

ಸೊರಬ: ನಗರ ಮತ್ತು ಪಟ್ಟಣ ಪ್ರದೇಶದಲ್ಲಿನ ಸಾರ್ವಜನಿಕರ ಆಸ್ತಿಗಳಿಗೆ ಸರ್ಕಾರದಿಂದಲೇ ಆಸ್ತಿ ಮಾಲೀಕತ್ವದ ಪ್ರಮಾಣ ಪತ್ರ ಕಲ್ಪಿಸುವ ಜತೆಗೆ ಗೊಂದಲಗಳನ್ನು ಪರಿಹರಿಸಿ ಅತಿಕ್ರಮಣ ತಡೆಯಲು ಸರ್ಕಾರ ನಕ್ಷಾ ಯೋಜನೆ ಜಾರಿಗೆ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಸೊರಬ ತಾಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ಆವರಣದಲ್ಲಿ ಮಂಗಳವಾರ ಕಂದಾಯ ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಹಾಗೂ ಪೌರಾಡಳಿತ ಇಲಾಖೆ ಆಶ್ರಯದಲ್ಲಿ ನಕ್ಷಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಭೂಮಿ ಬಳಕೆಯ ವಿವರಗಳನ್ನು ನಿರ್ಣಯಿಸಿ, ವಸತಿ, ಸಾರಿಗೆ ಮತ್ತು ಇತರ ಸೇವೆಗಳನ್ನು ಒದಗಿಸುವಲ್ಲಿ ನಕ್ಷಾ ಸಹಾಯಕವಾಗಲಿದೆ. ಆಸ್ತಿ ಮೌಲ್ಯಗಳನ್ನು ನಿರ್ಣಯಿಸಲು, ತೆರಿಗೆಗಳನ್ನು ನ್ಯಾಯಯುತವಾಗಿ ವಿಧಿಸಲು ಮತ್ತು ಪರಿಣಾಮಕಾರಿಯಾಗಿ ಸಂಗ್ರಹಿಸಲು ಸಹಕಾರಿಯಾಗುವ ನಿರೀಕ್ಷೆ ಇದೆ ಎಂದರು.
ವಿಶೇಷವಾಗಿ ಸರ್ಕಾರಿ ಶಾಲೆ ಸೇರಿ ವಿವಿಧ ಇಲಾಖೆಗಳ ಅಸ್ತಿಯನ್ನು ಗುರುತಿಸಿ ಸಂರಕ್ಷಣೆ ಮಾಡಲು ಅನುಕೂಲವಾಗಲಿದೆ. ಅಲ್ಲದೆ ಜನರು ಅನಗತ್ಯವಾಗಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಬಹುದು. ತಾಲೂಕಿನಲ್ಲಿ ಸುಮಾರು 75 ಲಕ್ಷ ಆಸ್ತಿಗಳಿದ್ದು, ಮುಂದಿನ ಆರು ತಿಂಗಳಲ್ಲಿ ದಾಖಲೆಗಳನ್ನು ಸೃಜಿಸುವ ಕಾರ್ಯ ಪೂರ್ಣವಾಗುವ ನಿರೀಕ್ಷೆ ಇದೆ ಎಂದರು.
ಸಾಗರ ಉಪವಿಭಾಗಾಧಿಕಾರಿ ಆರ್.ಯತೀಶ್, ಭೂ ಮಾಪನ ಇಲಾಖೆ ಉಪನಿರ್ದೇಶಕ ಪಿ.ಶ್ರೀನಿವಾಸ್, ಸರ್ವೇ ಆ್ ಇಂಡಿಯಾ ಪ್ರತಿನಿಧಿ ರಮೇಶ್, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಪಪಂ ಮುಖ್ಯಾಧಿಕಾರಿ ಸಂತೋಷಕುಮಾರ್, ಕೆಡಿಪಿ ಸದಸ್ಯ ಸದಾನಂದ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಪಿ.ರುದ್ರಗೌಡ, ಬಿಇಒ ಪುಷ್ಪಾ, ಅನೀಶ್ ಪಾಟೀಲ್, ನಾಗರಾಜ ಗೌಡ, ಜಿಪಂ ಮಾಜಿ ಸದಸ್ಯ ಶಿವಲಿಂಗೇಗೌಡ, ಮಧು ಗೌಡ, ಸಂಜೀವ್, ಕೃಷ್ಣಪ್ಪ, ಚಂದ್ರಪ್ಪ ಇತರರಿದ್ದರು.