ದೈನಂದಿನ ಸುಗಮ ಆಡಳಿತಕ್ಕೆ ತಂತ್ರಾಂಶ ಪೂರಕ

hrms
ಶಿವಮೊಗ್ಗದಲ್ಲಿ ಎಚ್‌ಆರ್‌ಎಂಎಸ್-2.0 ಹಾಗೂ ಕೆಎಎಸ್‌ಎಸ್ ತಂತ್ರಾಂಶ ಕುರಿತು ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಡಿಸಿ ಗುರುದತ್ತ ಹೆಗಡೆ ಉದ್ಘಾಟಿಸಿದರು. ಸಿ.ಎಸ್.ಷಡಾಕ್ಷರಿ, ಆರ್.ಮೋಹನ್‌ಕುಮಾರ್, ಆರ್.ಪಾಪಣ್ಣ, ಸುಧಾರಾಣಿ, ನಿರ್ಮಲಾ ಇತರರಿದ್ದರು.
Published on

ಶಿವಮೊಗ್ಗ: ಬದಲಾಗುತ್ತಿರುವ ಕಾಲಮಾನಕ್ಕೆ ಅನುಗುಣವಾಗಿ ಸರ್ಕಾರ ಸುಗಮ ಆಡಳಿತಕ್ಕೆ ಅನುಕೂಲವಾಗುವಂತೆ ರೂಪಿಸಿ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳನ್ನು ಹಾಗೂ ಅತ್ಯಾಧುನಿಕ ತಂತ್ರಾಂಶಗಳನ್ನು ಅರಿತು ಅಧಿಕಾರಿಗಳು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

ಎಚ್‌ಆರ್‌ಎಂಎಸ್-2.0 ಹಾಗೂ ಕೆಎಎಸ್‌ಎಸ್ ತಂತ್ರಾಂಶ ಕುರಿತು ಮಂಗಳವಾರ ಸರ್ಕಾರಿ ನೌಕರರಿಗೆ ಏರ್ಪಡಿಸಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಹಿಂದೆ ಬಳಸುತ್ತಿದ್ದ ಎಚ್‌ಆರ್‌ಎಂಎಸ್ ತಂತ್ರಾಂಶವನ್ನು ಬಹಳ ಚೆನ್ನಾಗಿ ವಿನ್ಯಾಸಗೊಳಿಸಲಾಗಿದೆ ಎಂದರು.

ಆರಂಭದಲ್ಲಿ ತಂತ್ರಾಂಶ ಬಳಕೆ ಹಾಗೂ ದಾಖಲೆಗಳ ನಿರ್ವಹಣೆ ಕಷ್ಟಕರವಾಗಿತ್ತು. ಈಗ ಅದನ್ನು ಇಲಾಖೆಗಳ ಪತ್ರಾಂಕಿತ ಅಧಿಕಾರಿಗಳು ಹಾಗೂ ವಿಷಯ ನಿರ್ವಾಹಕರು ಸರಳವಾಗಿ ಬಳಸಲು ಅನುಕೂಲವಾಗುವಂತೆ ಸರ್ಕಾರಿ ನೌಕರರ ಸಂಘವು ಕಾರ್ಯಾಗಾರ ಆಯೋಜಿಸಿರುವುದು ಅತ್ಯಂತ ಉಪಯುಕ್ತ ಈ ತಂತ್ರಾಂಶ ಅರಿತು ಅಳವಡಿಸಿಕೊಂಡಲ್ಲಿ ಆಡಳಿತ ವ್ಯವಸ್ಥೆ ಸುಗಮವಾಗಲಿದೆ ಎಂದು ಹೇಳಿದರು.

ಎಚ್‌ಆರ್‌ಎಂಎಸ್ ತಂತ್ರಾಂಶ-2.0ಯನ್ನು ವಿಷಯ ನಿರ್ವಾಹಕರು ಸರಳವಾಗಿ ಅರಿತು ನಿರ್ವಹಿಸಲು ಅನುಕೂಲವಾಗುವಂತೆ ರೂಪಿಸಲಾಗಿದೆ. ಅದರಲ್ಲಿ ನೌಕರರ ಎಲ್ಲ ದಾಖಲೆಗಳನ್ನು ನಿರ್ವಹಿಸಲು ಹಾಗೂ ದಾಖಲಿಸಲು ವಿಶೇಷ ಗಮನಹರಿಸಲಾಗಿದೆ. ಈ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಅಕ್ಟೋಬರ್ ಅಂತ್ಯದವರೆಗೆ ನಡೆಯಲಿದೆ. ನಂತರ ಎಲ್ಲರೂ ತಂತ್ರಾಂಶವನ್ನು ಸರಳವಾಗಿ ಬಳಸಿಕೊಳ್ಳಬಹುದು ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ತಂತ್ರಾಂಶ ಬಳಕೆ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘವು ಇದೇ ಮೊದಲ ಬಾರಿಗೆ ಶಿವಮೊಗ್ಗ ಜಿಲ್ಲೆಯಲ್ಲಿ ನೌಕರರಿಗಾಗಿ ಕಾರ್ಯಾಗಾರವನ್ನು ಆಯೋಜಿಸಿದೆ. ಇದಕ್ಕೆ ನೌಕರರ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದರು.

ನೌಕರರ ದಾಖಲೆಗಳನ್ನು ನಿರ್ವಹಿಸಲು ಹಾಗೂ ವ್ಯವಸ್ಥಿತವಾಗಿ ದಾಖಲಿಸುವಲ್ಲಿ ಉಂಟಾಗುತ್ತಿದ್ದ ಸಮಸ್ಯೆಗೆ ಮುಕ್ತಿ ಸಿಕ್ಕಿ ಈ ತಂತ್ರಾಂಶದ ಬಳಕೆಯಿಂದ ಸುಧಾರಣೆ ಕಾಣಬಹುದು. ಉಪನ್ಯಾಸ, ಚರ್ಚೆ, ಸಂವಾದ ಮತ್ತು ಪ್ರಾತ್ಯಕ್ಷಿಕೆಗಳ ಮೂಲಕ ನಡೆಯುವ ತರಬೇತಿ ಕಾರ್ಯಾಗಾರ ಉಪಯುಕ್ತವಾಗಿದೆ. ಅದಕ್ಕಾಗಿ ವಿಷಯಾಧಾರಿತ ಸಂಪನ್ಮೂಲ ವ್ಯಕ್ತಿಗಳೇ ಮಾಹಿತಿ ನೀಡುತ್ತಿರುವುದು ವಿಶೇಷ ಎಂದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಸಂಪನ್ಮೂಲ ವ್ಯಕ್ತಿಗಳಾಗಿದ್ದ ಯೋಜನಾಧಿಕಾರಿ ನಿರ್ಮಲಾ, ತಾಂತ್ರಿಕ ತರಬೇತುದಾರ ಸುಮಂತ್ ಮತ್ತು ಯೋಜನಾಧಿಕಾರಿ ಸುಧಾರಾಣಿ, ನೌಕರರ ಸಂಘದ ಗೌರವಾಧ್ಯಕ್ಷ ಆರ್.ಪಾಪಣ್ಣ, ರಾಜ್ಯ ಪರಿಷತ್ ಸದಸ್ಯ ಎನ್.ಎಂ.ರಂಗನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net