

ಬೆಂಗಳೂರು: ಹಿಂದೂಸ್ತಾನ್ ಮಶೀನ್ ಅಂಡ್ ಟೂಲ್ಸ್ (ಎಚ್‌ಎಂಟಿ) ಹಾಗೂ ಕುದುರೆಮುಖ ಕಬ್ಬಿಣ ಮತ್ತು ಅದಿರು ಸಂಸ್ಥೆ (ಕೆಐಒಸಿಎಲ್) ವಿಷಯದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಸಿ ಸುಳ್ಳುಗಳನ್ನು ಹಬ್ಬಿಸುತ್ತಿದ್ದು, ಈ ಬಗ್ಗೆ ನಾನು ದಾಖಲೆಗಳ ಸಮೇತ ಚರ್ಚೆಗೆ ತಯಾರಿದ್ದೇನೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್‌ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕೆಐಒಸಿಎಲ್ ಬಗ್ಗೆ ರಾಜ್ಯ ಸರ್ಕಾರ ರಾಜಕಾರಣ ಮಾಡಬಾರದು. ಸಮಸ್ಯೆ ಇದ್ದರೆ ಕೂತು ಸರಿಪಡಿಸಿಕೊಳ್ಳಬೇಕು. ರಾಜ್ಯದಲ್ಲಿರುವ ಸಾರ್ವಜನಿಕ ಸ್ವಾಮ್ಯದ ಕೈಗಾರಿಕೆಗಳನ್ನು ಉಳಿಸುವ ಬಗ್ಗೆ ನಾನು ಕೆಲಸ ಮಾಡುತ್ತಿದ್ದೇನೆ. ಈ ಬಗ್ಗೆ ನಾನು ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿವರಿಗೆ ಪತ್ರ ಬರೆಯುತ್ತೇನೆ. ಒಂದು ಸಭೆ ಮಾಡಲಿ. ಅಲ್ಲಿ ದಾಖಲೆಗಳ ಸಮೇತ ನಾನು ಮಾತನಾಡುತ್ತೇನೆ. ಒಂದು ವೇಳೆ ಕೆಐಒಸಿಎಲ್ ತಪ್ಪುಗಳಿದ್ದರೆ ಅದಕ್ಕೆ ಆ ಇಲಾಖೆಯ ಸಚಿವನಾಗಿ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ. ಅದರ ಹೊರತಾಗಿ ರಾಜ್ಯದ ಹಿತಾಸಕ್ತಿಯ ಬಗ್ಗೆ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಅರಣ್ಯ ಸಚಿವರು ಈ ಎರಡೂ ಸಂಸ್ಥೆಗಳ ಬಗ್ಗೆ ಸತ್ಯಕ್ಕೆ ದೂರವಾದ ವಿಷಯಗಳನ್ನು ದಿನನಿತ್ಯವೂ ಮಾಧ್ಯಮಗಳಿಗೆ ಹೇಳುತ್ತ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಮೊದಲು ಸಚಿವರು ದಾಖಲೆಗಳನ್ನು ಓದಿ ಅರಿತುಕೊಳ್ಳಬೇಕು. ಆ ನಂತರ ಅವರು ಮಾತನಾಡಿದರೆ ಚೆನ್ನಾಗಿರುತ್ತದೆ. ಅದರ ಹೊರತಾಗಿ ರಾಜ್ಯ ಅಭಿವೃದ್ಧಿ ವಿಷಯದಲ್ಲಿ ಕ್ಷುಲ್ಲಕ ರಾಜಕಾರಣ ಮಾಡಿದರೆ ಅವರನ್ನು ಸಚಿವರು ಎಂದು ಕರೆಯಲಾಗುತ್ತದೆಯೇ ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರದ ಹಠಮಾರಿತನದಿಂದ ಕುದುರೆಮುಖ ಸಂಸ್ಥೆಯ ಸುಮಾರು 300-400 ಕಾರ್ಮಿಕರು ಬೀದಿಯಲ್ಲಿ ನಿಂತಿದ್ದಾರೆ. ಒಂದು ಕಡೆ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು ಎನ್ನುವ ರಾಜ್ಯ ಸರಕಾರ ಮತ್ತೊಂದೆಡೆ ಅಸಹಕಾರ ನೀಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಾದಿಬೀದಿಯಲ್ಲಿ ಹೇಳಿಕೆ ನೀಡುತ್ತಾ ಹೋದರೆ ರಾಜ್ಯದ ಅಭಿವೃದ್ಧಿ ಆಗುತ್ತದೆಯೇ? ರಾಜ್ಯ ಸರ್ಕಾರ ಚಿಲ್ಲರೆ ರಾಜಕಾರಣ ಮಾಡುವುದನ್ನು ಬಿಡಬೇಕು. ಕುಮಾರಸ್ವಾಮಿ ಅವರು ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಲಿ ಎಂದು ಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದಾರೆ. ಹೀಗೆ ಮಾಡಿದರೆ ಮೇಕೆದಾಟುಗೆ ಅನುಮತಿ ದೊರೆಯುತ್ತದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.