ್ದಾರೆ.
ಮೊದಲ ಹಂತವಾಗಿ 42 ಶಾಸಕರಿಂದ ಮಾಹಿತಿ ಕಲೆ ಹಾಕುತ್ತಿರುವ ಸುರ್ಜೇವಾಲಾ, ಮುಂದಿನ 10 ದಿನಗಳ ಬಳಿಕ ಉಳಿದ ಶಾಸಕರನ್ನು ಕರೆದು ಅವರ ದುಃಖ ದುಮ್ಮಾನಗಳನ್ನು ಆಲಿಸಲಿದ್ದಾರೆ. ಇದಲ್ಲದೆ, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಚುನಾವಣೆಯಲ್ಲಿ ಪರಾಜಿತ ಅಭ್ಯರ್ಥಿಗಳ ಸಭೆ ಕರೆಯುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಕೊನೆಯದಾಗಿ ಸಿಎಂ ಮತ್ತು ಡಿಸಿಎಂರನ್ನು ಕರೆದು ಮಾತನಾಡುವುದಾಗಿ ಸುಳಿವು ನೀಡಿದ್ದಾರೆ. ಈ ಎಲ್ಲ ಮಾಹಿತಿಯನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟು ಪ್ರತಿಯೊಬ್ಬ ಸಚಿವರ ಕೆಲಸದ ರೀತಿರಿವಾಜುಗಳ ಬಗ್ಗೆ ಗಂಭೀರ ಚರ್ಚೆ ಆಗಲಿದೆ.
ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜು ಖರ್ಗೆ ಸಹ, ಸುರ್ಜೇವಾಲಾ ಅವರು ಶಾಸಕರಿಂದ ಮಾಹಿತಿ ಕಲೆ ಹಾಕಿ ಹೈಕಮಾಂಡ್‌ಗೆ ನೀಡಲಿದ್ದಾರೆ. ಆನಂತರ ಏನು ಮಾಡಬೇಕೆಂದು ನಿರ್ಧಾರ ಮಾಡಲಾಗುತ್ತದೆ ಎಂದು ಸಣ್ಣ ಸುಳಿವನ್ನು ಕೊಟ್ಟಿದ್ದಾರೆ.
ಸಚಿವರ ಕಾರ್ಯವೈಖರಿ ಮಾನದಂಡಗಳು
- ಶಾಸಕರೊಂದಿಗೆ ಸ್ಪಂದನೆ ಯಾವ ರೀತಿ ಇದೆ?
- ಪಕ್ಷ ಸಂಘಟನೆಗೆ ಮತ್ತು ವರ್ಚಸ್ಸಿಗೆ ವಿಶೇಷ ಪ್ರಯತ್ನ ಏನು?
- ಉಸ್ತುವಾರಿ ಇರುವ ಜಿಲ್ಲೆಗಳಲ್ಲಿ ಏನೆಲ್ಲ ಕೆಲಸ ಮಾಡಿದ್ದಾರೆ?
- ಗ್ಯಾರಂಟಿ ಅನುಷ್ಠಾನದಲ್ಲಿ ನಿಮ್ಮ ಪಾತ್ರ ಏನು?
ಎಷ್ಟು ಸಚಿವರಿಗೆ ಆಪತ್ತು?
ಆರೆಂಟು ತಿಂಗಳ ಹಿಂದೆ 7-8 ಸಚಿವರನ್ನು ಬದಲಿಸಲು ಹೈಕಮಾಂಡ್ ಪಟ್ಟಿ ಸಿದ್ಧಪಡಿಸಿಕೊಂಡಿತ್ತು. ಆದರೆ ಈಗ ಈ ಸಂಖ್ಯೆ ದುಪ್ಪಟ್ಟಾಗುವ ಸಾಧ್ಯತೆ ಇಲ್ಲದಿಲ್ಲ. 2028ರ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ಮಟ್ಟದ ಸರ್ಜರಿ ನಡೆಸಿ ಹೊಸ ತಂಡ ಕಟ್ಟಿದರೆ ಹೇಗೆ ಎಂಬ ಚಿಂತನೆಯೂ ಹೈಕಮಾಂಡ್ ಮನಸ್ಸಿನಲ್ಲಿ ಇದ್ದಂತಿದೆ. ಹೀಗಾಗಿ ಶಾಸಕರು ನೀಡುವ ಅಭಿಪ್ರಾಯದ ಮೇಲೆ ಸಂಪುಟ ಸದಸ್ಯರ ಭವಿಷ್ಯ ಅಡಗಿದೆ.