

ಶಿವಮೊಗ್ಗ: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಅಸಮರ್ಪಕವಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ರೂ. ನಷ್ಟವಾಗಿದೆ ಎಂದು ನರೇಂದ್ರಮೋದಿ ವಿಚಾರಮಂಚ್‌ನ ರಾಷ್ಟ್ರೀಯ ಉಪಾಧ್ಯಕ್ಷ ಬಳ್ಳೇಕೆರೆ ಸಂತೋಷ್ ದೂರಿದರು.
ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಡಿಸಿಎಂ ಸೇರಿದಂತೆ ಅನೇಕರು ಇದಕ್ಕೆ ಅಪಸ್ವರ ವ್ಯಕ್ತಡಿಸಿದ್ದಾರೆ. ಸಿಎಂ ಸೇರಿದಂತೆ ಕೆಲ ಸಚಿವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ಸರ್ಕಾರದಲ್ಲೇ ಎರಡು ಬಣಗಳಿರುವಂತೆ ಕಾಣುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರದಲ್ಲಿ ಎರಡು ಬಣಗಳ ಗೊಂದಲದಿಂದ ಗಣತಿಕಾರ್ಯ ಸಂಪೂರ್ಣ ಹಳಿತಪ್ಪಿದೆ. ಸಮೀಕ್ಷೆಗೆ ವಿರೋಧವಿಲ್ಲ. ಆದರೆ ಪೂರ್ವ ತಯಾರಿ ಇಲ್ಲದೆ, ಸಮೀಕ್ಷಾದಾರರಿಗೆ ಸೂಕ್ತ ತರಬೇತಿ ನೀಡದೆ ಸಮೀಕ್ಷೆ ಆರಂಭಿಸಿ ಎಲ್ಲವನ್ನೂ ಗೊಂದಲಮಯವಾಗಿ ಮಾಡಲಾಗಿದೆ. ಸಮೀಕ್ಷೆಯಿಂದ ಯಾವ ಪ್ರಯೋಜನವೂ ಆಗುವುದಿಲ್ಲ. ಸುಮಾರು 420 ಕೋಟಿ ರೂ. ತೆರಿಗೆ ಹಣ ಪೋಲಾಗುತ್ತದೆ ಅಷ್ಟೇ ಎಂದು ಕಿಡಿಕಾರಿದರು.
ಸಮೀಕ್ಷೆ ಅವಧಿಯಲ್ಲಿ ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಆಗಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ. ಇನ್ನು ಮುಂದೆ ಯಾವುದೇ ಸಮೀಕ್ಷೆ ಮಾಡುವಾಗ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಗಣತಿದಾರರಿಗೆ ವಿಶೇಷ ತರಬೇತಿ ನೀಡಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಗಣತಿ ಮಾಡುವ ಮುನ್ನ ಸರ್ವಪಕ್ಷಗಳ ಸಭೆ ಕರೆದು ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು. ಪ್ರಮಖರಾದ ನವೀನ್ ವಾರದ್, ಜಾವೀದ್, ರಮೇಶ್ ಸುದ್ದಿಗೋಷ್ಠಿಯಲ್ಲಿದ್ದರು.