

ಆಂಧ್ರಪ್ರದೇಶ: ತೆಲುಗು ಚಿತ್ರರಂಗದ ಸ್ಟಾರ್ ನಟ ರಾಮ್ ಪೋತಿನೇನಿ ಮತ್ತು 'ಕಿಸ್' ಬೆಡಗಿ, ನಟಿ ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ ನಟಿಸಿರುವ 'ಸ್ಕಂದ' ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕದ ಬಗ್ಗೆ ಇದೀಗ ಹೊಸದೊಂದು ಮಾಹಿತಿ ಹೊರಬಿದ್ದಿದೆ.
ಇದನ್ನೂ ಓದಿ: ಮಧುಮೇಹಿಗಳು ಜೋಳ ತಿನ್ನುವುದು ಒಳ್ಳೆಯದೋ, ಕೆಟ್ಟದೋ?
ಇದೇ ಮೊದಲ ಬಾರಿಗೆ ರಾಮ್ ಪೋತಿನೇನಿ, ಬೋಯಪತಿ ಶ್ರೀನು ಅವರೊಂದಿಗೆ ಕೈಜೋಡಿಸಿದ್ದು, ಈ ಚಿತ್ರವು ಸಿನಿಪ್ರೇಕ್ಷಕರಲ್ಲಿ ಬಿಡುಗಡೆಗೂ ಮುನ್ನವೇ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಹಿಂದೆಯಷ್ಟೇ ಚಿತ್ರದ ಟೀಸರ್ ರಿಲೀಸ್ ಆಗಿ ಒಂದು ರೀತಿಯ ಸೆನ್ಸೇಷನ್ ನಿರ್ಮಾಣ ಮಾಡಿತ್ತು. ಇದೀಗ ಚಿತ್ರ ತಯಾರಕರು ಈಗಾಗಲೇ ತಿಳಿಸಿರುವಂತೆ 'ಸ್ಕಂದ' ಚಿತ್ರವು ಇದೇ ಸೆಪ್ಟೆಂಬರ್ 15 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ಸಜ್ಜಾಗಿದೆ.
ಈ ಮಧ್ಯೆ ಚಿತ್ರತಂಡ ಚಿತ್ರದ ಟ್ರೇಲರ್ ಅನ್ನು ಇದೇ ಆಗಸ್ಟ್ 26 ರಂದು ಅದ್ಧೂರಿಯಾಗಿ ರಿಲೀಸ್ ಮಾಡಲು ಮುಂದಾಗಿದೆ. ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ವಿಶೇಷ ಪ್ಲಾನ್ ಕೂಡ ಮಾಡಿಕೊಳ್ಳಲಾಗುತ್ತಿದೆ ಎಂಬ ಸುದ್ದಿ ಸದ್ಯ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಚಿತ್ರಕ್ಕೆ ಖ್ಯಾತ ಸಂಗೀತ ನಿರ್ದೇಶಕ ಥಮನ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಈಗಾಗಲೇ ರಿಲೀಸ್ ಆಗಿರುವ ಸಿನಿಮಾದ ಎರಡು ಹಾಡುಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಸೂಪರ್ ಹಿಟ್ ಆಗಿವೆ. ಸದ್ಯ ಟ್ರೇಲರ್ ಹೇಗಿರಲಿದೆ ಎಂಬ ನಿರೀಕ್ಷೆಗಳು ಇದೀಗ ಹೆಚ್ಚಿದೆ,(ಏಜೆನ್ಸೀಸ್).