ಬೇಯಿಸಿದ ತರಕಾರಿಗಳಿಂದ ಇಷ್ಟೊಂದು ಪ್ರಯೋಜನಗಳು

-6820ddad571bf (1)
Published on
ತರಕಾರಿಗಳು ನಮ್ಮ ಊಟದ ದೊಡ್ಡ ಪಾಲನ್ನು ಹೊಂದಿರಬೇಕು; ಏಕೆಂದರೆ ಅವುಗಳಿಂದಾಗಿ ನಮಗೆ ಎಷ್ಟೋ ರೀತಿಯ ಪೋಷಕಾಂಶಗಳು ಸಿಗುವುದಲ್ಲದೇ ಇತ್ತೀಚೆಗೆ ಸಾಮಾನ್ಯವಾಗಿರುವ ತುಂಬಾ ರೀತಿಯ ಕಾಯಿಲೆಗಳನ್ನು ಇವು ತಡೆಗಟ್ಟಬಲ್ಲವು. ಆದರೆ ಅವು ಜೀರ್ಣಕ್ಕೆ ಕಷ್ಟಕರವಾಗಿರುವ ಕಾರಣ ತುಂಬಾ ಜನರಿಗೆ ಅವುಗಳನ್ನು ಸೇವಿಸಿದಾಗ ಹೊಟ್ಟೆಯಲ್ಲಿ ಗ್ಯಾಸ್ ತುಂಬಿಕೊಂಡಂತೆನಿಸುವುದು ಅಥವಾ ಅಜೀರ್ಣವಾಗುವ ತೊಂದರೆಗಳು ಕಾಣಿಸಿಕೊಳ್ಳುತ್ತವೆ.

ಹಾಗಾಗಿ ತರಕಾರಿಗಳನ್ನು ಬೇಯಿಸಿ ಸೇವಿಸುವುದು ಅಂಥವರಿಗೆ ಅನುಕೂಲಕರ. ತರಕಾರಿಗಳನ್ನು ಬೇಯಿಸಿದಾಗ ಕೆಲವು ಪೋಷಕಾಂಶಗಳನ್ನು ಕರುಳು ಹೀರಿಕೊಳ್ಳಲು ಹೆಚ್ಚು ಅನುಕೂಲವಾಗುತ್ತದೆ. ಉದಾಹರಣೆಗೆ ಬೇಯಿಸಿದ ಕ್ಯಾರೆಟ್​ನಲ್ಲಿರುವ ಬೀಟಾ-ಕೆರೋಟಿನ್ ಅನ್ನು ನಮ್ಮ ಕರುಳು ತುಂಬಾ ಸುಲಭವಾಗಿ ಹೀರಿಕೊಳ್ಳುತ್ತದೆ. ಹಸಿ ಕ್ಯಾರೆಟ್ ತಿಂದಾಗ ಅದನ್ನು ಹೀರಿಕೊಳ್ಳುವುದು ಅಷ್ಟು ಸುಲಭವಾಗುವುದಿಲ್ಲ. ಇದೇ ಬೀಟಾ-ಕೆರೋಟಿನ್ ಅನ್ನು ನಮ್ಮ ದೇಹವು ವಿಟಮಿನ್ ಆಗಿ ಬದಲಿಸಿಕೊಂಡು ನಮ್ಮ ರೋಗನಿರೋಧಕ ಶಕ್ತಿ, ದೃಷ್ಟಿ ಮತ್ತು ಚರ್ಮದ ಆರೋಗ್ಯ ಹಚ್ಚಿಸಲು ಸಹಾಯ ಮಾಡುತ್ತದೆ. ಟೊಮ್ಯಾಟೋದಲ್ಲಿರುವ ಲೈಕೋಪಿನ್ ಎಂಬ ವಿಶೇಷ ಘಟಕವು ತುಂಬಾ ಅದ್ಭುತವಾದ ಆಂಟಿ-ಆಕ್ಸಿಡೆಂಟ್ ಆಗಿದ್ದು ಟೊಮ್ಯಾಟೋವನ್ನು ಬೇಯಿಸಿದ್ದರೆ ಇದು ದೇಹದ ಒಳಗೆ ಸುಲಭವಾಗಿ ಸೇರುತ್ತದೆ.

ಹಸಿ ತರಕಾರಿಗಳಲ್ಲಿ ಸ್ವಲ್ಪಮಟ್ಟಿಗೆ ಪೋಷಕಾಂಶ-ವಿರೋಧಿ ಅಂಶಗಳು ಇರುತ್ತವೆ. ಇವುಗಳಿಂದಾಗಿ ಕೆಲವು ರೀತಿಯ ಪೋಷಕಾಂಶಗಳನ್ನು ನಮ್ಮ ದೇಹ ಹೀರಿಕೊಳ್ಳುವಲ್ಲಿ ಸಮಸ್ಯೆ ಆಗುತ್ತದೆ. ಆದರೆ ಬೇಯಿಸಿದಾಗ ಅವುಗಳ ಪ್ರಮಾಣ ತುಂಬಾ ಕಡಿಮೆಯಾಗುತ್ತದೆ. ಆಹಾರ ಸೇವಿಸುವಾಗ ಒಂದು ದಿನದಲ್ಲಿ ಕನಿಷ್ಠ ಎರಡು ಬಾರಿ ನಾವು ಬೇಯಿಸಿದ ತರಕಾರಿಗಳನ್ನು ಸೇವಿಸುವುದರಿಂದ ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನಾರಿನಂಶ ಸಿಕ್ಕು ಮಲಬದ್ಧತೆ, ಅಜೀರ್ಣದಂತಹ ತೊಂದರೆಗಳು ಕಡಿಮೆಯಾಗಿ ಕರುಳಿನ ಆರೋಗ್ಯ ಹೆಚ್ಚಲು ಸಹಾಯವಾಗುತ್ತದೆ.

ತುಂಬಾ ಜನರಿಗೆ ತರಕಾರಿಗಳನ್ನು ಬಳಸುವಾಗ ಎಲ್ಲೋ ಒಂದು ಕಡೆ ಭಯ ಕಾಡುತ್ತದೆ - ಅದೇನೆಂದರೆ ತರಕಾರಿಗಳನ್ನು ಬೆಳೆಯುವಾಗ ಹೇರಳವಾಗಿ ಬಳಸುವ ರಾಸಾಯನಿಕಗಳು. ಬಹಳಷ್ಟು ರೀತಿಯ ತರಕಾರಿಗಳನ್ನು ಬೆಳೆಯುವಾಗ ಕೀಟನಾಶಕಗಳನ್ನು ಬಳಸುವುದು ಸತ್ಯವಾದರೂ ಅವುಗಳಿಗೆ ಹೆದರಿ ತರಕಾರಿಗಳನ್ನೇ ಬಿಟ್ಟುಬಿಡುತ್ತೇವೆ ಎನ್ನುವುದು ತಪ್ಪು. ಏಕೆಂದರೆ ನಾವು ಜಂಕ್ ಫುಡ್​ಗಳು, ಸಕ್ಕರೆ ಹಾಕಿದ ಸಿಹಿ ಪದಾರ್ಥಗಳು ಮತ್ತು ಅತಿಯಾಗಿ ಕಾಬೋಹೈಡ್ರೇಟ್​ಗಳನ್ನು (ಏಕದಳ ಧಾನ್ಯಗಳನ್ನು) ಬಳಸಿದಾಗ ಅದನ್ನು ದೇಹವು ಕೊಬ್ಬಾಗಿ ಶೇಖರಿಸಿಕೊಳ್ಳುತ್ತದೆ.

ಇದರಿಂದ ಮುಂದೆ ಹಲವಾರು ರೀತಿಯ ತೊಂದರೆಗಳು ಉಂಟಾಗುತ್ತವೆ. ಜೊತೆಗೆ ಬೇರೆ ಎಲ್ಲಾ ರೀತಿಯ ಆಹಾರ ಪದಾರ್ಥಗಳಲ್ಲಿ ಕೂಡಾ ಹೀಗೆ ರಾಸಾಯನಿಕಗಳ ಬೆರಕೆ ಇದ್ದೇ ಇರುತ್ತದೆ. ಆದರೆ ತರಕಾರಿಗಳನ್ನು ಸೇವಿಸಿದಾಗ ಅದರಲ್ಲಿ ಕ್ರಿಮಿನಾಶಕಗಳು ಇದ್ದರೂ ಬಹಳಷ್ಟು ಮಟ್ಟಿಗೆ ದೇಹ ಅವುಗಳನ್ನು ವಿಷವೆಂದು ಗುರುತಿಸಿ ಹೊರಹಾಕಿಬಿಡುತ್ತದೆ. ಅದರಲ್ಲಿಯೂ ತರಕಾರಿಗಳನ್ನು ಬೇಯಿಸಿದಾಗ ವಿಷದ ಪ್ರಮಾಣ ಸ್ವಲ್ಪ ಮಟ್ಟಿಗಾದರೂ ಕಡಿಮೆಯಾಗುತ್ತದೆ.

ತರಕಾರಿಗಳನ್ನು ಬಳಸುವ ಒಂದರ್ಧ ಗಂಟೆ ಮೊದಲು ಉಪ್ಪು ಮತ್ತು ಅಡುಗೆ ಸೋಡಾ ಹಾಕಿದ ನೀರಿನಲ್ಲಿ ನೆನೆಸಿಡುವುದು ಒಳ್ಳೆಯದು. ವಿಶೇಷವಾಗಿ ಬೊಜ್ಜು, ಮಧುಮೇಹ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ಊಟದಲ್ಲಿ ಕಾಬೋಹೈಡ್ರೇಟ್ ಪ್ರಮಾಣವನ್ನು ಹೆಚ್ಚೆಂದರೆ 35% ಅಷ್ಟು ತೆಗೆದುಕೊಂಡು, ಒಳ್ಳೆಯ ಕೊಬ್ಬು, ನಾರಿನಂಶ, ಪೋ›ಟೀನ್ ಇರುವ ಆಹಾರ ಪದಾರ್ಥಗಳನ್ನು 65% ಅಷ್ಟು ತೆಗೆದುಕೊಂಡರೆ ತುಂಬಾ ದೊಡ್ಡ ಪ್ರಮಾಣದಲ್ಲಿ ಅನುಕೂಲವಾಗುತ್ತದೆ. ನಾರಿನ ಅಂಶ ಸರಿಯಾಗಿ ಸಿಗಬೇಕೆಂದರೆ ತರಕಾರಿಗಳನ್ನು ಹೆಚ್ಚಾಗಿ ಸೇವಿಸುವುದು ಅನುಕೂಲಕರ. ಪ್ರತಿದಿನ ಒಂದೆರಡು ತರಕಾರಿಗಳನ್ನು ಬೇಯಿಸಿ ಪಲ್ಯದ ರೀತಿಯಲ್ಲಿ ಊಟದ ಜೊತೆ ಸೇವಿಸಿದರೆ ಹೊಟ್ಟೆ ಚೆನ್ನಾಗಿ ತುಂಬುತ್ತದೆ. ಆದರೆ ತೂಕ ಅಥವಾ ರಕ್ತದಲ್ಲಿನ ಸಕ್ಕರೆಯ ಅಂಶ ಹೆಚ್ಚಾಗುವುದಿಲ್ಲ.

ನೀರಿನಲ್ಲಿ ಬೇಯಿಸಿದಾಗ ಪೋಷಕಾಂಶಗಳು ನಷ್ಟವಾಗಿ ಹೋಗುವುದಿಲ್ಲವೇ? ಎಂಬುದು ಹಲವರ ಪ್ರಶ್ನೆ. ಒಂದು ಮಟ್ಟಿಗೆ ಇದು ಸರಿ ಎನ್ನಬಹುದು. ನೀರಿನಲ್ಲಿ ಕರಗುವ ವಿಟಮಿನ್​ಗಳಾದ ವಿಟಮಿನ್ ಬಿ, ವಿಟಮಿನ್ ಸಿ ಯಂಥವು ಬೇಯಿಸಿದರೆ ನಷ್ಟವಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಬೇಯಿಸಲು ಹೆಚ್ಚೆಂದರೆ ಎಷ್ಟು ಬೇಕೋ ಅಷ್ಟು ಮಾತ್ರ ನೀರನ್ನು ಹಾಕಬೇಕು. ತುಂಬಾ ಹೊತ್ತು ಬೇಯಿಸುವುದರ ಬದಲು ಸ್ವಲ್ಪ ಕಡಿಮೆ ಹೊತ್ತು ಬೇಯಿಸಿದರೆ ಜೀರ್ಣಕ್ಕೆ ಲಘುವಾಗುವುದಲ್ಲದೇ ಪೋಷಕಾಂಶಗಳು ನಷ್ಟವಾಗುವುದಿಲ್ಲ. ಜೊತೆಗೆ ಬೇಯಿಸಿದ ನಂತರ ಬೇಯಿಸಲು ಬಳಸಿದ ನೀರನ್ನು ಕೂಡಾ ಸೇವಿಸಿದರೆ ಎಲ್ಲಾ ಪೋಷಕಾಂಶಗಳು ಸಿಕ್ಕಂತಾಗುತ್ತದೆ. (ಪ್ರತಿಕ್ರಿಯಿಸಿ: vvsudina@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net