ಸೊಸೈಟಿಗಳ ಠೇವಣಿ ಟೋಪಿ; ಇಟ್ಟ ಹಣಕ್ಕಿಲ್ಲ ಗ್ಯಾರಂಟಿ: ರಾಜ್ಯದ 2460 ಸಂಸ್ಥೆಗಳು ಬಂದ್, 3509 ದಿವಾಳಿ

Front
Published on

| ಹರೀಶ್ ಬೇಲೂರು ಬೆಂಗಳೂರು

ಮಗಳ ಮದುವೆಗೋ, ಮಗನ ವಿದ್ಯಾಭ್ಯಾಸಕ್ಕೋ ಅಥವಾ ಹೊಸ ಮನೆ ಕಟ್ಟಲೆಂದೋ ದುಡಿದಿಟ್ಟಿದ್ದ ಹಣವನ್ನೆಲ್ಲ ‘ಠೇವಣಿ’ ಇರಿಸಿದ ಬ್ಯಾಂಕೇ ದಿವಾಳಿಯಾದರೆ ಹಣ ಕಟ್ಟಿದವರ ಪರಿಸ್ಥಿತಿ ಏನಾಗಬೇಡ? ರಾಜ್ಯದಲ್ಲಿ ಕೋ-ಆಪರೇಟಿವ್ ಸೊಸೈಟಿಗಳ ಸಾಲುಸಾಲು ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿರುವ ಪರಿಣಾಮ ಗ್ರಾಹಕರ ದುಡ್ಡಿಗೆ ಗ್ಯಾರಂಟಿ ಇಲ್ಲದಾಗಿದೆ. ಸಹಕಾರಿ ರಂಗ, ರೈತರಿಗೆ ಜೀವಾಳವಾಗಬೇಕಿದ್ದ 3,509 ಸಹಕಾರಿ ಸೊಸೈಟಿಗಳು ದಿವಾಳಿಯಾಗಿವೆ. ಇದರಿಂದಾಗಿ ಲಕ್ಷಾಂತರ ಠೇವಣಿದಾರರು ಅತಂತ್ರವಾಗಿದ್ದಾರೆ.

ರಾಜ್ಯದಲ್ಲಿ ವಿವಿಧ ಬಗೆಯ ಕೋ-ಆಪರೇಟಿವ್ ಸೊಸೈಟಿ ಮತ್ತು ಸಹಕಾರ ಸಂಘಗಳು ಸೇರಿ 45,088 ಸೊಸೈಟಿಗಳಿವೆ. ಇದರಲ್ಲಿ 37,532 ಕಾರ್ಯನಿರ್ವಹಿಸುತ್ತಿವೆ. 2,460 ಸೊಸೈಟಿಗಳು ನಷ್ಟದ ಹೊಡೆತಕ್ಕೆ ಸಿಲುಕಿ ಸಂಪೂರ್ಣವಾಗಿ ನಿಷ್ಕ್ರಿಯವಾಗಿವೆ. ಅತಿ ಹೆಚ್ಚು ಸಾಲ ಪಡೆದು ಬಾಕಿ ಉಳಿಸಿಕೊಂಡಿರುವವರ ಪೈಕಿ ಆಡಳಿತ ಮಂಡಳಿಯ ಸದಸ್ಯರು ಮತ್ತು ಅವರ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಕ್ರಮವಾಗಿ ಸಂಬಂಧಿಕರಿಗೆ ಮತ್ತು ಕುಟುಂಬದ ಸದಸ್ಯರಿಗೆ ಹೆಚ್ಚಾಗಿ ಸಾಲ ನೀಡಲಾಗಿದೆ. ಈ ಸಾಲಗಾರರು ಸಾಲ ಮರುಪಾವತಿಸದೆ ಒಂದಿಲ್ಲೊಂದು ಕುಂಟುನೆಪ ಹೇಳಿ ನುಣುಚಿಕೊಳ್ಳುತ್ತಿರುವುದು ಸೊಸೈಟಿಗಳ ದಿವಾಳಿಗೆ ಮುಖ್ಯ ಕಾರಣವಾಗಿದೆ.

ಲೆಕ್ಕ ಪರಿಶೋಧನೆ ಆಗಿಲ್ಲ: 18 ಬಹು-ರಾಜ್ಯ ಮಟ್ಟದ ಸೊಸೈಟಿ, 270 ರಾಜ್ಯ ಮಟ್ಟದ ಸೊಸೈಟಿ, 602 ಜಿಲ್ಲಾ ಮಟ್ಟ ಮೀರಿ ರಾಜ್ಯ ಮಟ್ಟದ ಒಳಗಿರುವ ಸೊಸೈಟಿ, 643 ಜಿಲ್ಲಾ ಮಟ್ಟದ ಸೊಸೈಟಿ, 1,317 ತಾಲ್ಲೂಕು ಮಟ್ಟ ಮೀರಿ ಜಿಲ್ಲಾ ಮಟ್ಟ ಒಳಗಿರುವ ಸೊಸೈಟಿ, 2,900 ತಾಲೂಕು ಮಟ್ಟದ ಸೊಸೈಟಿ ಹಾಗೂ 36,801 ತಾಲೂಕು ಮಟ್ಟಕ್ಕಿಂತ ಕಡಿಮೆ ಇರುವ ಸೊಸೈಟಿ ಸೇರಿ ಒಟ್ಟು 42,551 ಸೊಸೈಟಿಗಳಿವೆ. ಇದರಲ್ಲಿ 25,272 ‘ಎ’ ವರ್ಗೀಕರಣ, 11,496 ‘ಬಿ’ ವರ್ಗೀಕರಣ, 20,603 ‘ಸಿ’ ವರ್ಗೀ ಕರಣ ಹಾಗೂ 3,609 ‘ಡಿ’ ವರ್ಗೀಕರಣಗಳಾಗಿ ವಿಂಗಡಿಸಲಾಗಿದೆ. ಜತೆಗೆ, 4,235 ‘ಎನ್’ ವರ್ಗೀಕರಣದಲ್ಲಿ ಲೆಕ್ಕ ಪರಿಶೋಧನೆಯಾಗದೆ ಉಳಿದಿರುವ ಸೊಸೈಟಿಗಳಿವೆ ಎಂದು ಸಹಕಾರ ಇಲಾಖೆ ನೀಡಿರುವ ಅಂಕಿ ಅಂಶಗಳಲ್ಲಿ ತಿಳಿದುಬಂದಿದೆ.

ನವೀಕರಣ ಇಲ್ಲ: ಸಹಕಾರ ಇಲಾಖೆ ನಿಯಮದಂತೆ ಪ್ರತಿ ವರ್ಷ ಸಹಕಾರ ಸಂಘ ಹಾಗೂ ಸೊಸೈಟಿಗಳ ನೋಂದಣಿ ಕಡ್ಡಾಯ. ಆದರೆ, ಸಾವಿರಾರು ಸೊಸೈಟಿಗಳು ನವೀಕರಣ ಮಾಡಿಸಿಕೊಂಡಿಲ್ಲ. ಇದರಿಂದ ಶುಲ್ಕವಾಗಿ ಬರಬೇಕಿದ್ದ ನೂರಾರು ಕೋಟಿ ರೂ. ಆದಾಯ ಖೋತಾ ಆಗಿದೆ.

ಯಾವ್ಯಾವ ವರ್ಗಕ್ಕೆ ಸೇರಿವೆ?

  • 607 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ
  • 5,918 ಮಹಿಳಾ ಸೊಸೈಟಿ
  • 315 ಸೊಸೈಟಿ ಪರಿಶಿಷ್ಟ ಜಾತಿ
  • 148 ಸೊಸೈಟಿ ಪರಿಶಿಷ್ಟ ಪಂಗಡ
  • 518 ಸೊಸೈಟಿ ಅಲ್ಪಸಂಖ್ಯಾತ
  • 35,045 ಸೊಸೈಟಿ ಸಾಮಾನ್ಯ ವರ್ಗ

50 ವಿವಿಧ ಬಗೆಯ ಸಂಘಗಳು: 15 ಬಹುರಾಜ್ಯಮಟ್ಟದ ಸಹಕಾರ ಸಂಘ, 44 ಸಹಕಾರ ಮಹಾ ಮಂಡಳ, 21 ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, 180 ಗ್ರಾಮೀಣ ಬ್ಯಾಂಕ್, 5844 ಕೃಷಿ ಪತ್ತಿನ ಸಹಕಾರ ಬ್ಯಾಂಕ್, 25 ಲ್ಯಾಂಪ್ಸ್ ಸಹಕಾರ ಬ್ಯಾಂಕ್, 43 ರೇಷ್ಮೆ ಬೆಳೆಗಾರರ ಬ್ಯಾಂಕ್, 105 ಸಹಕಾರ ಗ್ರೇನ್ ಬ್ಯಾಂಕ್, 284 ಪಟ್ಟಣ ಸಹಕಾರ ಬ್ಯಾಂಕ್, 3554 ಪತ್ತಿನ ಸಹಕಾರ ಬ್ಯಾಂಕ್, 1258 ನೌಕರರ ಪತ್ತಿನ ಬ್ಯಾಂಕ್, 243 ಟಿಎಪಿಸಿಎಂಎಸ್, 106 ಮಾರಾಟ ಸಹಕಾರ ಬ್ಯಾಂಕ್, 37 ಸಹಕಾರಿ ಸಕ್ಕರೆ ಕಾರ್ಖಾನೆ, 156 ಸಂಸ್ಕರಣ ಸಹಕಾರ ಸಂಘ, 16 ಸಹಕಾರಿ ನೂಲಿನ ಗಿರಣಿ ಸೇರಿ 50 ವಿವಿಧ ಬಗೆಯ ಸಂಘಗಳಿವೆ.

ಸೊಸೈಟಿಗಳ ಪೂರ್ವಾಪರ

  • 39,119 ಸೊಸೈಟಿ ಕಾರ್ಯನಿರ್ವಹಣೆ
  • 256 ಕೋಟಿ ರೂ. ಸರ್ಕಾರದ್ದು ಮತ್ತು 6046 ಕೋಟಿ ರೂ. ಸದಸ್ಯರಿಂದ ಸೇರಿ 6,302 ಕೋಟಿ ರೂ. ಷೇರು ಬಂಡವಾಳ
  • 2.44 ಕೋಟಿ ಸದಸ್ಯರು
  • 1,36,786 ಕೋಟಿ ರೂ. ದುಡಿಯುವ ಬಂಡವಾಳ
  • 77,680 ಕೋಟಿ ರೂ. ಠೇವಣಿ
  • 26,040 ಲಾಭದಲ್ಲಿರುವ ಸೊಸೈಟಿಗಳು
  • 14,420 ನಷ್ಟದಲ್ಲಿರುವ ಸೊಸೈಟಿಗಳು
  • 4,628 ಲಾಭ ಅಥವಾ ನಷ್ಟ ಇಲ್ಲದಿರುವ ಸೊಸೈಟಿಗಳು

ಠೇವಣಿಗೆ ಮುನ್ನ ಗಮನಿಸಿ

  • ಸೊಸೈಟಿಗಳ ಬಗ್ಗೆ ಸಮರ್ಪಕವಾಗಿ ಮಾಹಿತಿ ಸಂಗ್ರಹಿಸಬೇಕು, ಬ್ಯಾಂಕಿನಲ್ಲಿ ಇಟ್ಟಿರುವ ಹಣ ಸುರಕ್ಷಿತವಾಗಿದೆಯೇ? ಬ್ಯಾಂಕಿನಲ್ಲಿ ಏನಾದರೂ ಅಕ್ರಮ ಆಗಿದೆಯೇ?
  • ಎಷ್ಟು ವರ್ಷಗಳಿಂದ ಆ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ, ವ್ಯವಹಾರ ಹೇಗಿದೆ?
  • ಆಡಳಿತ ಮಂಡಳಿ ಸದಸ್ಯರು ಯಾರು, ಬ್ಯಾಂಕಿನ ಸೌಲಭ್ಯಗಳೇನು? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ವ್ಯಾಪ್ತಿಗೆ ಬ್ಯಾಂಕ್ ಬರುತ್ತದೆಯೇ ಅಥವಾ ಸಹಕಾರ ಇಲಾಖೆ ವ್ಯಾಪ್ತಿಗೋ ಇತ್ಯಾದಿ ಮಾಹಿತಿ ಸಂಗ್ರಹಿಸಬೇಕು.
  • ಏನೂ ವಿಚಾರಿಸದೆ ಬಡ್ಡಿ ಆಸೆಗಾಗಿ ಠೇವಣಿ ಇಟ್ಟರೆ ಭವಿಷ್ಯದಲ್ಲಿ ಆ ಹಣವನ್ನು ಕಳೆದುಕೊಳ್ಳಬೇಕಾಗಬಹುದು.

ನಷ್ಟ, ನಿಷ್ಕ್ರಿಯಕ್ಕೆ ಕಾರಣ

  • ಸಮರ್ಪಕವಾಗಿ ನಿರ್ವಹಣೆ ಮಾಡದಿರುವುದು
  • ಖಾತೆದಾರರ ಹಣ ದುರ್ಬಳಕೆ
  • ಅಧಿಕ ಲಾಭದ ಆಸೆಗೆ ಬೇರೆ ಕಡೆಗಳಲ್ಲಿ ಠೇವಣಿ ಇಡುವುದು
  • ತಮಗೆ ಬೇಕಾದವರಿಗೆ ಬೇಕಾಬಿಟ್ಟಿ ಸಾಲ ನೀಡುವುದು
  • ಸಾಲ ಪಡೆದವರು ಕಂತು ಕಟ್ಟದಿರುವುದು
  • ನಕಲಿ ದಾಖಲೆ ಪಡೆದು ಸಾಲ ನೀಡಿಕೆ
  • ಆಸ್ತಿ ಮೌಲ್ಯಕಿಂತ ಹೆಚ್ಚಿನ ಸಾಲ ನೀಡಿಕೆ
  • ಸಾಲ ವಸೂಲಾತಿಗೆ ವಿಫಲ
  • ಸರ್ಕಾರದ ಸಬ್ಸಿಡಿ ಇನ್ನಿತರ ಯೋಜನೆ ಬಳಸಿಕೊಳ್ಳದಿರುವುದು 
  • ಚಿನ್ನ ಡೆಯದೆಯೇ ಚಿನ್ನದ ಮೇಲಿನ ಸಾಲ ನೀಡುವುದು
  • ಸೊಸೈಟಿಗಳ ಆಡಳಿತ ಮಂಡಳಿ ಸದಸ್ಯರ ದುಂದುವೆಚ್ಚ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net