ಸ್ಮಾರ್ಟ್ ಮೀಟರ್ ಅಕ್ರಮ: ರಾಜ್ಯಪಾಲರಿಗೆ ಬಿಜೆಪಿ ದೂರು | Reminder to Lokayukta

BJP meet Governor
Published on

ಬೆಂಗಳೂರು: ಸ್ಮಾರ್ಟ್ ಮೀಟರ್ ಅಳವಡಿಕೆ ಗುತ್ತಿಗೆ ಒಪ್ಪಂದದಲ್ಲಿ ಬಹು ಕೋಟಿ ರೂ.ಗಳ ಹಗರಣವಾಗಿದೆ ಎಂದು ಆರೋಪಿಸಿರುವ ಪ್ರತಿಪಕ್ಷ ಬಿಜೆಪಿ, ತಾರ್ಕಿಕ ಅಂತ್ಯದ ಕಾಣಿಸುವ ತನಕ ಹೋರಾಟದ ಭಾಗವಾಗಿ ರಾಜ್ಯಪಾಲರಿಗೆ ಬುಧವಾರ ದೂರು ಸಲ್ಲಿಸಿದೆ.

ಗುತ್ತಿಗೆ ಒಪ್ಪಂದದ ಎಲ್ಲ ದಾಖಲೆಗಳನ್ನು ಜನರ ಮುಂದಿಟ್ಟು ತನಿಖೆ ನಡೆಸಬೇಕೆಂಬ ಆಗ್ರಹಕ್ಕೆ ಸರ್ಕಾರ ಸ್ಪಂದಿಸಲಿಲ್ಲ. ಲೋಕಾಯುಕ್ತರಿಗೆ ದೂರು ನೀಡಿದ್ದರೂ ಪ್ರಕರಣ ದಾಖಲಿಸಿಲ್ಲವೆಂದು ರಾಜ್ಯಪಾಲರಿಗೆ ಮೊರೆ ಹೋಗಿದೆ.

ಸ್ಮಾಟರ್ ಮೀಟರ್ ಹಗಲು ದರೋಡೆಯಾಗಿದ್ದು, ಸಾವಿರಾರು ಕೋಟಿ ರೂ. ಲೂಟಿಗೆ ಅವಕಾಶ ಕಲ್ಪಿಸಿಕೊಳ್ಳಲಾಗಿದೆ. ಇದರಿಂದ ಗ್ರಾಹಕರಿಗೆ ಅನ್ಯಾಯವಾಗುತ್ತಿದ್ದು, ರಾಜ್ಯಪಾಲು ಮಧ್ಯೆಪ್ರವೇಶ ಮಾಡಿ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲು ಕೋರಿ ಮನವಿ ಸಲ್ಲಿಸಿದೆ.

ನಂತರ ಸುದ್ದಿಗಾರರಿಗೆ ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಪ್ರತಿಕ್ರಿಯಿಸಿ, ಅಕ್ರಮದ ಬಗ್ಗೆ ರಾಜ್ಯಪಾಲರೊಂದಿಗೆ ಚರ್ಚಿಸಿದ್ದೇವೆ. ಅಧಿಕಾರ ದುರ್ಬಳಕೆ, ಕಾನೂನು ಉಲ್ಲಂಘನೆಯಲ್ಲಿ ಇಂಧನ ಸಚಿವ, ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದರ ಬಗ್ಗೆ ರಾಜ್ಯಪಾಲರ ಗಮನಸೆಳೆದಿದ್ದೇವೆ ಎಂಬ ಮಾಹಿತಿ ನೀಡಿದರು.

ಲೋಕಾಯುಕ್ತಕ್ಕೆ ನೆನಪೋಲೆ

ಅನರ್ಹ ಗುತ್ತಿಗೆದಾರರೊಂದಿಗೆ ಒಪ್ಪಂದ, ದುಬಾರಿ ದರ ಸೇರಿ ಹಗರಣ ದೃಢಪಡಿಸುವ ದಾಖಲೆಗಳ ಸಹಿತ ಲೋಕಾಯುಕ್ತ ಸಂಸ್ಥೆಗೆ ದೂರು ಸಲ್ಲಿಸಿದ್ದು, ಎ್ಐಆರ್ ದಾಖಲಿಸಿಲ್ಲ. ಹೀಗಾಗಿ ನೆನಪೋಲೆ ಕಳುಹಿಸಿದ್ದೇವೆ ಎಂದು ತಿಳಿಸಿದರು.

ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ, ಕೇಂದ್ರ ವಿದ್ಯುತ್ ಆಯೋಗದ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಲಾಗಿದೆ. ಅರ್ಹತೆ ಇಲ್ಲದ ಗುತ್ತಿಗೆ ಕಂಪನಿ ಜತೆಗೆ ಗುತ್ತಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.

ಇದು, ಬಹುದೊಡ್ಡ ಪ್ರಮಾಣದ ಅಕ್ರಮವಾಗಿದೆ ಎಂಬ ಅಂಶವನ್ನು ರಾಜ್ಯಪಾಲರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಹೇಳಿದರು. ಮನವಿ ಸಲ್ಲಿಸುವ ಸಂದರ್ಭದಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಕೆ.ಗೋಪಾಲಯ್ಯ, ಧೀರಜ್ ಮುನಿರಾಜು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net