27ಕ್ಕೆ ಸ್ನೇಹಶ್ರೀ ಭರತನಾಟ್ಯ ರಂಗಪ್ರವೇಶ

natyalaya
Published on

ಶಿವಮೊಗ್ಗ: ಸಹಚೇತನ ನಾಟ್ಯಾಲಯದ ಹಿರಿಯ ವಿದ್ಯಾರ್ಥಿನಿ ಎಸ್.ಜಿ.ಸ್ನೇಹಶ್ರೀ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ಜು.27ರ ಸಂಜೆ 5.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಆಯೋಜನೆಗೊಂಡಿದೆ ಎಂದು ನಾಟ್ಯಗುರು ಸಹನಾ ಚೇತನ್ ತಿಳಿಸಿದರು.

ವೇದ ಪಾರಂಗತರಾದ ಕೃಷ್ಣ ಸೋಮಯಾಜಿ ಅವರ ಪುತ್ರ ಎಸ್.ಜಿ.ಗಿರೀಶ್, ಮಾಲಿನಿ ದಂಪತಿಯ ಪುತ್ರಿ ಸ್ನೇಹಶ್ರೀ ಹಲವು ವರ್ಷಗಳಿಂದ ಭರತನಾಟ್ಯ ಅಭ್ಯಾಸ ಮಾಡಿ ಪರಿಣತಿ ಪಡೆದಿದ್ದಾರೆ. ರಂಗಪ್ರವೇಶದ ನಟುವಾಂಗದಲ್ಲಿ ನೃತ್ಯಗುರು ಸಹನಾ ಚೇತನ್ ಇರಲಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಾಡುಗಾರಿಕೆಯಲ್ಲಿ ಬೆಂಗಳೂರಿನ ವಿದ್ವಾನ್ ವಿನಯ್ ರಾಜಮಾನ್ಯ, ಮೃದಂಗದಲ್ಲಿ ಮೈಸೂರಿನ ಶಿವಶಂಕರಸ್ವಾಮಿ, ಕೊಳಲು ವಾದನದಲ್ಲಿ ಮೈಸೂರಿನ ಸಮೃದ್ಧ್ ಶ್ರೀನಿವಾಸನ್ ಸಹಕರಿಸಲಿದ್ದಾರೆ. ಶಿವಕುಮಾರ್ ತೀರ್ಥಹಳ್ಳಿ ಅವರಿಂದ ಬೆಳಕು, ಶಿವಮೊಗ್ಗದ ಮಹೇಶ್ ಆರ್ಟ್ಸ್ ಅವರ ರಂಗಸಜ್ಜಿಕೆ ಇರಲಿದ್ದು, ಡಾ. ನಾಗಮಣಿ ಆನಂದ್‌ರಾಮ್ ಹಾಗೂ ಡಿ.ಆರ್.ರವೀನಾ ನಿರೂಪಣೆ ಮಾಡಲಿದ್ದಾರೆ ಎಂದರು.

ಗುರುವಂದನಾ ಕಾರ್ಯಕ್ರಮವನ್ನು ಮೈಸೂರಿನ ನೃತ್ಯಾಲಯ ಟ್ರಸ್ಟ್ ಸಂಸ್ಥಾಪಕ ಡಾ. ತುಳಸೀ ರಾಮಚಂದ್ರ ಉದ್ಘಾಟಿಸುವರು. ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಹಚೇತನ ನಾಟ್ಯಾಲಯದ ಗೌರವಾಧ್ಯಕ್ಷ ಎಸ್.ಎನ್.ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.

ಪ್ರಮುಖರಾದ ಚೇತನ್, ಎಸ್.ಜಿ.ಗಿರೀಶ್, ಮಾಲಿನಿ ಗಿರೀಶ್, ಡಾ. ನಾಗಮಣಿ, ಆನಂದ್‌ರಾಮ್, ಸಿಂಧುಶ್ರೀ ಅಡಿಗ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net