

ಸೋಮವಾರಪೇಟೆ: ವಿದ್ಯಾರ್ಥಿ ಜೀವನ ಚಿನ್ನದಂತಹ ಜೀವನ ಎಂದು ನಿವೃತ್ತ ಪ್ರಾಂಶುಪಾಲೆ ತಿಲೋತ್ತಮೆ ನಂದಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಮತ್ತು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮೊಬೈಲ್ ಒಂದು ಶಾಪವಿದ್ದಂತೆ. ಕೋವಿಡ್ ಸಂದರ್ಭದಲ್ಲಿ ವಿಧಿಯಿಲ್ಲದೆ ವಿದ್ಯಾರ್ಥಿಗಳು ಮೊಬೈಲ್ ಮೊರೆ ಹೋಗುವಂತಹ ಸ್ಥಿತಿ ಬಂದಿತ್ತು. ವಿದ್ಯಾರ್ಥಿಗಳು ಇನ್ನಾದರೂ ಮೊಬೈಲ್ ಚಟದಿಂದ ಹೊರಬನ್ನಿ. ಆ ಸಮಯವನ್ನು ಪುಸ್ತಕಗಳನ್ನು ಓದಲು ಮೀಸಲಿಡಿ ಎಂದು ಕಿವಿಮಾತು ಹೇಳಿದರು. ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ನೀಡುವ ಸದುದ್ದೇಶದಿಂದ ವಿದ್ಯಾಸಂಸ್ಥೆ ಕಟ್ಟಲಾಗಿದೆ. ಕಳೆದ 6 ವರ್ಷಗಳಿಂದ ಸತತವಾಗಿ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100ರಷ್ಟು ಫಲಿತಾಂಶವನ್ನು ಸಂಸ್ಥೆ ಪಡೆಯುತ್ತಿದ್ದು, ಪ್ರಸಕ್ತ ವರ್ಷವೂ ವಿದ್ಯಾರ್ಥಿಗಳು ಶೇ 100ರ ಫಲಿತಾಂಶವನ್ನು ತಂದು ಕೊಡಬೇಕು ಎಂದು ಹೇಳಿದರು.ಉತ್ತಮ ಶಾಲಾ ನಾಯಕಿಯಾಗಿ ಪಂಚಮಿ, ಕೀಡಾ ನಾಯಕಿಯಾಗಿ ಎಚ್.ಆರ್.ದಿಶಿತಾ, ಸಮಾಜಸೇವಕನಾಗಿ ಪೂಜನ್ ಅವರನ್ನು ಗೌರವಿಸಲಾಯಿತು. ಸಂಘದ ಉಪಾಧ್ಯಕ್ಷ ಎಸ್.ಬಿ.ಭರತ್, ಬಾತ್ಮೀದಾರರಾದ ಕೆ.ಎಂ.ಜಗದೀಶ್, ನಿರ್ದೇಶಕರಾದ ಎಸ್.ಜಿ.ಮೇದಪ್ಪ, ಗಣಪತಿ, ನಂದಕುಮಾರ್, ಕೆ.ಟಿ.ಪರಮೇಶ್, ಡಿ.ಎಸ್.ಪೊನ್ನಪ್ಪ, ಪ್ರಾಂಶುಪಾಲರಾದ ಮಿಲ್‌ಡ್ರೆಡ್ ಗೋನ್ಸಾಲ್ವೆಸ್ ಇದ್ದರು.