

ಸೊರಬ: ತಾಲೂಕಿನ ಮೂಡದೀವಳಿಗೆ ಗ್ರಾಮದ ಮಂಜಪ್ಪ ಅವರ ಕುಟುಂಬಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿರುವ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಂಜುಳಾ ಹೆಗಡಾಳ್ ಅವರಿಗೆ ಕುಟುಂಬದವರು ಬುಧವಾರ ಮನವಿ ಸಲ್ಲಿಸಿದರು.
ನಮ್ಮ ಜಮೀನಿನ ಪಕ್ಕದಲ್ಲಿ ಕೃಷಿ ಚಟುವಟಿಕೆಗೆ ದಾರಿ ಬಿಡಲಾಗಿದೆ. ಜಮೀನಿನ ಮಧ್ಯ ಭಾಗದಲ್ಲೇ ದಾರಿ ಬಿಡುವಂತೆ ನಮ್ಮ ಕುಟುಂಬ ಸದಸ್ಯರಿಗೆ ಗ್ರಾಮದ ಕೆಲವರು ಹಲ್ಲೆ ಮಾಡಲು ಯತ್ನಿಸುತ್ತಿದ್ದಾರೆ. ಭತ್ತ ನಾಟಿ ಮಾಡಲು ಹೋದಾಗ ಅಡ್ಡಿಪಡಿಸಿ ದೌರ್ಜನ್ಯ ಮಾಡಿದ್ದಾರೆ. ನಕ್ಷೆಯಲ್ಲಿ ದಾರಿ ಇಲ್ಲದಿದ್ದರೂ ಗ್ರಾಮದ ಜನರು ಓಡಾಡಲು ಜಮೀನಿನ ಪಕ್ಕದಲ್ಲಿ ದಾರಿ ಬಿಟ್ಟುಕೊಟ್ಟಿದ್ದೇವೆ. ಆದರೂ ಸಾಮಾಜಿಕ ಬಹಿಷ್ಕಾರ ಹಾಕಿ ನಮ್ಮನ್ನು ಮಾನಸಿಕ ಹಾಗೂ ದೈಹಿಕವಾಗಿ ಹಿಂಸಿಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಗ್ರಾಮದಲ್ಲಿ ಯಾರನ್ನಾದರೂ ಮಾತನಾಡಿಸಿದರೆ 5 ಸಾವಿರ ರೂ. ದಂಡ ವಿಧಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮಸ್ಥರು ಸಭೆ ಸೇರಿಸಿ ನಮ್ಮ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಈ ಮೂಲಕ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಅವರು ಕೇಳಿದ ಜಾಗದಲ್ಲಿ ದಾರಿ ಬಿಟ್ಟು ಕೊಡಲಿಲ್ಲ ಎಂಬ ಕಾರಣಕ್ಕೆ ಬೆಳೆ, ಪೈಪ್ ಲೈನ್ ಹಾಳು ಮಾಡಿದ್ದಾರೆ ಎಂದು ಕುಟುಂಬದವರು ದೂರಿದ್ದಾರೆ.
ಮನವಿ ಸಲ್ಲಿಸುವ ಸಂದರ್ಭ ಮಂಜಪ್ಪ, ಶಶಿಕುಮಾರ್, ಮುಕುಂದಪ್ಪ, ಗಣೇಶ್ ಇದ್ದರು.