

ಹುಬ್ಬಳ್ಳಿ : ಭಾರತ ಮೊದಲಿನಿಂದಲೂ ಅನ್ವೇಷಣೆ ಮಹತ್ವ ಅರಿತಿರುವ ದೇಶವಾಗಿದೆ. ಆತ್ಮನಿರ್ಭರ ಮತ್ತು ವಿಕಸಿತ ಭಾರತಕ್ಕೆ ಕೊಡುಗೆ ನೀಡಲು ಹ್ಯಾಕಥಾನ್ ವೇದಿಕೆ ಒದಗಿಸುತ್ತದೆ. ಪ್ರತಿಯೊಬ್ಬರೂ ಆಲೋಚನೆಗಳ ಬಗ್ಗೆ ನಂಬಿ, ತಂಡದೊಂದಿಗೆ ಕೆಲಸ ಮಾಡಿ. ಸವಾಲುಗಳನ್ನು ಎದುರಿಸಿ, ಅದರಲ್ಲಿನ ನ್ಯೂನ್ಯತೆಗಳನ್ನು ಅರಿಯಿರಿ ಎಂದು ಎಂಒಇ ಇನೊ್ನೕವೇಷನ್ ಸೆಲ್ನ ಪ್ರಾದೇಶಿಕ ಸಲಹೆಗಾರ ಸೌರಭ ನಿರ್ಮಲೆ ಹೇಳಿದರು.
ಇಲ್ಲಿನ ವಿದ್ಯಾನಗರ ಬಿವಿಬಿ ಕ್ಯಾಂಪಸ್ನ ಟೆಕ್ ಆಡಿಟೋರಿಯಂನಲ್ಲಿ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯವು ಡಿ. 15ರವರೆಗೆ ಆಯೋಜಿಸಿರುವ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ -2024 ಏಳನೇ ಆವೃತ್ತಿಯ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಬ್ಬರೂ ದೊಡ್ಡ ಕನಸು ಕಾಣಿರಿ. ಗುರಿ ತಲುಪಲು ಕಷ್ಟಪಟ್ಟು ದುಡಿಯಿರಿ. ವಿಶ್ರಮಿಸದೆ ನಿರಂತರವಾಗಿ ಶ್ರಮಿಸಿ ಎಂದು ಸಲಹೆ ನೀಡಿದರು.
ಭಾರತವು ಆರ್ಯಭಟನ ಕಾಲದಿಂದಲೂ ಅನ್ವೇಷಣೆ ಮೂಲಕ ಬಹುದೊಡ್ಡ ಕೊಡುಗೆ ನೀಡುತ್ತ ಬಂದಿದೆ. ಸರ್ಕಾರ, ಉದ್ಯಮ ಮತ್ತು ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಲು ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್ ಉತ್ತಮ ಅವಕಾಶ ಒದಗಿಸುತ್ತದೆ ಎಂದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಪ್ರಕಾಶ ತೆವಾರಿ ಮಾತನಾಡಿ, ಭವಿಷ್ಯದ ದಿನಗಳಲ್ಲಿ ಭಾರತೀಯರು ಕೃಷಿಯಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆ ನಿಟ್ಟಿನಲ್ಲಿ ಬೆಳೆ ವಿಸ್ತರಣೆ, ಲಭ್ಯವಾದ ಬೆಳೆ ಸಂಗ್ರಹಣೆ, ಸಾರಿಗೆ ಖರ್ಚು ಕಡಿತದ ಸವಾಲುಗಳ ಬಗ್ಗೆ ಗಮನಹರಿಸಬೇಕಾಗಿದೆ ಎಂದರು.
ಭಾರತದ ಜನಸಂಖ್ಯೆ ಹೆಚ್ಚುತ್ತಿದ್ದು, ಜತೆಗೆ ಸವಾಲುಗಳೂ ಬೆಳೆಯುತ್ತಿವೆ. ಎದುರಾಗುವ ಸವಾಲುಗಳನ್ನು ಹೇಗೆ ನಿರ್ವಹಿಸಬೇಕೆಂಬುದು ಅವಶ್ಯ. ಆ ನಿಟ್ಟಿನಲ್ಲಿ ಪರಿಹಾರೋಪಾಯ ಕಂಡುಕೊಳ್ಳಬೇಕಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಉಂಟಾಗುತ್ತಿದ್ದು, ಪರಿಸರ ಸ್ನೇಹಿ ಅನ್ವೇಷಣೆಗೆ ಮುಂದಾಗಬೇಕು. ಆತ್ಮನಿರ್ಭರ, ವಿಕಸಿತ ಭಾರತ ನಿಮಾಣಕ್ಕೆ ಆದ್ಯತೆ ನೀಡಬೇಕು. ಅಭಿವೃದ್ಧಿ ಭಾರತಕ್ಕೆ ಅಮೃತ ಸಲ್ಯೂಷನ್ಸ್ ಮುಖ್ಯ ಎಂದರು.
ಕೆಎಲ್ಇ ಟೆಕ್ ವಿವಿಯ ಎಫ್ಎಸ್ಇ ವಿಭಾಗದ ಡೀನ್ ಡಾ. ನಳಿನಿ ಐಯ್ಯರ್, ಡಾ. ಸುನೀತಾ ಬೂದಿಹಾಳ, ಬಸವರಾಜ ಅನಾಮಿ ಇತರರಿದ್ದರು. ಮೃದಲಾ ವಂದಿಸಿದರು.