

ಗ್ಯಾಂಗ್ಟಕ್: ಜೂನ್ 10 ರಂದು ಸಿಕ್ಕಿಂನ ಮುಖ್ಯಮಂತ್ರಿಯಾಗಿ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾದ (ಎಸ್ಕೆಎಂ) ಮುಖ್ಯಸ್ಥ ಪ್ರೇಮ್ ಸಿಂಗ್ ತಮಾಂಗ್ ಅವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಸತತ ಎರಡನೇ ಬಾರಿಗೆ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲಿದ್ದಾರೆ.
ಇಂದು ಬೆಳಿಗ್ಗೆ ಮಿಂಟೋಕ್ಗ್ಯಾಂಗ್ನಲ್ಲಿರುವ ಮುಖ್ಯಮಂತ್ರಿಗಳ ನಿವಾಸದಲ್ಲಿ ನಡೆದದ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ (ಎಸ್ಕೆಎಂ) ಶಾಸಕಾಂಗ ಪಕ್ಷದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು. ಶನಿವಾರ ದೆಹಲಿಯಲ್ಲಿ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಮೋದಿ ಅವರು ಪ್ರಮಾಣವಚನ ಸ್ವೀಕರಿಸಲಿದ್ದು ಆ ಕಾರ್ಯಕ್ರಮದಲ್ಲಿ ತಮಾಂಗ್ ಕೂಡ ಭಾಗಿಯಾಗಲಿದ್ದಾರೆ. ತಮಾಂಗ್ ಶನಿವಾರ ನವದೆಹಲಿಗೆ ತೆರಳುವ ಸಾಧ್ಯತೆಯಿದೆ ಎಂದು ಎಸ್ಕೆಎಂ ನಾಯಕರೊಬ್ಬರು ತಿಳಿಸಿದ್ದಾರೆ. ತಮಂಗ್ ಮತ್ತು ಸಚಿವರ ಪ್ರದಗ್ರಹಣ ಸಮಾರಂಭ ಜೂನ್ 10 ರಂದು ಪಲ್ಜೋರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
“ಲೋಕಸಭಾ ಚುನಾವಣೆಯಲ್ಲಿ ಗೆಲುವಿಗಾಗಿ ನಾವು ಪ್ರಧಾನಿ ನರೇಂದ್ರ ಮೋದಿ ಮತ್ತು ಎನ್ಡಿಎ ಕೂಟವನ್ನು ಅಭಿನಂದಿಸುತ್ತೇವೆ. ನಮ್ಮ ದೇಶದ ಅಭಿವೃದ್ಧಿ ಮತ್ತು ಸಮೃದ್ಧಿಗಾಗಿ ಎನ್ಡಿಎಗೆ ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ ಪಕ್ಷ ಬೆಂಬಲ ನೀಡಲಿದೆ ಎಂದು ತಮಾಂಗ್ ಹೇಳಿದರು.
ಸಿಕ್ಕಿಂ ಜನತೆಗೆ ಮತ್ತು ಎಸ್ಕೆಎಂಗೆ ಮತ್ತೊಮ್ಮೆ ರಾಜ್ಯಕ್ಕೆ ಸೇವೆ ಸಲ್ಲಿಸಲು ಅವಕಾಶ ನೀಡಿದ್ದಕ್ಕಾಗಿ ಅವರು ಕೃತಜ್ಞತೆ ಸಲ್ಲಿಸಿದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಸಿಕ್ಕಿಂ ವಿಧಾನಸಭೆ ಮತ್ತು ಸಂಸತ್ತಿನ ಚುನಾವಣೆಯಲ್ಲಿ ಆಡಳಿತಾರೂಢ ಎಸ್ಕೆಎಂ 32 ಸ್ಥಾನಗಳಲ್ಲಿ 31 ಸ್ಥಾನಗಳನ್ನು ಗೆದ್ದು ಭರ್ಜರಿ ಜಯ ಸಾಧಿಸಿದರೆ, ಅದರ ಅಭ್ಯರ್ಥಿ ಇಂದ್ರ ಹ್ಯಾಂಗ್ ಸುಬ್ಬ ಅವರು ಏಕೈಕ ಲೋಕಸಭಾ ಕ್ಷೇತ್ರವನ್ನು ಭರ್ಜರಿ ಅಂತರದಿಂದ ಉಳಿಸಿಕೊಂಡಿದ್ದಾರೆ.