

|ಕೀರ್ತಿನಾರಾಯಣ ಸಿ. ಬೆಂಗಳೂರು
ಸ್ವಂತ ಬಳಕೆಗೆ ಖರೀದಿಸಿರುವ ವೈಟ್ಬೋರ್ಡ್ನ ಬೈಕ್ಗಳು ಹಾಗೂ ಕಾರುಗಳನ್ನು ಟ್ಯಾಕ್ಸಿಯಾಗಿ ಪರಿವರ್ತಿಸಿ ವಾಣಿಜ್ಯ ಬಳಕೆಗೆ ಉಪಯೋಗಿಸುತ್ತಿರುವುದು ಸಾರಿಗೆ ಅಧಿಕಾರಿಗಳು ಹಾಗೂ ಸಂಚಾರ ಪೊಲೀಸರಿಗೀಗ ತಲೆನೋವು ತಂದಿದೆ.
ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿರುವ ಕೆಲ ರೆಂಟ್ ಎ ಕಾರ್ ಹಾಗೂ ಬೈಕ್ ಸಂಸ್ಥೆಗಳು, ಯಾವುದೇ ಬಂಡವಾಳ ಹೂಡಿಕೆ ಮಾಡದೆ ಕಾನೂನುಬಾಹಿರವಾಗಿ ಖಾಸಗಿ ವಾಹನಗಳನ್ನೇ ಬಾಡಿಗೆಗೆ ಅಟ್ಯಾಚ್ ಮಾಡಿಕೊಂಡು ಸಾವಿರಾರು ಕೋಟಿ ವಹಿವಾಟು ನಡೆಸುತ್ತಿರುವ ವಿಚಾರ ಬೆಳಕಿಗೆ ಬಂದಿದೆ.
ಕರ್ನಾಟಕ ಸೇರಿ ದೇಶಾದ್ಯಂತ ಹಲವು ಆಪ್ ಆಧಾರಿತ ಅಗ್ರಿಗೇಟರ್ ಸಂಸ್ಥೆಗಳು ಹಾಗೂ ‘ರೆಂಟ್ ಎ ಕಾರ್’ ಕಂಪನಿಗಳು ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತಿವೆ. ನಿಯಮಬಾಹಿರವಾಗಿ ಸಾವಿರಾರು ಖಾಸಗಿ ವಾಹನಗಳನ್ನೇ ಕಂಪನಿಯೊಂದಿಗೆ ಜೋಡಣೆ ಮಾಡಿಕೊಂಡು ಬಾಡಿಗೆ ಸೇವೆ ನೀಡುತ್ತಿವೆ. ಜನಪ್ರಿಯ ಕಂಪನಿಯೊಂದರಲ್ಲಿ ಬೆಂಗಳೂರಲ್ಲೇ 1500ಕ್ಕೂ ಅಧಿಕ ಖಾಸಗಿ ಕಾರುಗಳು ಜೋಡಣೆಯಾಗಿವೆ. ಇನ್ನೂ ಹಲವು ಕಂಪನಿಗಳು ಇದೇ ರೀತಿ ಕಾರ್ಯಾಚರಿಸುತ್ತಿವೆ.
ಜೂಮ್ ಕಾರ್ ವಿರುದ್ಧ ದೂರು: ಬೆಂಗಳೂರಲ್ಲಿ 1500ಕ್ಕೂ ಹೆಚ್ಚು ಕಾರುಗಳನ್ನು ಜೂಮ್ ಕಂಪನಿ ಅಟ್ಯಾಚ್ ಮಾಡಿಕೊಂಡಿದೆ. ದೇಶದ 45 ನಗರಗಳಲ್ಲಿ ಸೇವೆ ಒದಗಿಸುತ್ತಿದೆ. ಆದರೆ, ಜೂಮ್ ಕಂಪನಿ ಸೇವೆ ವಿರುದ್ಧ ಕಾರು ಮಾಲೀಕರು ಹಾಗೂ ಗ್ರಾಹಕರು ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಅಪಘಾತದಿಂದ ಆಗಿರುವ ವಾಹನ ಡ್ಯಾಮೇಜ್ಗೆ ಪರಿಹಾರ ಕೊಟ್ಟಿಲ್ಲ. ಇಂಧನದ ಹಣ ರೀಫಂಡ್ ಮಾಡಿಲ್ಲ, ಬುಕ್ಕಿಂಗ್ ಕ್ಯಾನ್ಸಲ್ನ ಹಣ ಮರುಪಾವತಿಸಿಲ್ಲ. ಕಾರು ಅಪಘಾತವಾಗಿರುವ ಬಗ್ಗೆ ದೂರು ಕೊಟ್ಟರೂ ಕಂಪನಿ ಸ್ಪಂದಿಸಿಲ್ಲ ಸೇರಿದಂತೆ ಸಾವಿರಾರು ಜನ ದೂರು ದಾಖಲಿಸಿದ್ದಾರೆ.
ವಾಮಮಾರ್ಗ ಯಾವುದು?
ಕಂಪನಿಗೆ ಶೇ.70 ಪಾಲು!
ರೆಂಟ್ ಎ ಕಾರ್ ಸೇವೆಗೆ ಜೋಡಣೆ ಮಾಡಲು ಮೊದಲು ತಮ್ಮ ವಾಹನವನ್ನು ಸೆಲ್ಪ್ ಡ್ರೖೆವ್ ವಾಹನ ಎಂದು ನೋಂದಣಿ ಮಾಡಿಸಬೇಕು. ಆಗ ಕಪ್ಪು ಫಲಕದ ಮೇಲೆ ಹಳದಿ ಸಂಖ್ಯೆಗಳ ಬೋರ್ಡ್ ಕೊಡಲಾಗುತ್ತದೆ. ಆದರೆ, ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡದೆ, ವೈರ್ಟ್ಬೋರ್ಡ್ ಕಾರುಗಳನ್ನೇ ಅಟ್ಯಾಚ್ ಮಾಡಲಾಗುತ್ತಿದೆ. ರೆಂಟ್ ಎ ಕಾರ್ ವೇದಿಕೆಯಲ್ಲಿ ಖಾಸಗಿ ಕಾರನ್ನು ನೋಂದಣಿ ಮಾಡಿದ ನಂತರ ಆರಂಭದ 3 ತಿಂಗಳು ಖಚಿತ ಆದಾಯ ಕೊಡುವುದಾಗಿ ಹೇಳುತ್ತದೆ. ಅಂದರೆ, ಒಪ್ಪಂದದಂತೆ 3 ತಿಂಗಳ ಆದಾಯ ಪೂರ್ತಿ ಮಾಲೀಕನಿಗೆ. ಕಾರು ನೋಂದಣಿಯಾದ 4ನೇ ತಿಂಗಳಿಂದ ಬರುವ ಆದಾಯ ಹಂಚಿಕೆಯಾಗುತ್ತದೆ. ಬರುವ ಆದಾಯದಲ್ಲಿ ಶೇ.60 ವಾಹನ ಮಾಲೀಕನಿಗೆ ಹಾಗೂ ಶೇ.40 ಕಂಪನಿಗೆ ಎಂದು ಹೇಳಲಾಗುತ್ತದೆ. ಆದರೆ, ಶೇ.60 ರಿಂದ ಶೇ.70 ಕಂಪನಿಯೇ ಇಟ್ಟುಕೊಂಡು ಶೇ.30 ಮಾತ್ರ ವಾಹನ ಮಾಲೀಕರಿಗೆ ಕೊಡಲಾಗುತ್ತಿದೆ.
ಬೆಂಗಳೂರು ಮಾತ್ರವಲ್ಲದೆ ಮೈಸೂರು, ಮಂಗಳೂರು, ಕಲಬುರ್ಗಿ ಭಾಗದಲ್ಲೂ ನೂರಾರು ಕಾರುಗಳು ಅಟ್ಯಾಚ್ ಆಗಿವೆ. ಅದೇ ರೀತಿ ಸಾವಿರಾರು ಖಾಸಗಿ ಬೈಕ್ಗಳು ಕೂಡ ಕಂಪನಿಗೆ ಜೋಡಣೆಯಾಗಿ ಟ್ಯಾಕ್ಸಿಯಾಗಿ ಸೇವೆ ನೀಡುತ್ತಿವೆ.
ಬಿಲ್ಲಿಂಗ್ಗೆ ಅವಕಾಶ ಇಲ್ಲ: ಸ್ವಂತ ವಾಹನ ಬಾಡಿಗೆಗೆ ಕೊಟ್ಟು ಬಿಲ್ಲಿಂಗ್ ಮಾಡಿ ಹಣ ವಸೂಲಿಗೆ ಅವಕಾಶವಿಲ್ಲ. ಆದರೆ, ಬಾಡಿಗೆಗೆ ಜೋಡಣೆ ಮಾಡಿದರೆ ಶೇ.18 ಜಿಎಸ್ಟಿ ವಸೂಲಿ ಮಾಡಲಾಗುತ್ತದೆ. ಜಿಎಸ್ಟಿ ಸ್ವೀಕರಿಸಿದರೆ ಸರ್ಕಾರಕ್ಕೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ವೈಟ್ಬೋರ್ಡ್ ವಾಹನಗಳ ಬಾಡಿಗೆ ಪ್ರಯಾಣಕ್ಕೆ ಬಿಲ್ಲಿಂಗ್ ಮಾಡುವಂತಿಲ್ಲ. ಇದು ಕಾನೂನು ಪ್ರಕಾರ ಅಪರಾಧ. ಹೀಗಾಗಿ ಆದಾಯ ತೆರಿಗೆ ಇಲಾಖೆ ಈ ಬಗ್ಗೆ ತನಿಖೆ ನಡೆಸಲು, ವಾಹನ ಜಪ್ತಿ ಮಾಡಲು ಅಧಿಕಾರ ಇದೆ. ತೆರಿಗೆ ವಂಚನೆ ಆರೋಪದಲ್ಲಿ 2019ರಲ್ಲೇ ಐಟಿ ತಂಡ ಬೆಂಗಳೂರಿನಲ್ಲಿರುವ ಕಂಪನಿಯೊಂದರ ಕಚೇರಿ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿತ್ತು.
ಇನ್ಸುರೆನ್ಸ್ಗೆ ಏಜೆನ್ಸಿಗಳ ನಕಾರ: ಬಾಡಿಗೆಗೆ ಅಟ್ಯಾಚ್ ಮಾಡಿಕೊಂಡ ವೈಟ್ಬೋರ್ಡ್ ಕಾರುಗಳಿಗೆ ಇನ್ಸುರೆನ್ಸ್ ಮಾಡಿಸಿಕೊಡಲು ವಿಮಾ ಏಜೆನ್ಸಿಗಳಿಗೆ ರೆಂಟ್ ಎ ಕಾರ್ ಕಂಪನಿಗಳು ಮನವಿ ಮಾಡಿವೆ. ಆದರೆ, ನಿಯಮ ಉಲ್ಲಂಘನೆಯಾಗುವುದರಿಂದ ಬಹುತೇಕ ಏಜೆನ್ಸಿಗಳು, ಇನ್ಸುರೆನ್ಸ್ ಮಾಡಿಸಲು ನಿರಾಕರಿಸಿವೆ ಎಂದು ಏಜೆನ್ಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾರಿಗೆ ಇಲಾಖೆ ಎಚ್ಚರಿಕೆ: ವೈಟ್ಬೋರ್ಡ್ ವಾಹನಗಳನ್ನು ಟ್ಯಾಕ್ಸಿಯಾಗಿ ವಾಣಿಜ್ಯ ಬಳಕೆಗೆ ಬಳಸಿಕೊಂಡರೆ ವಾಹನ ಮಾಲೀಕ ಹಾಗೂ ಕಂಪನಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ಈ ಹಿಂದೆಯೇ ಎಚ್ಚರಿಕೆ ನೀಡಿದೆ. ಆದಾಗ್ಯೂ ವಾಹನಗಳನ್ನು ರೆಂಟ್ ಎ ಕಾರು ಸೇವೆಗೆ ಜೋಡಣೆ ಹಾಗೂ ಸಂಚಾರ ಇನ್ನೂ ನಿಂತಿಲ್ಲ.
| ಎಚ್.ರಾಜಣ್ಣ ಜ್ಞಾನಭಾರತಿ ಸಾರಿಗೆ ಕಚೇರಿ ಎಆರ್ಟಿಒ ಸಮಸ್ಯೆ ಏನು?
| ಕೆ.ರಾಧಾಕೃಷ್ಣ ಹೊಳ್ಳರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘದ ಅಧ್ಯಕ್ಷ