

ಮೈಸೂರು: ಮುಡಾ ಬದಲಿ ನಿವೇಶನ ಹಂಚಿಕೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಕ್ಕೆ (Muda Scam) ಸಂಬಂಧಿಸಿದಂತೆ ಸಿಬಿಐ ತನಿಖೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದ್ದು, ಸಿಎಂಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇನ್ನೂ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಲು ದೂರುದಾರ ಸ್ನೇಹಮಯಿ ನಿರ್ಧರಿಸಿದ್ದು, ಈ ಬಗ್ಗೆ ಮಾತನಾಡಿದ್ದಾರೆ.
ಮೈಸೂರಿನಲ್ಲಿ ಈ ಬಗ್ಗೆ ಮಾತನಾಡಿದ ದೂರುದಾರ ಸ್ನೇಹಮಯಿ ಕೃಷ್ಣ, ಹೈಕೋರ್ಟ್ನಲ್ಲಿ ನಮಗೆ ಹಿನ್ನಡೆಯಾಗಿದೆ. ಹಾಗಂತ ನನ್ನ ಹೋರಾಟ ನಿಲ್ಲಿಸುವುದಿಲ್ಲ. ಕಾನೂನು ಪ್ರಕಾರವಾಗಿ ನನ್ನ ಹೋರಾಟ ಮುಂದುವರೆಯಲಿದೆ. ಹೈಕೋರ್ಟ್ ಆದೇಶವನ್ನು ಕೂಲಂಕುಷವಾಗಿ ಪರಿಶೀಲಿಸುತ್ತೇನೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ.
ಮುಡಾದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಲ್ಲಿ ಅಕ್ರಮವಾಗಿ 14 ನಿವೇಶನಗಳನ್ನು ಪಡೆದಿರುವುದು ನಿಜ. ಸಿದ್ದರಾಮಯ್ಯನವರು ಸಿಎಂ ಆಗಿರುವುದರಿಂದ ಲೋಕಾಯುಕ್ತ ತನಿಖೆ ಮೇಲೆ ಪ್ರಭಾವ ಬೀರಿರುವ ಸಾಧ್ಯತೆ ಇದೆ. ಹಾಗಾಗಿ ಸಿಬಿಐ ತನಿಖೆಗೆ ಕೋರಿದ್ದೇನೆ. ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸುತ್ತೇನೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ತಿಳಿಸಿದ್ಧಾರೆ.
ಲೇಔಟ್ ನಿರ್ಮಾಣಕ್ಕಾಗಿ ಕೆಸರೆ ಗ್ರಾಮದ 462ನೇ ಸರ್ವೇ ನಂಬರ್ನಲ್ಲಿರುವ 3 ಎಕರೆ 16 ಗುಂಟೆ ಜಾಗವನ್ನು ಮುಡಾ ತನ್ನ ಸುಪರ್ದಿಗೆ ತಗೆದುಕೊಂಡಿತ್ತು. ಆದರೆ, ಸ್ವಾಧೀನಪಡಿಸಿಕೊಳ್ಳುವಾಗ ತಮಗೆ ಮಾಹಿತಿ ನೀಡಿಲ್ಲ. ಹಾಗಾಗಿ, ತಮಗೆ ಪರಿಹಾರ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದ ಪಾರ್ವತಿ ಸಿದ್ದರಾಮಯ್ಯನವರು ಮುಡಾ ಕಡೆಯಿಂದ ಪರಿಹಾರದ ರೂಪವಾಗಿ 2021ರಲ್ಲಿ ಮೈಸೂರಿನ ವಿಜಯನಗರದ ಮೂರನೇ ಹಂತದಲ್ಲಿ ಬೆಲೆಬಾಳುವ 14 ಸೈಟುಗಳನ್ನು ಖರೀದಿಸಿದ್ದರು. ಅವರ ಹೆಸರಿಗೆ ಆ ಸೈಟುಗಳ ಖಾತೆಯನ್ನೂ ಮಾಡಿಸಿಕೊಡಲಾಗಿತ್ತು.
ಪರಿಹಾರ ರೂಪವಾಗಿ ಅವರಿಗೆ ಸೈಟುಗಳನ್ನು ಕೊಟ್ಟು ಅವರಿಗೆ ಖಾತೆಯನ್ನೂ ಮಾಡಿಸಿರುವ ಮುಡಾ, ಇತ್ತ, ಬಡಾವಣೆಗಾಗಿ ತಾನು ವಶಪಡಿಸಿಕೊಂಡಿದ್ದ ಭೂಮಿಯ ಮಾಲೀಕತ್ವವನ್ನು ತಿದ್ದುಪಡಿ ಮಾಡಿಯೇ ಇಲ್ಲ. ಅದರಿಂದಾಗಿ, ವಶಪಡಿಸಿಕೊಂಡು ಬಡಾವಣೆ ನಿರ್ಮಿಸಲಾಗಿರುವ ಭೂಮಿಯ ಮಾಲೀಕತ್ವ ಇನ್ನೂ ಪಾರ್ವತಿಯವರ ಹೆಸರಿನಲ್ಲೇ ಇದೆ. ಕಾರ್ಡ್ಸ್ ಆಫ್ ರೈಟ್ಸ್ನಲ್ಲಿ, ಆರ್ಟಿಸಿ ದಾಖಲೆಗಳಲ್ಲಿ ಈಗಲೂ ಪಾರ್ವತಿಯವರ ಹೆಸರಿದ್ದು, ಈ ವಿಚಾರ ರಾಜ್ಯ ರಾಜಕಾರಣದಲ್ಲಿ ದೊಡ್ಡ ಗದ್ದಲವನ್ನೇ ಎಬ್ಬಿಸಿತ್ತು.