ಸಹಕಾರಿ ಸಂಘಗಳ ಸಮಾಜಮುಖಿ ಕಾರ್ಯ ಮಾದರಿ

Housing Cooperative Society
ಶಿವಮೊಗ್ಗದಲ್ಲಿ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರ ಸಂಘದ ಸರ್ವಸದಸ್ಯರ ಮಹಾಸಭೆಯನ್ನು ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಉದ್ಘಾಟಿಸಿದರು. ಸಿ.ಎಸ್.ಷಡಾಕ್ಷರಿ, ಎಸ್.ಕೆ.ಮರಿಯಪ್ಪ, ಎಚ್.ಎಸ್.ಸುಂದರೇಶ್, ಕೆ.ಮಾಯಣ್ಣಗೌಡ, ವಿಶ್ವನಾಥ ಮುದ್ದಜ್ಜಿ, ನಾಗಭೂಷಣ ಚಂದ್ರಶೇಖರ ಕಲ್ಮನೆ, ಆರ್.ಮೋಹನ್‌ಕುಮಾರ್ ಇದ್ದರು.
Published on

ಶಿವಮೊಗ್ಗ: ಸರ್ಕಾರದ ಯಾವುದೇ ನೆರವಿಲ್ಲದೆ, ಸರ್ಕಾರಗಳು ಮಾಡದಿರುವ ಸಮಾಜಮುಖಿ ಕಾರ್ಯವನ್ನು ಸಹಕಾರ ಸಂಘಗಳು ಮಾಡುತ್ತಿರುವುದು ಮಾದರಿ ಕಾರ್ಯ ಎಂದು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಹೇಳಿದರು.

ನಗರದ ದ್ವಾರಕಾ ಕನ್ವೆನ್ಶನ್‌ಹಾಲ್‌ನಲ್ಲಿ ಭಾನುವರ ರಾಜ್ಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ಮತ್ತು ರಾಜ್ಯ ಸರ್ಕಾರಿ ನೌಕರರ ಸೌಹಾರ್ಧ ಸಹಕಾರ ಸಂಘದ ಸರ್ವಸದಸ್ಯರ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಯಾವುದೇ ಸಹಕಾರ ಸಂಘಗಳು ಜಾತಿ, ಪಕ್ಷ ಮತ್ತು ಲಿಂಗಭೇದ ಮರೆತು ಕಾರ್ಯನಿರ್ವಹಿಸುವಂತಾಗಬೇಕು. ಯಾವುದೇ ಸಹಕಾರಿ ಸಂಸ್ಥೆ ನಾಯಕನ ವ್ಯಕ್ತಿತ್ವದ ಮೇಲೆ ಅವಲಂಬಿತವಾಗಿರುತ್ತವೆ ಎಂದರು. ಸೌಹಾರ್ದ ಸಹಕಾರ ಸಂಘದಲ್ಲಿ 3600 ಮತ್ತು ಗೃಹ ನಿರ್ಮಾಣ ಸಹಕಾರ ಸಂಘದಲ್ಲಿ 4800ಕ್ಕೂ ಹೆಚ್ಚಿನ ಜನ ಸದಸ್ಯತ್ವ ಪಡೆದಿರುವುದು ಹಾಗೂ ಈವರಗೆ ಗೃಹನಿರ್ಮಾಣ ಸಹಕಾರ ಸಂಘದಿಂದ 175 ಎಕರೆ ಪ್ರದೇಶದಲ್ಲಿ ಬಡಾವಣೆ ನಿರ್ಮಿಸಿ, ನಿವೇಶನ ವಿತರಿಸಿರುವುದು ಅತ್ಯಂತ ಪ್ರಶಂಸನಾರ್ಹ ಸಂಗತಿ. ಇದರಿಂದ ಪ್ರತಿ ವ್ಯಕ್ತಿಯೂ ಚಿಕ್ಕದಾದರೂ ತನ್ನ ಕನಸಿನ ಮನೆ ನಿರ್ಮಿಸಿಕೊಂಡು ನೆಮ್ಮದಿ ಜೀವನ ನಡೆಸಬಹುದಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಹಾಗೂ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ರಾಜ್ಯದ ಸಹಕಾರಿ ಕ್ಷೇತ್ರದಲ್ಲಿ ನೌಕರರ ಸಂಘದಿಂದ ಸ್ಥಾಪಿಸಿರುವ ಎರಡೂ ಸಂಘಗಳು ಎ ಶ್ರೇಣಿಯಲ್ಲಿ ಗುರುತಿಸಿಕೊಳ್ಳುವ ಸ್ಥಾನಮಾನ ಹೊಂದಿರುವುದು ಹೆಮ್ಮೆಯ ಸಂಗತಿ ಎಂದರು. 11 ವರ್ಷಗಳ ಅವಧಿಯಲ್ಲಿ ಸಂಘಟನೆಗೆ ಸಣ್ಣ ಕಪ್ಪುಚುಕ್ಕೆಯೂ ಬಾರದಂತೆ ನಡೆಸಿಕೊಂಡು ಬರಲಾಗಿದೆ. ಪ್ರಸಕ್ತ ಅವಧಿಯಲ್ಲಿ ಸಂಘವು ಸುಮಾರು 1.50 ಕೋಟಿ ರೂ. ಲಾಭ ಗಳಿಸಿರುವುದು ಸಂತಸದ ವಿಷಯವಾಗಿದೆ. ಇಂತಹ ಸಂಘಟನೆಯನ್ನು ಆರಂಭದ ಹಂತದಲ್ಲಿ ರಾಜ್ಯದ ನೆರೆಯ ಜಿಲ್ಲೆಗಳಿಗೆ ನಂತರ ರಾಜ್ಯದ ಉದ್ದಗಲಕ್ಕೆ ವಿಸ್ತರಿಸುವ ಉದ್ಧೇಶ ಹೊಂದಲಾಗಿದೆ ಎಂದರು. ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ, ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಸಹಕಾರ ಸಂಘಗಳ ಉಪನಿಬಂಧಕ ನಾಗಭೂಷಣ ಚಂದ್ರಶೇಖರ ಕಲ್ಮನೆ, ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ಆರ್.ಪಾಪಣ್ಣ, ಎನ್.ಎಂ.ರಂಗನಾಥ್, ನರಸಿಂಹಮೂರ್ತಿ, ದಿನೇಶ್, ಪ್ರಸನ್ನ, ಸುರೇಶ್, ಕೃಷ್ಣಮೂರ್ತಿ, ಸಿದ್ಧಬಸಪ್ಪ ಮತ್ತಿತರರು ಉಪಸ್ಥಿತರಿದ್ದರು.

ಗೃಹ ನಿರ್ಮಾಣ ಸಹಕಾರ ಸಂಘದಿಂದ ಈವರೆಗೆ ಸುಮಾರು 2500ಕ್ಕೂ ಹೆಚ್ಚಿನ ನೌಕರರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ನಿವೇಶನ ವಿತರಿಸಲಾಗಿದೆ. ಈಗಾಗಲೇ 110 ಎಕರೆ ಭೂಪ್ರದೇಶದಲ್ಲಿ ಗುಣಮಟ್ಟದ ಕಾಮಗಾರಿಗಳೊಂದಿಗೆ ಕಾನೂನುಬದ್ದವಾಗಿ ಸೃಜಿಸಲಾಗಿರುವ 1500 ನಿವೇಶನಗಳನ್ನು ಶೀಘ್ರದಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗುವುದು. ಸಂಘಟನೆಯು ನೌಕರರ ನೆಮ್ಮದಿಯ ಬದುಕಿಗೆ ಆಸರೆಯಾಗಿದೆ. -ಸಿ.ಎಸ್.ಷಡಾಕ್ಷರಿ, ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net