

Social Media Ban: ಸಾಮಾಜಿಕ ಜಾಲತಾಣದ ಮೇಲೆ ನಿಷೇಧ ಹೇರಿದ ನೇಪಾಳ ಸರ್ಕಾರದ ವಿರುದ್ಧ ಬೀದಿಗಿಳಿದಿರುವ ಸಾವಿರಾರು ಯುವಜನತೆ, ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಸರ್ಕಾರದ ಬ್ಯಾನ್ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತಿರುವ ನೇಪಾಳದಲ್ಲಿ ಹಿಂಸಾತ್ಮಕ ಪ್ರತಿಭಟನೆ ಭುಗಿಲೆದ್ದಿದೆ. ಘಟನೆಯಲ್ಲಿ ಒಟ್ಟು 19 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡ ಬೆನ್ನಲ್ಲೇ ನೇಪಾಳ ಗೃಹಸಚಿವ ರಮೇಶ್ ಲೇಖಕ್ ರಾಜಿನಾಮೆ ನೀಡಿದ್ದಾರೆ.
"ಬಲುವತಾರ್‌ನಲ್ಲಿರುವ ಪ್ರಧಾನಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಂಪುಟ ಸಭೆಯಲ್ಲಿ ನೇಪಾಳ ಗೃಹ ಸಚಿವ ರಮೇಶ್ ಲೇಖಕ್ ಅವರು ತಮ್ಮ ರಾಜೀನಾಮೆಯನ್ನು ಪ್ರಧಾನಿಗೆ ಸಲ್ಲಿಸಿದ್ದಾರೆ" ಎಂದು ಎಎನ್‌ಐ ವರದಿ ಮಾಡಿದೆ.
ನೇಪಾಳಿ ಕಾಂಗ್ರೆಸ್ ಪಕ್ಷದ ಸದಸ್ಯರಾಗಿರುವ 61 ವರ್ಷದ ಲೇಖಕ್, 1999, 2008 ಮತ್ತು 2013 ರ ಚುನಾವಣೆಗಳಲ್ಲಿ ಪ್ರತಿನಿಧಿ ಸಭೆಗೆ ಆಯ್ಕೆಯಾದರು. ಅವರು ನೇಪಾಳದ ಭೌತಿಕ ಮೂಲಸೌಕರ್ಯ ಮತ್ತು ಸಾರಿಗೆ ಸಚಿವ ಸ್ಥಾನವನ್ನು ಸಹ ಅಲಂಕರಿಸಿದ್ದಾರೆ. 2022 ರ ನೇಪಾಳದ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಚನಪುರ-3 ಕ್ಷೇತ್ರವನ್ನು ಪ್ರತಿನಿಧಿಸುವ ಮೂಲಕ ಅವರು ನೇಪಾಳದ 2 ನೇ ಫೆಡರಲ್ ಸಂಸತ್ತಿಗೆ ಆಯ್ಕೆಯಾದರು.(ಏಜೆನ್ಸೀಸ್)