

ಕೋಲಾರ: ನಗರ ಹೊರವಲಯದ ಕೊಂಡರಾಜನಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಶನಿವಾರ ರಾತ್ರಿ 11.30ರ ಸುಮಾರಿಗೆ ಲಾರಿ ಡಿಕ್ಕಿಯಾಗಿ ಸ್ಕೈವಾಕ್ ಕುಸಿದು, 2 ಲಾರಿ-1 ಕಾರು ಜಖಂಗೊಂಡು, 3 ಕಿಮೀ ಟ್ರಾಫಿಕ್ ಉಂಟಾಗಿತ್ತು.
ಬೆಂಗಳೂರು ಕಡೆಯಿಂದ ಅಕ್ಕಿ ಚೀಲ ತುಂಬಿಕೊಂಡು ಬಂದ ಬೃಹತ್ ಲಾರಿ ಚಾಲಕನ ನಿಯಂತ್ರಣ ತಪ್ಪಿ ಸ್ಕೆವಾಕ್ಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಕೆವಾಕ್ನ ಅರ್ಧ ಭಾಗ ಲಾರಿ ಮೇಲೆ ಬಿದ್ದಿದ್ದು, ಮತ್ತೊಂದು ಭಾಗವು ರಸ್ತೆಗೆ ಬಿದ್ದಿದೆ.
ಸ್ಥಳಕ್ಕೆ ಪೊಲೀಸರು ಬರುಷ್ಟರಲ್ಲಿ ಕಿಲೋ ಮೀಟರ್ಗಟ್ಟಲೆ ಸಂಚಾರ ಸಿಕ್ಕು ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲಿಸಿ ಕ್ರೇನ್ ನೆರವಿನಿಂದ ಸ್ಕೆ$ವಾಕ್ ಕಬ್ಬಿಣವನ್ನು ರಸ್ತೆ ಪಕ್ಕಕ್ಕೆ ಸರಿಸಿದರು.
ಲಾರಿ ಸಂಪೂರ್ಣ ಜಖಂ ಆಗಿದ್ದ ಪರಿಣಾಮ ತೆರವು ಮಾಡಲು ಸಾಧ್ಯವಾಗಲಿಲ್ಲ. ಅಕ್ಕಿ ಮೂಟೆಗಳನ್ನು ಬೇರೆ ವಾಹನಕ್ಕೆ ಸಾಗಿಸಿದ ಬಳಿಕ ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
* ಹೆದ್ದಾರಿ ನಿಯಮ ಉಲ್ಲಂನೆ
ಬೆಂಗಳೂರು-ಚೆನ್ನೆ ರಾಷ್ಟ್ರೀಯ ಹೆದ್ದಾರಿ ಕೊಂಡರಾಜನಹಳ್ಳಿ ಸಮೀಪ ಹೆದ್ದಾರಿ ಪಕ್ಕದಲೇ ಹಲವು ಅಂಗಡಿ ತೆರೆಯಲಾಗಿದೆ. ಇಲ್ಲಿ ಬಹುತೇಕರು ಸರ್ವೀಸ್ ರಸ್ತೆ ಒತ್ತುವರಿ ಮಾಡಿಕೊಂಡಿದ್ದು, ಅವರ ವಿರುದ್ಧ ಕ್ರಮಕೈಗೊಳ್ಳುವಲ್ಲಿ ಕೊಂಡರಾಜನಹಳ್ಳಿ ಗ್ರಾಮ ಪಂಚಾಯಿತಿ ವಿಫಲವಾಗಿದೆ. ನಿತ್ಯ ಜಿಲ್ಲಾಮಟ್ಟದ ಅಧಿಕಾರಿಗಳು, ಸಚಿವರು, ಶಾಸಕರು ಇದೇ ರಸ್ತೆ ಮೂಲಕ ನಗರ ಪ್ರವೇಶ ಮಾಡೊದು. ಇದೆಲ್ಲ ಗಮನಕ್ಕೆ ಇದ್ದರೂ ಅಂಗಡಿ ತೆರವುಗೊಳಿಸುವ ಗೋಜಿಗೆ ಹೋಗಿಲ್ಲ. ಹೆದ್ದಾರಿಯಿಂದ ಇಂತಿಷ್ಟು ದೂರದಲ್ಲಿ ಅಂಗಡಿ ಇಟ್ಟುಕೊಳ್ಳಬೇಕು ಎಂಬ ನಿಯಮವಿದ್ದು, ಇದನ್ನು ಯಾರೂ ಪಾಲನೆ ಮಾಡುತ್ತಿಲ್ಲ.
ಸುಮಾರು ವರ್ಷಗಳಿಂದ ಕೆಲ ಮಂದಿ ಅಂಗಡಿಗಳನ್ನು ಇಟ್ಟುಕೊಂಡು ವಹಿವಾಟು ನಡೆಸುತ್ತಿದ್ದಾರೆ. ಹೋಟೆಲ್, ಡಾಬಾ, ಬೇಕರಿ, ಕಾಂಡಿಮೆಂಟ್ಸ್ ಹೀಗೆ ಹಲವು ರೀತಿಯ ಅಂಗಡಿಗಳು ಇವೆ. ಇಲ್ಲಿಗೆ ಬರುವವರು ವಾಹನಗಳನ್ನು ಅವೈಜ್ಞಾನಿಕವಾಗಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುತ್ತಾರೆ. ಒಂದು ವೇಳೆ ಯಾರಾದರೂ ಪ್ರಶ್ನೆ ಮಾಡಿದರೆ ಅಂಗಡಿ ಮಾಲೀಕರು ಪ್ರಶ್ನೆ ಮಾಡಿದವರ ವಿರುದ್ಧ ದರ್ಪ ತೋರಿ ಬೆದರಿಕೆ ಹಾಕುತ್ತಾರೆ. ಈ ಹಾವಳಿಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ. ಇನ್ನು ವಾಹನ ಸವಾರರ ಹಿತದೃಷ್ಟಿಯಿಂದ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
* ವಾಹನ ಸಂಚಾರ ಸ್ಥಗಿತ
ಸ್ಕೈವಾಕ್ ಕುಸಿತದಿಂದ ಹೆದ್ದಾರಿಯಲ್ಲಿ ಸುಮಾರು 4 ಕಿಮಿಗೂ ಅಧಿಕ ದೂರ ವಾಹನಗಳು ಸಂಚಾರ ಸ್ಥಗಿತಗೊಂಡಿತು. ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
* ಬದುಕುಳಿದ ಬಡಪಾಯಿ
ನಿತ್ಯ ಇದೇ ಸ್ಕೈವಾಕ್ ಮೇಲೆ ಮಲಗುತ್ತಿದ್ದ ಅನಾಥನೊಬ್ಬ ಟನೆ ವೇಳೆ ಮೆಟ್ಟಿಲು ಮೇಲೆ ಮಲಗಿದ್ದರಿಂದ ಯಾವುದೇ ಅಪಾಯ ಉಂಟಾಗಿಲ್ಲ.