ಚಂದ್ರನ ಮೇಲಿರುವ ಮಣ್ಣು ಜೀವ ಪರಿಸರಕ್ಕೆ ಆಧಾರವಾಗಬಹುದು: ಹೊಸ ಸಂಶೋಧನೆ! Soil On The Moon

Soil On The Moon
Published on

Soil On The Moon : ಚಂದ್ರನ ಮೇಲಿರುವ ಮಣ್ಣು ಜೀವ ಪರಸರಕ್ಕೆ ಬೆಂಬಲ ನೀಡಬಹುದು ಎಂಬುದನ್ನು ಚೀನಾದ ವಿಜ್ಞಾನಿಗಳು ತಮ್ಮ ಹೊಸ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ.

ಹೊಸ ಸಂಶೋಧನಾ ವರದಿಯು ಜರ್ನಲ್​ ಜೌಲ್​ನಲ್ಲಿ ಪ್ರಕಟವಾಗಿದೆ. ಸಂಶೋಧಕರು ಚಂದ್ರನ ಮಣ್ಣಿನಿಂದ ನೀರನ್ನು ಹೊರತೆಗೆದು ಇಂಗಾಲದ ಡೈಆಕ್ಸೈಡ್ ಅನ್ನು ಆಮ್ಲಜನಕ ಮತ್ತು ಇಂಧನ ಸಂಬಂಧಿತ ರಾಸಾಯನಿಕಗಳಾಗಿ ಪರಿವರ್ತಿಸಲು ಆ ನೀರನ್ನು ಬಳಸಿದ್ದಾರೆ. ಈ ನೂತನ ಆವಿಷ್ಕಾರವು ನೀರು, ಆಮ್ಲಜನಕ ಮತ್ತು ಇಂಧನದಂತಹ ಅಗತ್ಯ ಸಂಪನ್ಮೂಲಗಳಿಗಾಗಿ ಭೂಮಿಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಮೂಲಕ ಆಳವಾದ ಬಾಹ್ಯಾಕಾಶ ಸಂಶೋಧನೆಗೆ ದಾರಿ ಮಾಡಿಕೊಡಲಿದೆ.

ಚಂದ್ರನ ಮಣ್ಣು ಹೊಂದಿರುವ 'ಮ್ಯಾಜಿಕ್' ಅನ್ನು ನಾವು ಎಂದಿಗೂ ಸಂಪೂರ್ಣವಾಗಿ ಊಹಿಸಿರಲಿಲ್ಲ ಎಂದು ಶೆನ್ಜೆನ್‌ನಲ್ಲಿರುವ ಹಾಂಗ್​ಕಾಂಗ್‌ನ ಚೀನೀ ವಿಶ್ವವಿದ್ಯಾಲಯದ ಸಂಶೋಧಕ ಲು ವಾಂಗ್ ಹೇಳಿದ್ದಾರೆ. ನಮಗಾದ ದೊಡ್ಡ ಆಶ್ಚರ್ಯವೆಂದರೆ ಈ ಸಂಯೋಜಿತ ವಿಧಾನದಲ್ಲಿ ಸಿಕ್ಕ ಸ್ಪಷ್ಟ ಯಶಸ್ಸು. ಚಂದ್ರನಿಂದ H2O ಹೊರತೆಗೆಯುವಿಕೆ ಮತ್ತು ಫೋಟೊಥರ್ಮಲ್ CO2 ವೇಗವರ್ಧನೆಯ ಒಂದು ಹಂತದ ಏಕೀಕರಣವು ಶಕ್ತಿಯ ಬಳಕೆಯ ದಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ವೆಚ್ಚ ಮತ್ತು ಸಂಕೀರ್ಣತೆಯನ್ನು ಕಡಿಮೆ ಮಾಡುತ್ತದೆ ಲು ವಾಂಗ್​ ಹೇಳಿರುವುದಾಗಿ Space.com ವರದಿ ಮಾಡಿದೆ.

ಈ ಹಿಂದೆಯೇ ಬಾಹ್ಯಾಕಾಶ ಸಂಸ್ಥೆಗಳು ಚಂದ್ರನನ್ನು ಬ್ರಹ್ಮಾಂಡದ ಪರಿಶೋಧನೆಗಳಿಗೆ ಔಟ್​ಪೋಸ್ಟ್​ ಆಗಿ ಬಳಸುವ ಐಡಿಯಾವನ್ನು ಮುಂದಿಟ್ಟಿದ್ದವು. ಆದರೆ, ಚಂದ್ರನ ಮೇಲೆಯೇ ಅಗತ್ಯವಾದ ಇಂಧನ, ನೀರು ಮತ್ತು ಇತರ ಸಂಪನ್ಮೂಲಗಳನ್ನು ತಯಾರಿಸಲು ಸಾಧ್ಯವಾದರೆ ಮಾತ್ರ ಇದು ಸಾಧ್ಯವಾಗಬಹುದು ಎಂದು ತಜ್ಞರು ಹೇಳಿದ್ದರು. ಇದೀಗ ಚೀನಾ ವಿಜ್ಞಾನಿಗಳ ಸಂಶೋಧನೆಯಿಂದ ಈ ಐಡಿಯಾಗೆ ಒಂದು ಬಲ ಬಂದಿದೆ.

ಭೂಮಿಯಿಂದ ಭವಿಷ್ಯದಲ್ಲಿ ಚಂದ್ರನ ನೆಲೆಗೆ ವಸ್ತುಗಳನ್ನು ಸಾಗಿಸುವುದು ದುಬಾರಿಯಾಗಲಿದೆ ಎಂದು ಸಾಕಷ್ಟು ಅಧ್ಯಯನಗಳು ತೋರಿಸಿವೆ. ಏಕೆಂದರೆ, ಸರಕುಗಳ ದ್ರವ್ಯರಾಶಿ ಹೆಚ್ಚಾದಷ್ಟೂ, ಬಾಹ್ಯಾಕಾಶಕ್ಕೆ ರಾಕೆಟ್ ಉಡಾವಣೆ ಮಾಡಲು ಕಷ್ಟವಾಗುತ್ತದೆ. ಉದಾಹರಣೆಗೆ ಚಂದ್ರನಿಗೆ ಒಂದು ಗ್ಯಾಲನ್ ನೀರನ್ನು ಸಾಗಿಸಲು 83,000 ಡಾಲರ್​ ವೆಚ್ಚವಾಗುತ್ತದೆ. ಆದರೆ ಪ್ರತಿಯೊಬ್ಬ ಗಗನಯಾತ್ರಿ ದಿನಕ್ಕೆ 4 ಗ್ಯಾಲನ್ ನೀರನ್ನು ಕುಡಿಯಬೇಕಿದೆ. ಚಂದ್ರನ ಮಣ್ಣಿನಿಂದ ನೀರನ್ನು ಹೊರತೆಗೆಯುವ ಈ ಹಿಂದಿನ ಪ್ರಯತ್ನಗಳು ಹೆಚ್ಚಿನ ಪ್ರಮಾಣದ ಶಕ್ತಿಯನ್ನು ಬಳಸಿದವು ಮತ್ತು ಇಂಧನ ಮತ್ತು ಇತರ ಅಗತ್ಯ ಬಳಕೆಗಳಿಗಾಗಿ CO2 ಅನ್ನು ಒಡೆಯಲಿಲ್ಲ. ಆದರೆ, ಈಗ ಹೊಸ ಸಂಶೋಧನೆಯು ಆ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಪ್ರಸ್ತುತ ಚೀನಾದ ಸಂಶೋಧನಾ ತಂಡವು ಚಂದ್ರನ ಮಣ್ಣಿನಿಂದ ನೀರನ್ನು ಹೊರತೆಗೆದು ಗಗನಯಾತ್ರಿಗಳು ಹೊರಹಾಕುವ CO2 ಅನ್ನು ಕಾರ್ಬನ್ ಮಾನಾಕ್ಸೈಡ್ (CO) ಮತ್ತು ಹೈಡ್ರೋಜನ್ ಅನಿಲವಾಗಿ ಪರಿವರ್ತಿಸಲು ನೇರವಾಗಿ ಬಳಸುವ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ. ನಂತರ ಇದನ್ನು ಗಗನಯಾತ್ರಿಗಳು ಉಸಿರಾಡಲು ಆಮ್ಲಜನಕವನ್ನು ಮತ್ತು ಇಂಧನವನ್ನು ತಯಾರಿಸಲು ಬಳಸಬಹುದು. ಈ ತಂತ್ರಜ್ಞಾನವು ಸೂರ್ಯನ ಬೆಳಕನ್ನು ಬಳಸಿಕೊಂಡು ಅದನ್ನು ಶಾಖವಾಗಿ ಪರಿವರ್ತಿಸುವ ಒಂದು ನವೀನ ವ್ಯವಸ್ಥೆಯ ಮೂಲಕ ಸಾಧಿಸುತ್ತದೆ.

ಸದ್ಯ ಪ್ರಯೋಗಾಲಯದಲ್ಲಿ ಈ ತಂತ್ರಜ್ಞಾನ ಯಶಸ್ವಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಆದಾಗ್ಯೂ, ತೀವ್ರ ಚಂದ್ರನ ಪರಿಸರವು ಇನ್ನೂ ಚಂದ್ರನ ಮೇಲ್ಮೈಯಲ್ಲಿ ಅದರ ಬಳಕೆಯನ್ನು ಸಂಕೀರ್ಣಗೊಳಿಸುವ ಸವಾಲುಗಳನ್ನು ಒಡ್ಡುತ್ತದೆ ಎಂದಿದ್ದಾರೆ. ಇದರಲ್ಲಿ ಚಂದ್ರನ ತೀವ್ರ ತಾಪಮಾನ ಏರಿಳಿತಗಳು, ತೀವ್ರವಾದ ವಿಕಿರಣ ಮತ್ತು ಕಡಿಮೆ ಗುರುತ್ವಾಕರ್ಷಣೆ ಸೇರಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net