

ಬೆಂಗಳೂರು: ಮಹಾನಗರಿ ಬೆಂಗಳೂರಿನ ಮಹಿಳೆಯೊಬ್ಬರು ನಿದ್ರೆ ಮಾಡಿ 9 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾರೆ. ವೇಕ್ ಫಿಟ್ಸ್ ಸ್ಟಾರ್ಟ್ ಅಪ್ ( Wakefit startup) ನಡೆಸಿದ್ದ ಸ್ಲೀಪ್ ಇಂಟರ್ನ್ಶಿಪ್ (Sleep Internship) ಮೂರನೇ ಸೀಸನ್ ನಡೆದಿದೆ. ಅದ್ರಲ್ಲಿ ಪಾಲೊಂಡಿದ್ದ ಸಾಯಿಶ್ವರಿ ಪಾಟೀಲ್, ಸ್ಲೀಪ್ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಸಾಯಿಶ್ವರಿ ಪಾಟೀಲ್ (Saiswari Patil) ಬೆಂಗಳೂರಿನವರು. ಅವರು ಇನ್ವೆಸ್ಟ್‌ಮೆಂಟ್ ಬ್ಯಾಂಕರ್ ಆಗಿ ಕೆಲಸ ಮಾಡ್ತಿದ್ದಾರೆ. ಅವರು ನಿದ್ರೆ ಮಾಡಿಯೇ 9 ಲಕ್ಷ ಸಂಪಾದನೆ ಮಾಡಿದ್ದಾರೆ.
ಸ್ಲೀಪ್ ಇಂಟರ್ನ್ಶಿಪ್ ಬೆಂಗಳೂರಿನಲ್ಲೇ ನಡೆದಿದೆ. ಪ್ರತಿ ದಿನ ಸರಿಯಾಗಿ ನಿದ್ರೆ ಮಾಡದ ಜನರನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದೆ. ಇಲ್ಲಿ ಸ್ಪರ್ಧಿಗಳಿಗೆ ಪ್ರತಿ ದಿನ 8 -9 ಗಂಟೆ ನಿದ್ರೆ ಮಾಡುವ ಟಾಸ್ಕ್ ನೀಡಲಾಗುತ್ತದೆ.
ಸಾಯಿಶ್ವರಿ ಪಾಟೀಲ್ ಸೇರಿದಂತೆ 12 ಸ್ಪರ್ಧಿಗಳಿಗೆ ಮಲಗಲು ಉತ್ತಮ ಬೆಡ್ ನೀಡಲಾಗಿತ್ತು. ಸ್ಪರ್ಧಿಗಳ ನಿದ್ರೆಯನ್ನು ಟ್ರ್ಯಾಕ್ ಮಾಡಲು ಸ್ಲೀಪ್ ಟ್ರ್ಯಾಕರ್ ಹಾಕಲಾಗಿತ್ತು. 8 -9 ಗಂಟೆ ಹೇಗೆ ಒಳ್ಳೆ ನಿದ್ರೆ ಮಾಡ್ಬೇಕು ಎನ್ನುವ ಬಗ್ಗೆ ತಜ್ಞರಿಂದ ಸ್ಪರ್ಧಿಗಳಿಗೆ ತರಬೇತಿ ಕೂಡ ನೀಡಲಾಗಿತ್ತು. ಸ್ಪರ್ಧಿಗಳಿಗೆ ಹಗಲಿನಲ್ಲಿ 20 ನಿಮಿಷಗಳ ಪವರ್ ನ್ಯಾಪ್ ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ.
ಸ್ಲೀಪ್ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ 10 ಲಕ್ಷಕ್ಕೂ ಹೆಚ್ಚು ಅರ್ಜಿ ಬಂದಿತ್ತು. ಸ್ಪರ್ಧಿಗಳು, ನಿದ್ರೆಯ ವೇಳಾಪಟ್ಟಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿದ್ರೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು. ನಿದ್ರೆ ಸುಧಾರಿಸಿಕೊಳ್ಳಲು ಯೋಗ, ಸಂಗೀತ, ಮಲಗುವ ಒಂದು ಗಂಟೆ ಮೊದಲು ಸ್ನಾನ ಸೇರಿದಂತೆ ಕೆಲ ಟಿಪ್ಸ್ ಪಾಲನೆ ಮಾಡಿದ್ರಿಂದ ಯಶಸ್ವಿಯಾಗಿರೋದಾಗಿ ತಿಳಿಸಿದ್ದಾರೆ.