

ಶಿವಮೊಗ್ಗ: ರೈತರು ಗುಣಮಟ್ಟದ ಮತ್ತು ಹೆಚ್ಚಿನ ಇಳುವರಿ ಪಡೆಯಲು ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಆದ್ದರಿಂದ ರೈತರು ಎರಡು ವರ್ಷಕ್ಕೊಮ್ಮೆ ಮಣ್ಣಿನ ಪರೀಕ್ಷೆ ಮಾಡಿಸಬೇಕು ಎಂದು ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿ ಕುಲಪತಿ ಡಾ.ಆರ್.ಸಿ.ಜಗದೀಶ ಹೇಳಿದರು.
ನವುಲೆ ಕೃಷಿ ವಿಜ್ಞಾನ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಣ್ಣು ಪರೀಕ್ಷೆ ಬಳಿಕ ಶಿಫಾರಸ್ಸು ಮಾಡಿದಷ್ಟೇ ಪ್ರಮಾಣದ ಗೊಬ್ಬರಗಳನ್ನು ಭೂಮಿಗೆ ಹಾಕುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸುವುದರ ಜತೆಗೆ ಬೇಸಾಯದ ಖರ್ಚು ಕಡಿಮೆ ಮಾಡಿಕೊಂಡು ಹೆಚ್ಚಿನ ಇಳುವರಿ ಪಡೆಯಬಹುದು. ಮಣ್ಣಿನ ಫಲವತ್ತತೆಯ ಮಾಹಿತಿ ನಕ್ಷೆಗಳನ್ನು ತಯಾರಿಸುವುದು ಅವಶ್ಯವಿದೆ ಎಂದರು.
ವಿವಿಯ ಶಿಕ್ಷಣ ನಿರ್ದೇಶಕ ಡಾ.ಬಿ.ಹೇಮ್ಲಾ ನಾಯ್ಕ ಮಾತನಾಡಿ, ಇರುವುದೊಂದೇ ಭೂಮಿ. ಆದ್ದರಿಂದ್ದ ಮಣ್ಣಿನ ಆರೋಗ್ಯ ಕಾಪಾಡಲು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಕನಿಷ್ಠ ಎರಡು ಹಸುಗಳನ್ನು ಸಾಕಿದರೆ ಸಾವಯವ ಗೊಬ್ಬರ ತಯಾರಿಸಿಕೊಂಡು ಕೃಷಿ ಜಮೀನಿಗೆ ಬಳಕೆ ಮಾಡಬಹುದು ಎಂದು ಹೇಳಿದರು.
ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ ಮಾತನಾಡಿ, ರಾಜ್ಯದ ಮಣ್ಣಿನಲ್ಲಿ ಶೇ.40ರಷ್ಟು ಸಾವಯವ ಅಂಶದ ಕೊರತೆಯಿದೆ. ಆದ್ದರಿಂದ ರೈತರು ಮಣ್ಣು ನಿರ್ವಹಣೆಯ ಮಹತ್ವವನ್ನು ಅರಿಯಬೇಕಿದೆ. ಇದಕ್ಕೆ ರೈತರು ಸಾವಯವ ಕೃಷಿ, ಹಸಿರೆಲೆ ಗೊಬ್ಬರಗಳನ್ನು ಯಥೇಚ್ಚವಾಗಿ ಬಳಸಿ ಮಣ್ಣಿನ ನಿರ್ವಹಣೆ ಮಾಡಬೇಕಿದೆ ಎಂದು ತಿಳಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣ್ ಕುಮಾರ್ ಮಾತನಾಡಿ, ಮಣ್ಣು ಕೃಷಿಗೆ ಮೂಲ ಆಧಾರ. ಆದ್ದರಿಂದ ಮಣ್ಣಿನ ಪರೀಕ್ಷೆ ಆಧಾರದ ಮೇಲೆ ಗೊಬ್ಬರಗಳ ಬಳಕೆ ಮಾಡುವುದು ಸೂಕ್ತ. ರೈತರು ಬೆಳೆ ಪರಿವರ್ತನೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು ಎಂದು ಹೇಳಿದರು.
ವಿವಿ ಆಡಳಿತ ಮಂಡಳಿ ಸದಸ್ಯ ಡಾ. ಪಿ.ಕೆ.ಬಸವರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಕೆವಿಕೆಯ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಸಿ.ಸುನಿಲ್, ಮಣ್ಣು ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಎಂ.ಸಿ.ಅಂಜಲಿ ಮುಂತಾದವರಿದ್ದರು. ಇದೇ ವೇಳೆ ನೂತನ ಮಾದರಿಯ ಮಣ್ಣು ಆರೋಗ್ಯ ಚೀಟಿಯನ್ನು ಬಿಡುಗಡೆ ಗೊಳಿಸಿ ಫಲಾನುಭವಿ ರೈತರಿಗೆ ವಿತರಿಸಲಾಯಿತು.