ಕೆರೆ ಸ್ವಚ್ಛಗೊಳಿಸುವ ಸ್ಮಾರ್ಟ್ ಯಂತ್ರ ವಿನ್ಯಾಸ

jnnce Project Exhibition
ಶಿವಮೊಗ್ಗ ಜೆಎನ್‌ಎನ್‌ಸಿಇ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ರೂಪಿಸಿದ ಲೇಕ್ ಕ್ಲಿನಿಂಗ್ ಸಿಸ್ಟಂ ಪ್ರಾತ್ಯಕ್ಷಿಕೆ ಹಾಗೂ ವಿವಿಧ ವಿನ್ಯಾಸಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಎಸ್.ಎನ್.ನಾಗರಾಜ, ಡಾ. ವೈ.ವಿಜಯಕುಮಾರ್, ಪಿ.ಮಂಜುನಾಥ, ಎಸ್.ವಿ.ಸತ್ಯನಾರಾಯಣ, ಜಲೇಶ್ ಕುಮಾರ್, ಪೂರ್ಣಿಮಾ, ಗಾನ್ಹವಿ, ಹಿರಿಯಣ್ಣ, ಪುಷ್ಪ ಇದ್ದರು.
Published on

ಶಿವಮೊಗ್ಗ: ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಕೆರೆಗಳು ಪ್ರಮುಖ ಅವಶ್ಯಕತೆ. ಅಂತಹ ಜಲಮೂಲಗಳಲ್ಲಿ ತೇಲುವ ಪ್ಲಾಸ್ಟಿಕ್ ರೀತಿ ತ್ಯಾಜ್ಯ ವಸ್ತುಗಳು ಜಲಚರ ಜೀವಿಗಳು ಮಾತ್ರವಲ್ಲದೆ ಮನುಕುಲಕ್ಕೂ ಸಂಚಕಾರ ತಂದಿಟ್ಟಿವೆ. ಅಂತಹ ತ್ಯಾಜ್ಯವನ್ನು ಯಂತ್ರದ ಮೂಲಕ ಸ್ವಚ್ಛಗೊಳಿಸುವ ನಾವೀನ್ಯ ಪರಿಕಲ್ಪನೆಯನ್ನು ಜೆಎನ್‌ಎನ್‌ಸಿಇ ವಿದ್ಯಾರ್ಥಿಗಳು ವಿನ್ಯಾಸಗೊಳಿಸಿದ್ದಾರೆ.

ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ಸಿ.ಅರ್ಜುನ್, ಮೊಹಮದ್ ಸಾಹಿಲ್, ಜಾಗೃತಿ ಬಾಯಿ, ಸುಪ್ರಿತಾ ಪಾಟೀಲ್ ತಂಡವು ಸಹ ಪ್ರಾಧ್ಯಾಪಕಿ ಆಯಿಷಾ ಸಿದ್ದಿಕಾ ಮಾರ್ಗದರ್ಶನದಲ್ಲಿ ಸ್ವಯಂಚಾಲಿತ ಯಂತ್ರವನ್ನು ವಿನ್ಯಾಸಗೊಳಿಸಿದೆ. ಐಓಟಿ ತಂತ್ರಜ್ಞಾನದ ಮೂಲಕ ತ್ಯಾಜ್ಯಗಳನ್ನು ಪತ್ತೆ ಮಾಡಿ ಸ್ವಯಂಚಾಲಿತವಾಗಿ ಕೆರೆಗಳನ್ನು ಸ್ವಚ್ಛಗೊಳಿಸುವ ಯಂತ್ರದ ಪ್ರಾತ್ಯಕ್ಷಿಕೆ ನೋಡುಗರ ಗಮನ ಸೆಳೆಯಿತು.
ನಗರದ ಜೆಎನ್‌ಎನ್‌ಸಿಇ ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಗುರುವಾರ ಕಾಲೇಜಿನ ಆವರಣದಲ್ಲಿ ಕಂಪ್ಯೂಟರ್ ಸೈನ್ಸ್ ವಿಷಯಗಳ ನಾವೀನ್ಯಯುತ ಯೋಜನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ವಿನ್ಯಾಸಗಳನ್ನು ಪ್ರದರ್ಶಿಸಿದರು.
ಸಾರ್ವಜನಿಕ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳು ನಡೆದಾಗ ಕೃತಕ ಬುದ್ಧಿಮತ್ತೆ ಮೂಲಕ ತಕ್ಷಣ ಕಂಟ್ರೋಲ್ ರೂಂಗೆ ಮಾಹಿತಿ ನೀಡುವ ಸಿಸಿ ಕ್ಯಾಮೆರಾಗಳು, ಕ್ಷ-ಕಿರಣದಿಂದ ಸ್ವಯಂಚಾಲಿತ ನ್ಯುಮೋನಿಯಾ ಪತ್ತೆ ಹಚ್ಚುವ ತಂತ್ರಜ್ಞಾನ, ಸ್ಮಾರ್ಟ್ ಟ್ರಾಫಿಕ್ ಸಿಗ್ನಲ್ ನಿರ್ವಹಣೆ, ಎಐ ತಂತ್ರಜ್ಞಾನದ ಮೂಲಕ ಅಂಧರಿಗೆ ಸ್ಮಾರ್ಟ್ ಬುಕ್ ರೀಡರ್, ನವೀನ ಆಟಗಳ ಆಧಾರದ ಮೇಲೆ ಮಾಹಿತಿ ಸುರಕ್ಷಿತಗೊಳಿಸುವ ವ್ಯವಸ್ಥೆ, ಅಕ್ಷನ್ ವೊಕ್ಯಾಲೈಜರ್, ವಿಡಿಯೊ ಸ್ಟೆಗ್ನೊಗ್ರಾಫಿ ಸೇರಿ ಅನೇಕ ನಾವೀನ್ಯ ಯೋಜನೆಗಳು ಪ್ರದರ್ಶನಗೊಂಡವು.
ಕಾರ್ಯಕ್ರಮದಲ್ಲಿ ಲೇಕ್ ಕ್ಲಿನಿಂಗ್ ಸಿಸ್ಟಮ್ (ಪ್ರಥಮ ಬಹುಮಾನ), ವಿದ್ಯಾರ್ಥಿಗಳಾದ ಆರ್.ಎಂ.ಭಾವನಾ, ದತ್ತಾತ್ರಿ ಕೃಷ್ಣ, ಎಸ್.ನಿಸರ್ಗ, ಬಿ.ಪೂಜಾ ತಂಡ ವಿಭಾಗದ ಮುಖ್ಯಸ್ಥ ಜಲೇಶ್ ಕುಮಾರ್ ಮಾರ್ಗದರ್ಶನದಲ್ಲಿ ರೂಪಿಸಿದ ಇಂಟಲಿಜೆಂಟ್ ಸಿಸ್ಟಮ್ ಟು ಸೆಕ್ಯೂರ್ ಇನ್ಫಾರ್ಮೇಶನ್ ಬೆಸ್ಡ್ ಆನ್ ಇನೊವೇಟಿವ್ ಗೇಮ್ಸ್ (ದ್ವಿತೀಯ ಬಹುಮಾನ), ಎಸ್.ಆರ್.ರುಚಿತಾ, ಕೆ.ಸಿರಿ, ಎಸ್.ಆರ್.ಸ್ನೇಹಾ, ಜಿ.ಎಂ.ವಿಭಾ ತಂಡ ಪ್ರಾಧ್ಯಾಪಕಿ ಕೆ.ಎಂ.ಪೂರ್ಣಿಮಾ ಅವರ ಮಾರ್ಗದರ್ಶನದಲ್ಲಿ ನಿರ್ಮಿಸಿದ ರೇಟಿಂಗ್ ಬೆಸ್ಡ್ ಆನ್ ಯುಟ್ಯೂಬ್ ಕಮೆಂಟ್ಸ್ (ತೃತೀಯ ಬಹುಮಾನ) ಪಡೆದಿದೆ.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ, ಕಾಲೇಜಿನ ಪ್ರಾಚಾರ್ಯ ಡಾ. ವೈ.ವಿಜಯಕುಮಾರ್, ಪಿಡ್ಲ್ಯುಸಿ ಕಂಪನಿ ಪ್ರಾಜೆಕ್ಟ್ ಮ್ಯಾನೇಜರ್ ಡಿ.ಆರ್.ರಾಘವೇಂದ್ರ, ಸ್ಯಾಪ್ ಅರೆಬಿಯಾ ಕಂಪನಿ ಪ್ರಾಡಕ್ಟ್ ಎಕ್ಸ್‌ಪರ್ಟ್ ಭರತ್ ಗುಪ್ತಾ, ಶೈಕ್ಷಣಿಕ ಡೀನ್ ಡಾ. ಪಿ.ಮಂಜುನಾಥ, ಸಂಶೋಧನಾ ಡೀನ್ ಡಾ. ಎಸ್.ವಿ.ಸತ್ಯನಾರಾಯಣ, ವಿಭಾಗದ ಮುಖ್ಯಸ್ಥರಾದ ಡಾ. ಜಲೇಶ್ ಕುಮಾರ್, ಸಂಯೋಜಕರಾದ ಡಾ. ಪೂರ್ಣಿಮಾ, ಡಾ. ಗಾನ್ಹವಿ, ಹಿರಿಯಣ್ಣ, ಪುಷ್ಪ ಸೇರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net