ಲಕ್ಷಾಂತರ ಕುಟುಂಬಗಳಿಗೆ ದಾರಿದೀಪ: ಎಸ್‌ಕೆಡಿಆರ್‌ಡಿಪಿ ಸಾಮಾಜಿಕ ಕಾರ್ಯಗಳು ಅನನ್ಯ

6-cpt-2p
Published on

ಚನ್ನಪಟ್ಟಣ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್‌ಕೆಡಿಆರ್‌ಡಿಪಿ) ಲಕ್ಷಾಂತರ ಕುಟುಂಬಗಳಿಗೆ ಬೆಳಕಾಗುವ ಮೂಲಕ ಮಾದರಿಯಾಗಿ ಬೆಳೆದು ನಿಂತಿದೆ. ಸಂಸ್ಥೆಯ ಸಾಮಾಜಿಕ ಕಾರ್ಯಗಳು ಅನನ್ಯ ಎಂದು ಡಿವೈಎಸ್‌ಪಿ ಕೆ.ಎನ್. ರಮೇಶ್ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಗುರುಕೃಪ ವಾಣಿಜ್ಯ ಸಮುಚ್ಛಯದಲ್ಲಿ ಮಂಗಳವಾರ ಆಯೋಜಿಸಿದ್ಧ ಗಾಂಧಿ ಸ್ಮತಿ ಮತ್ತು ವ್ಯಸನಮುಕ್ತ ಸಾಧಕರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಧರ್ಮಸ್ಥಳ ಸಂಸ್ಥೆ ಕೇವಲ ಧಾರ್ಮಿಕ ಕೆಲಸಕ್ಕೆ ಸೀಮಿತವಾಗದೆ ಶಿಕ್ಷಣ,ಆರೋಗ್ಯ ಹಾಗೂ ಸಾಮಾಜಿಕ ಕ್ಷೇತ್ರಗಳಿಗೆ ಸಾಕಷ್ಟು ಕೊಡುಗೆ ನೀಡುತ್ತಿದೆ. ರಾಜ್ಯದ ಲಕ್ಷಾಂತರ ಕುಟುಂಬಗಳಿಗೆ ದಾರಿದೀಪವಾಗಿದೆ. ಚಟ ಕಲಿಯುವುದು ಸುಲಭ ಆದರೆ, ಕಲಿತ ಚಟವನ್ನು ಬಿಡುವುದು ಅಸಾಧ್ಯ. ಆದರೆ, ಧರ್ಮಸ್ಥಳ ಮಂಜುನಾಥ ಸ್ವಾಮಿಯ ಸ್ಮರಣೆಯಿಂದ ಮದ್ಯವ್ಯಸನಿಗಳನ್ನು ಚಟಗಳಿಂದ ಮುಕ್ತರನ್ನಾಗಿ ಮಾಡಿ, ಮದ್ಯ ತ್ಯಜಿಸಿದ ಸಾಧಕರನ್ನು ಸಮಾರಂಭದಲ್ಲಿ ಸನ್ಮಾನಿಸಿ ಗೌರವಿಸಿ ಅವರಲ್ಲಿ ಹೊಸತನ ತುಂಬುತ್ತಿರುವ ಈ ಕಾರ್ಯಕ್ರಮ ಮಾದರಿಯಾಗಿದೆ ಎಂದರು.

ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ಎಂ.ಕೆ. ಸಿದ್ಧಲಿಂಗಯ್ಯ ಮಾತನಾಡಿ, ಸಂಸ್ಥೆಯ ಸೇವಾ ಕಾರ್ಯವನ್ನು ಎಷ್ಟು ಮೆಚ್ಚಿದರೂ ಸಾಲದು. ಸರ್ಕಾರದ ರೀತಿಯಲ್ಲಿಯೇ ಸಮಾಜದ ಸರ್ವ ಜನರ ಅಭಿವೃದ್ಧಿಗಾಗಿ ಸಂಸ್ಥೆ ಹಗಲಿರುಳು ಸೇವೆ ಸಲ್ಲಿಸುತ್ತಿದೆ. ಮಹಿಳಾ ಸಬಲೀಕರಣಕ್ಕೆ ತನ್ನದೇ ಆದ ಕರ್ತವ್ಯ ಸಲ್ಲಿಸುತ್ತಿರುವ ಸಂಸ್ಥೆಯ ಚಟುವಟಿಕೆ ನಿರಂತರವಾಗಿ ಸಾಗಲಿ ಎಂದು ಆಶಿಸಿದರು.

ಸಂಸ್ಥೆಯ ಜಿಲ್ಲಾ ನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಶ್ರೀ ಕ್ಷೇತ್ರ ಕೈಗೊಂಡಿರುವ ಕಾರ್ಯಗಳು ಸಮರೋಪಾದಿಯಲ್ಲಿ ಸಾಗುತ್ತಿರುವುದಕ್ಕೆ ಜನರ ಸಹಕಾರ ಮುಖ್ಯ ಕಾರಣವಾಗಿದೆ.

ವ್ಯಸನಮುಕ್ತರಾದವರು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ಮಾದರಿಯಾಗಿ ಕಳೆಯುವಂತೆ ಮನವಿ ಮಾಡಿದರು.ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ಚಿಕ್ಕಣ್ಣಯ್ಯ ಮಾತನಾಡಿದರು. ವೇದಿಕೆಯ ಸದಸ್ಯರಾದ ದೇವರಾಜೇಗೌಡ, ಮಾಯಿಗೌಡ, ಯೋಜನಾಧಿಕಾರಿ ರೇಷ್ಮಾ ಸೇರಿ ಹಲವರು ಉಪಸ್ಥಿತರಿದ್ದರು.

ಠಾಣೆಗಳ ಬಗೆಗಿನ ಭಯ ದೂರವಾಗಬೇಕು :  ಮನಸ್ಸಿಗೆ ನೋವಾದರೆ ದೇವಾಲಯಕ್ಕೆ ಹೋಗುತ್ತೇವೆ. ದೇಹಕ್ಕೆ ನೋವಾದರೆ ಆಸ್ಪತ್ರೆಗೆ ಹೋಗುತ್ತೇವೆ, ವ್ಯವಹಾರಗಳಿಗೆ ತೊಂದರೆಯಾದರೆ ಪೊಲೀಸ್ ಠಾಣೆಗಳಿಗೆ ಹೋಗುತ್ತೇವೆ. ದಿನದ 24 ತಾಸುಗಳ ಕಾಲ ಸಾರ್ವಜನಿಕರ ಸೇವೆಗೆ ಸಿದ್ಧವಾಗಿರುವ ಪೊಲೀಸ್ ಠಾಣೆಗಳ ಬಗ್ಗೆ ಜನರಲ್ಲಿರುವ ಭಯ ದೂರವಾಗಬೇಕೆಂದು ಇದೆವೇಳೆ ರಮೇಶ್ ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net