VIDEO| ಕಂಠಪೂರ್ತಿ ಕುಡಿದು ನೆಲದ ಮೇಲೆಲ್ಲ ಹೊರಳಾಡಿ ಪೊಲೀಸರಿಂದ ನಾಗ ನೃತ್ಯ: ಸಂಕಷ್ಟ ತಂದ ವೈರಲ್​ ವಿಡಿಯೋ!

Police
Published on

ಹೈದರಾಬಾದ್​: ಸಹಾಯಕ ಸಬ್​ ಇನ್ಸ್​ಪೆಕ್ಟರ್​ ಸೇರಿದಂತೆ ಆರು ಮಂದಿ ತೆಲಂಗಾಣ ಪೊಲೀಸರು ಕಂಠಪೂರ್ತಿ ಕುಡಿದು ನಾಗಿನ್ ಅಥವಾ ನಾಗನೃತ್ಯ ಮಾಡುವ ವಿಡಿಯೋವೊಂದು ವೈರಲ್​ ಆಗಿ, ಇದೀಗ ಪೊಲೀಸರಿಗೆ ಸಂಕಷ್ಟ ಎದುರಾಗಿದ್ದು, ಕಾನೂನು ಕ್ರಮ ಎದುರಿಸುವಂತಾಗಿದೆ. ​​

ಸಮವಸ್ತ್ರದಲ್ಲಿ ಇರದ ಪೊಲೀಸ್​ ಸಿಬ್ಬಂದಿ ಮದುವೆ ಕಾರ್ಯವೊಂದಕ್ಕೆ ಭಾಗಿಯಾಗಿದ್ದ ಸಂದರ್ಭದಲ್ಲಿ ಕಂಠಪೂರ್ತಿ ಕುಡಿದು ಕುಣಿದು ಕುಪ್ಪಳಿಸಿದ್ದಾರೆ. ಆದರೆ, ಆ ಸಮಯದಲ್ಲಿ ಅವರು ಕರ್ತವ್ಯದಲ್ಲಿದ್ದರಾ ಎಂದು ಸ್ಪಷ್ಟವಾಗಿಲ್ಲ.

ವೈರಲ್​ ಆಗಿರುವ ವಿಡಿಯೋದಲ್ಲಿ ಪಾನಮತ್ತ ಸ್ಥಿತಿಯಲ್ಲಿರುವ ಪೊಲೀಸ್​ ಸಿಬ್ಬಂದಿ ಕಾರಿನಲ್ಲಿ ಜೋರು ಧ್ವನಿಯಲ್ಲಿ ಹಾಡೊಂದನ್ನು ಪ್ಲೇ ಮಾಡಿ, ನೆಲದ ಮೇಲೆಲ್ಲಾ ಹೊರಳಾಡಿ ನಾಗಿನ್​ ಡ್ಯಾನ್ಸ್​ ಮಾಡಿದ್ದಾರೆ. ಕೈಯಲ್ಲಿ ಬಿಯರ್​ ಬಾಟಲ್​ ಕೂಡ ಹಿಡಿದಿದ್ದಾರೆ.

ಈ ವಿಡಿಯೋವನ್ನು ಸೈಬರ್​ಬಾದ್​ ಪೊಲೀಸರಿಗೆ ಅಟ್ಯಾಚ್​ ಮಾಡಲಾಡಿದ್ದು, ಶಿಸ್ತು ಕ್ರಮ ಜರುಗಿಸಲು ಸೂಚಿಸಲಾಗಿದೆ. ಈಗಾಗಲೇ ವಿಡಿಯೋ ಸಂಬಂಧ ವರದಿಯನ್ನು ಕೇಳಲಾಗಿದೆ ಎಂದು ತಿಳಿದುಬಂದಿದೆ.

ಮಾಧ್ಯಮ ವರದಿಯ ಪ್ರಕಾರ ವಿಡಿಯೋದಲ್ಲಿರುವವರು ಕೊತ್ತೂರು ಪೊಲೀಸ್​ ಠಾಣೆಯ ಸಿಬ್ಬಂದಿಯಾಗಿದ್ದಾರೆ. ತಮ್ಮ ಸಹದ್ಯೋಗಿಯ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ಘಟನೆ ಕಳೆದ ವಾರ ನಡೆದಿದೆ ಎನ್ನಲಾಗಿದೆ.

ವಿಡಿಯೋದಲ್ಲಿರುವವರನ್ನು ಸಹಾಯಕ ಸಬ್​ ಇನ್ಸ್​ಪೆಕ್ಟರ್​ ಬಾಲಾ ಸ್ವಾಮಿ ಮತ್ತು ಕಾನ್​ಸ್ಟೇಬಲ್​ಗಳಾದ ಅಶೋಕ್​ ರೆಡ್ಡಿ, ಚಂದ್ರಮೋಹನ್​, ಅಮರ್​ನಾಥ್​, ವೆಂಕಟೇಶ್​ ಗೌಡ ಮತ್ತು ಹೋಮ್​ಗಾರ್ಡ್​ ರಾಮಕೃಷ್ಣ ರೆಡ್ಡಿ ಎಂದು ತಿಳಿದುಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಪೊಲೀಸರ ನಡೆಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ಅಧಿಕಾರಿಗಳು ತೆಲಂಗಾಣದಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುವುದು ಅಪರಾಧ. ತಪ್ಪಿತಸ್ಥರು ಎಂದು ಪರಿಗಣಿಸಿದ್ದಲ್ಲಿ ಅವರಿಗೆ ದಂಡ ಅಥವಾ ಜೈಲು ಶಿಕ್ಷೆಯನ್ನು ವಿಧಿಸಲಾಗುವುದು ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net