

ಮುಂಬೈ: ಪ್ರತಿಷ್ಠಿತ ಮೋಟಾರು ವಾಹನ ತಯಾರಿಕಾ ಸಂಸ್ಥೆ ‘ಸ್ಕೋಡಾ ಆಟೋ’ ಸಂಸ್ಥೆಯು ತನ್ನ ನೂತನ ‘ಕುಶಾಕ್ ಎಸ್‌ಯುವಿ’ ಕಾರನ್ನು ಪರಿಚಯಿಸಿದೆ.
ಮುಂಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಕಾರನ್ನು ಅನಾವರಣಗೊಳಿಸಲಾಗಿದ್ದು, ಭಾರತೀಯ ಗ್ರಾಹಕರ ಅಗತ್ಯಗಳು ಮತ್ತು ಸಂಸ್ಥೆಯ ಸಾಂಪ್ರದಾಯಿಕ ವಿಶೇಷತೆಗಳನ್ನು ಒಳಗೊಂಡಿರುವ ವಾಹನದ ಆನ್‌ಲೈನ್ ಆರ್ಡರ್ ಬುಕಿಂಗ್ ಜೂನ್‌ಗೆ ಆರಂಭವಾಗಲಿದೆ. ಜುಲೈ ವೇಳೆಗೆ ಭಾರತದ ಗ್ರಾಹಕರಿಗೆ ಸಿಗಲಿದೆ.
ಸ್ಕೋಡಾದ ಭಾರತ್ 2.0 ಯೋಜನೆಯ ಮೊದಲನೇ ಎಸ್‌ಯುವಿಯಾಗಿ ಕುಶಾಕ್ ಅನಾವರಣಗೊಂಡಿದೆ. ಕಣ್ಸೆಳೆಯುವ ವಿನ್ಯಾಸ, ವಿಶಾಲ ಸ್ಥಳಾವಕಾಶ, ಗಮನಾರ್ಹ ಸುರಕ್ಷತೆಯ ಸೌಲಭ್ಯ, ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ದಕ್ಷ ಟಿಎಸ್‌ಐ ಇಂಜಿನ್ ಸಾಮರ್ಥ್ಯ ಸೇರಿ ಅನೇಕ ವೈಶಿಷ್ಟ್ಯಗಳು ಇದರಲ್ಲಿದೆ. ಸ್ಕೋಡಾ ಮತ್ತು ವೋಕ್ಸ್‌ವ್ಯಾಗನ್ ಸಂಸ್ಥೆಯ ನಾಲ್ಕು ವಾಹನಗಳ ವಿಶೇಷತೆಗಳನ್ನು ಇದರಲ್ಲಿ ಸೇರಿಸಲಾಗಿದೆ. ಮಧ್ಯಮ ಎಸ್‌ಯುವಿಗಳಲ್ಲಿ ಕುಶಾಕ್ ತನ್ನ ಗಟ್ಟಿತನವನ್ನು ತೋರಿಸಿಕೊಳ್ಳಲಿದೆ ಎನ್ನುತ್ತದೆ ಸ್ಕೋಡಾ ಸಂಸ್ಥೆ.
ಡಬಲ್ ಪೆಟ್ರೋಲ್ ಇಂಜಿನ್:
ಕುಶಾಕ್ ಎಸ್‌ಯುವಿನಲ್ಲಿ ದಕ್ಷ ಮತ್ತು ಶಕ್ತಿಶಾಲಿಯಾದ ಎರಡು ಪೆಟ್ರೋಲ್ ಎಂಜಿನ್‌ಗಳನ್ನು ಬಳಸಲಾಗಿದೆ. 1.0 ಲೀಟರ್‌ನ ತ್ರಿ ಸಿಲಿಂಡ್ರಿಕಲ್ ಟಿಎಸ್‌ಐ ಎಂಜಿನ್ ಮತ್ತು 1.5 ಲೀಟರ್ ಟಿಎಸ್‌ಐ ಎಂಜಿನ್‌ಗಳಿವೆ. ಟಿಎಸ್‌ಐ ಎಂಜಿನ್‌ಗಳು 85 ಕೆಡಬ್ಲ್ಯೂ (115 ಪಿಎಸ್) ಮತ್ತು 110 ಕೆಡಬ್ಲ್ಯೂ (150 ಪಿಎಸ್) ಶಕ್ತಿ ಹೊರಹೊಮ್ಮಿಸಲಿವೆ. ಈ ಎಂಜಿನ್‌ಗಳು ಬಿಎಸ್6 ಮಾಲಿನ್ಯ ನಿಯಂತ್ರಣ ಮಾನದಂಡಗಳಿಗೆ ಅನುಗುಣವಾಗಿವೆ. 6 ಸ್ಪೀಡ್ ಮ್ಯಾನುಯಲ್ ಗಿಯರ್ ಬಾಕ್ಸ್, 6 ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್‌ಮಿಷನ್/ 7 ಸ್ಪೀಡ್ ಡಿಎಸ್‌ಜಿ ಕಾರಿನಲ್ಲಿದೆ.
ಉತ್ತಮ ಗ್ರೌಂಡ್ ಕ್ಲಿಯರೆನ್ಸ್:
ಭಾರತದ ಬೇರೆ ಎಸ್‌ಯುವಿಗಳಿಗೆ ಹೋಲಿಸಿದರೆ ಸ್ಕೋಡಾ ಕುಶಾಕ್ ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರಲಿದೆ. 188 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗಿದೆ. ವಾಹನವು 4,221 ಎಂಎಂ ಉದ್ದ, 1,760 ಎಂಎಂ ಅಗಲ ಮತ್ತು 1,612 ಎಂಎಂ ಎತ್ತರವಿದೆ. 385 ಲೀಟರ್ ಬೂಟ್ ಸ್ಪೇಸ್ ನೀಡಲಾಗಿದೆ.
ಕಾರಿನ ಒಳಗೆ 10 ಇಂಚ್‌ನ ಫ್ರೀ ಸ್ಟ್ಯಾಂಡಿಂಗ್ ಇನ್ಫೊಟೇನ್‌ಮೆಂಟ್ ಕೊಡಲಾಗಿದೆ. ಇದರಲ್ಲೂ ಎರಡು ಆಯ್ಕೆಗಳಿದ್ದು, ಗ್ರಾಹಕರು ತಮ್ಮ ಸ್ಮಾರ್ಟ್ ೆನ್‌ಗಳನ್ನು ಕನೆಕ್ಟ್ ಮಾಡಿಕೊಳ್ಳಬಹುದು.
ಐದು ಬಣ್ಣಗಳಲ್ಲಿ ಲಭ್ಯ:
ಕಾರುಪ್ರಿಯರ ಮನಗೆಲ್ಲುವಂಥ ಚಿತ್ತಾಕರ್ಷಕ ವಿನ್ಯಾಸದ ಸ್ಕೋಡಾ ಕುಶಾಕ್ ಕಾರು ಜುಲೈ ವೇಳೆಗೆ ಭಾರತದ ಗ್ರಾಹಕರಿಗೆ ಸಿಗಲಿದೆ. ಕಾರ್ಬನ್ ಸ್ಟೀಲ್, ರಿಫ್ಲೆಕ್ಸ್ ಸಿಲ್ವರ್, ಕ್ಯಾಂಡಿ ವೈಟ್, ಕೆಂಪು ಮತ್ತು ಕಿತ್ತಳೆ ಬಣ್ಣದಲ್ಲಿ ಕಾರು ಮಾರುಕಟ್ಟೆಗೆ ಬರಲಿದೆ. ಕಾರಿಗೆ 11ರಿಂದ 16 ಲಕ್ಷ ರೂ. ಬೆಲೆ ನಿಗದಿಯಾಗುವ ಸಾಧ್ಯತೆಯಿದೆ.
ಗುರ್‌ಪ್ರತಾಪ್ ಬೋಪರೈ, ಸ್ಕೋಡಾ ಆಟೋ ವೋಕ್ಸ್‌ವ್ಯಾಗನ್ ಇಂಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ
ಭಾರತ 2.0 ಯೋಜನೆಯು ಭಾರತವನ್ನು ವಿಶ್ವದ ಅತಿದೊಡ್ಡ ಪ್ರಯಾಣಿಕ ವಾಹನ ಮಾರುಕಟ್ಟೆಯಾಗಿ ಮಾಡುವ ಉದ್ದೇಶ ಹೊಂದಿದೆ. ನಮ್ಮಲ್ಲಿ ಆ ಸಾಮರ್ಥ್ಯವಿದೆ ಮತ್ತು ಅದ್ಭುತ ಕ್ರಿಯಾತ್ಮಕತೆಯಿರುವ ಇಂಜಿನಿಯರ್‌ಗಳಿದ್ದಾರೆ. ದೇಶದಲ್ಲಿ ನಮ್ಮ ಮಾರುಕಟ್ಟೆಯನ್ನು 2029ರೊಳಗೆ ಶೇ. 83 ಹೆಚ್ಚಿಸಲು ಸ್ಕೋಡಾ ಕುಶಾಕ್ ಸಹಾಯಕವಾಗಲಿದೆ. ಈ ಕಾರು ಭಾರತದಲ್ಲಿ ವಿನ್ಯಾಸಗೊಂಡು ಭಾರತದಲ್ಲೇ ಅಭಿವೃದ್ಧಿಗೊಂಡಿರುವ ಜಾಗತಿಕ ಎಸ್‌ಯುವಿಯಾಗಿದೆ.