ಕೆರೆಗಳಲ್ಲಿ ಮಣ್ಣು ಮಾಫಿಯ ಹವ್ಯಾಹತ!

klr soil story
ಜಿಲ್ಲೆಯ ಕೆರೆಯೊಂದರಲ್ಲಿ ಮಣ್ಣು ಸಾಗಿಸುತ್ತಿರುವ ಟಿಪ್ಪರ್​ಗಳು.
Published on

* ಕಿರುವಾರ ಎಸ್​.ಸುದರ್ಶನ್​ ಕೋಲಾರ

ಜಿಲ್ಲೆಯಲ್ಲಿನ ಬಹುತೇಕ ಕೆರೆಗಳಲ್ಲಿ ನೀರು ಬತ್ತಿ ಹೋಗಿದ್ದು, ಕೆಲವರು ಮಣ್ಣು, ಮರಳು ಮಾಫಿಯಾದಲ್ಲಿ ತೊಡಗಿಕೊಂಡು ಕೆರೆಗಳಿಗೆ ಕನ್ನ ಹಾಕುತ್ತಿರುವುದಲ್ಲದೇ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟು ಮಾಡುತ್ತಿದ್ದಾರೆ.

ಸಣ್ಣ ನೀರಾವರಿ ಇಲಾಖೆ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 2,520 ಕೆರೆಗಳಿದ್ದು, ಇಟ್ಟಿಗೆ ಫ್ಯಾಕ್ಟರಿ, ಹೆಂಚಿನ ಫ್ಯಾಕ್ಟರಿಗಳಿಗೆ ತೆಗೆದುಕೊಂಡು ಹೋಗುವುದರ ಜತೆಗೆ, ಹೊರ ರಾಜ್ಯಗಳಿಗೂ ಮಾರಾಟ ಮಾಡಿಕೊಳ್ಳಲು ಕೆರೆಗಳಲ್ಲಿ ಕಾನೂನು ಬಾಹಿರವಾಗಿ ಮಣ್ಣು ತೆಗೆಯುತ್ತಿರುವುದು ಕಂಡು ಬಂದಿದೆ.

ಕೆರೆಗಳಲ್ಲಿ ಮಣ್ಣು ತೆಗೆಯುವ ಮುಂಚೆ ಆಯಾ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಬೇಕು, ಎಷ್ಟು ಟ್ರ್ಯಾಕ್ಟರ್​ ಅಥವಾ ಟಿಪ್ಪರ್​ ಲೋಡ್​ ಮಣ್ಣು ಬೇಕು, ಯಾವ ಉದ್ದೇಶಕ್ಕೆ ಎಂದು ಅರ್ಜಿಯಲ್ಲಿ ಕೇಳಬೇಕು. ಸರ್ಕಾರಕ್ಕೆ ಶುಲ್ಕ ಪಾವತಿಸಿದ ನಂತರ ಅನುಮತಿ ನೀಡುತ್ತಾರೆ. ಆದರೆ ಬಹುತೇಕರು ನಿಯಮಗಳನ್ನು ಪಾಲನೆ ಮಾಡದೆ ಮಣ್ಣು ತೆಗೆದುಕೊಳ್ಳುತ್ತಿರುವುದು ಇಲಾಖಾಧಿಕಾರಿಗಳ ಗಮನಕ್ಕೆ ಇದ್ದರೂ ಕ್ರಮಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕೋಲಾರ, ಮುಳಬಾಗಿಲು, ಶ್ರೀನಿವಾಸಪುರ, ಮಾಲೂರು, ಕೆಜಿಎಫ್​ ಹಾಗೂ ಬಂಗಾರಪೇಟೆ ತಾಲೂಕು ವ್ಯಾಪ್ತಿಯಲ್ಲಿರುವ ಕೆರೆಗಳಲ್ಲಿ ಮಣ್ಣು ಮಾಫಿಯ ಅವ್ಯಹತವಾಗಿ ನಡೆಯುತ್ತಿದೆ. ಸಣ್ಣ ನೀರಾವರಿ ಇಲಾಖೆಯ ಕೆರೆಗಳಿಗಿಂತ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕೆರೆಗಳಲ್ಲಿ ದಂಧೆ ಹೆಚ್ಚಿದ್ದು, ಮಾಫಿಯಗಳ ಜತೆಗೆ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಜಿಲ್ಲೆಯ ಕೆರೆಗಳಲ್ಲಿನ ಮಣ್ಣು ಬಹಳ ಫಲವತ್ತೆಯ ಗುಣಗಳನ್ನು ಹೊಂದಿದೆ. ರೈತರ ಹೊಲ, ತೋಟಗಳಿಗೆ ಹೂಳು ಹೊಡೆದುಕೊಳ್ಳಲಾಗುವುದು ಎಂದು ಹೇಳಿ ಕೆಲ ಮಾಫಿಯಗಳು ಲೋಡ್​ ಗಟ್ಟಲೇ ಮಣ್ಣು ಸಾಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಕೆರೆಯ ಸ್ವರೂಪಕ್ಕೆ ಧಕ್ಕೆಯುಟಾಗುವ ಆತಂಕ ಕೆರೆ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಕಾಡುತ್ತಿದೆ.

ಜಿಲ್ಲೆಯ ಕೋಲಾರ ತಾಲೂಕಿನ ಚೌಡದೇನಹಳ್ಳಿ, ಕೋಡಿಕಣ್ಣೂರು, ಶ್ರೀನಿವಾಸಪುರ ತಾಲೂಕಿನ ಕಲ್ಲೂರು, ಕಿರುವಾರ ಸೇರಿ ಮುಂತಾದ ಕೆರೆಗಳಲ್ಲಿ ಮಾಫಿಯಾ ಕಣ್ಣುಕುಕ್ಕಿದ ನಿದರ್ಶನಗಳಿವೆ. ಇಚೆಗೆ ಚೌಡದೇನಹಳ್ಳಿ, ಕೋಡಿಕಳ್ಳೂರು ಕೆರೆಯಲ್ಲಿ ಖಾಸಗಿ ವ್ಯಕ್ತಿಗಳು ಮಣ್ಣು ತೆಗೆಯುತ್ತಿದ್ದನ್ನು ಸಾರ್ವನಿಕರು ಪ್ರಶ್ನಿಸಿದ ಕಾರಣ ದಂಧೆಯಲ್ಲಿರುವವರು ಪ್ರಶ್ನಿಸುವವರನ್ನೇ ಟಾರ್ಗೆಟ್​ ಮಾಡಿ ಹಲ್ಲೆ ನಡೆಸಲು ಯತ್ನಿಸಿದ್ದರು. ಈ ಬಗ್ಗೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ನೀಡಲಾಗಿದ್ದು, ಇಂಜಿನಿಯರ್​ಗಳು ವಾಹನಗಳ ನಂಬರ್​ ಸಮೇತ ದೂರು ನೀಡಿದ್ದರೂ ಯಾವುದೇ ಕ್ರಮ ಆಗಿಲ್ಲ.

ಜಿಲ್ಲಾದ್ಯಂತ ಎಗ್ಗಿಲ್ಲದೆ ಮಣ್ಣು ಮಾಫಿಯಾ ನಡೆಯುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳಿಗಾಗಿ ಮಣ್ಣನ್ನು ನಾಶಪಡಿಸಲಾಗುತ್ತಿದೆ. ಇನ್ನು ಹಗಲಲ್ಲೇ ರಾಜರೋಷವಾಗಿ ಮಣ್ಣು ಸಾಗಾಟ ನಡೆಯುತ್ತಿದೆ. ಅಕ್ರಮವಾಗಿ ಸಾಗಾಟ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಂಡು ಕೆರೆಗಳ ಸ್ವರೂಪಕ್ಕೆ ಹಾನಿಯಾಗದಂತೆ ಎಚ್ಚರವಹಿಸಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯವಾಗಿದೆ.

* ಕೆರೆ ರಕ್ಷಣೆಯಲ್ಲಿ ಪ್ರಾಧಿಕಾರ ವಿಫಲ

ಕೆರೆಗಳ ಸಂರಕ್ಷಣೆಗಾಗಿ ರಾಜ್ಯ ಸರ್ಕಾರವು ಕೆರೆ ಸಂರಕ್ಷಣಾ ಪ್ರಾಧಿಕಾರವನ್ನು ರಚನೆ ಮಾಡಿದೆ. ಜಿಲ್ಲಾ ಕಚೇರಿಯು ಸದ್ಯಕ್ಕೆ ಎಪಿಎಂಸಿ ಮಾರುಕಟ್ಟೆ ಹಿಂಭಾಗದಲ್ಲಿ ಖಾಸಗಿ ಮಟ್ಟದಲ್ಲಿ ಕಚೇರಿಯಿದ್ದು, ಸಾರ್ವಜನಿಕರ ಗಮನಕ್ಕೆ ಇಲ್ಲ. ಕೆರೆಗಳ ರಕ್ಷಣೆ ವಿಚಾರದಲ್ಲಿ ಪ್ರಾಧಿಕಾರದ ಅಧಿಕಾರಿಗಳು ತಲೆ ಕೆಡಿಸಿಕೊಳ್ಳದೆ ಇರುವುದು ಚರ್ಚೆಗೆ ಗ್ರಾಸವಾಗಿದೆ.

ಕೋಟ್​...

ಕೆರೆಗಳಲ್ಲಿ ನೀರು ಬತ್ತಿರುವುದರಿಂದ ಮಣ್ಣಿಗೆ ಬೇಡಿಕೆ ಇದ್ದು, ಅನುಮತಿ ಕೇಳಿದವರಿಗೆ ಕಾನೂನಡಿ ನೀಡಲಾಗುತ್ತಿದೆ. ಆದರೆ ಕದ್ದು ಮುಚ್ಚಿ ಮಣ್ಣು ಸಾಗಿಸಿಕೊಳ್ಳುತ್ತಿರುವವರನ್ನು ಹಿಡಿದು ದೂರು ದಾಖಲಿಸಲಾಗುತ್ತಿದೆ. ಈಗಾಗಲೇ ಕೆಲ ಪ್ರಕರಣಗಳ ಸಂಬಂಧ ಸ್ಥಳ ಮಹಜರು ಮಾಡಲಾಗಿದೆ.

- ಹರಿಕೃಷ್ಣ, ಎಇಇ, ಸಣ್ಣ ನೀರಾವರಿ ಇಲಾಖೆ, ಕೋಲಾರ

ಕೋಟ್​...

ಕೆರೆ ಹೂಳು ಮಾತ್ರ ಎತ್ತಲು ಅವಕಾಶವಿದೆ, ಮಣ್ಣು ಮುಟ್ಟಬಾರದು. ಹೂಳನ್ನು ಎತ್ತಿ ಕೆರೆ ಕಟ್ಟೆಗಳಿಗೆ, ಒತ್ತುವರಿ ತಡೆಗೆ ಕೆರೆ ಗಡಿಭಾಗಕ್ಕೆ ಬದು ಅಥವಾ ಕಟ್ಟೆ ರೀತಿಯಲ್ಲಿ ಬಳಸಬೇಕು. ಮಣ್ಣು ಮಾಫಿಯಾದಿಂದ ಪ್ರಕೃತಿ ಸಂಪತ್ತು ನಾಶವಾಗುತ್ತಿದೆ.

- ರಾಮುಶಿವಣ್ಣ, ರೈತ ಹೋರಾಟಗಾರ, ವೇಮಗಲ್​

* ಷರತ್ತುಗಳೇನು...?

1.ಅಧಿಕಾರಿಗಳು ಮಾರ್ಕ್​ ಮಾಡಿ ಕೊಟ್ಟಿರುವ ಸ್ಥಳದಲ್ಲಿ ಸೂಚಿಸಿರುವ ಪ್ರಮಾಣಕ್ಕೆ ಮೀರದಂತೆ ಹೂಳು ತೆಗೆಯಬೇಕು. ಸೂಚಿಸಿರುವ 0.75 ಮೀ ಅಳಕ್ಕೆ ಮೀರಿ ಹೂಳು ತೆಗೆಯಬಾರದು.

2. ಕೆರೆಯ ಅಂಗಳದ ಮೇಲ್ಪದರದಿಂದ ತೂಬಿನ ಕೇಳಮಟ್ಟಕ್ಕಿಂತ ಕೆಳಭಾಗಕ್ಕೆ ಹೂಳು ತೆಗೆಯದಂತೆ ನಿಗಾವಹಿಸಬೇಕು.

3. ಕೆರೆಯ ಏರಿಗೆ ಹಾನಿಯಾಗದಂತೆ ಇಳಿಜಾರುನಿಂದ ಕನಿಷ್ಠ 50 ಅಡಿ ದೂರದಿಂದ ತೆಗೆಯಬೇಕು.

4. ಮಣ್ಣು ತೆಗೆದ ಸ್ಥಳದಲ್ಲಿ ನಾಲ್ಕು ದಿಕ್ಕುಗಳಲ್ಲಿ ಇಳಿಜಾರು ಮಾಡಬೇಕು.

5. ಮರಳು ಕಂಡು ಬಂದಲ್ಲಿ ಸಮಕ್ಷಮ ಪ್ರಾಧಿಕಾರಕ್ಕೆ ವರದಿ ಮಾಡಬೇಕು.

6. ಮಣ್ಣಿನ ಪ್ರಮಾಣವನ್ನು ಪ್ರಾಧಿಕಾರವು ಯಾವುದೇ ಕ್ಷಣದಲ್ಲಿ ಪರಿವೀಸಬಹುದುಮ ನಿಯಮ ಉಲ್ಲಂನೆ ಕಂಡು ಬಂದಲ್ಲಿ ಅನುಮತಿ ರದ್ದುಪಡಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net