ಭಾರತದ ಆರು ನ್ಯಾಯಮೂರ್ತಿಗಳಿಗೆ H1N1 ಸೋಂಕು: ಅಗತ್ಯ ನಿರ್ದೇಶನ ನೀಡುವಂತೆ ಸಿಜೆಐಗೆ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಮನವಿ

sc
Published on

ನವದೆಹಲಿ: ಸುಪ್ರೀಂ ಕೋರ್ಟ್​ನ ಒಟ್ಟು ಆರು ನ್ಯಾಯಮೂರ್ತಿಗಳು H1N1 ವೈರಸ್​ ಸೋಂಕಿತರಾಗಿದ್ದು, ಹಂದಿ ಜ್ವರದಿಂದ ಬಳಲುತ್ತಿದ್ದಾರೆ. ಈ ಸಮಯದಲ್ಲಿ ಅಗತ್ಯ ನಿರ್ದೇಶನಗಳನ್ನು ನೀಡುವಂತೆ ಮುಖ್ಯ ನ್ಯಾಯಮೂರ್ತಿ ಎಸ್​ಎ ಬೊಬ್ಡೆ ಅವರ ಬಳಿ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ವಿನಂತಿ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸುಪ್ರೀಂ ಕೋರ್ಟ್​ನಲ್ಲಿ ಡಿ.ವೈ.ಚಂದ್ರಚೂಡ ಮಾಹಿತಿ ನೀಡಿದ್ದು, ಇದು ತುರ್ತು ಸಂದರ್ಭವನ್ನು ಹುಟ್ಟಿಹಾಕಿದೆ ಎಂದು ತಿಳಿಸಿದ್ದಾರೆ. ಸುಪ್ರೀಂ ಕೋರ್ಟ್​ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಅಗತ್ಯ ಚುಚ್ಚು ಮದ್ದನ್ನು ನೀಡಲು ಅವಕಾಶ ಮಾಡಿಕೊಡುವಂತೆ ಕೇಳಿಕೊಳ್ಳಲಾಗಿದೆ.

ಈ ಕುರಿತಾಗಿ ಚರ್ಚೆ ನಡೆಸುವ ಸಲುವಾಗಿ ಬೊಬ್ಡೆ ಅವರು ಸುಪ್ರೀಂ ಕೋರ್ಟ್​ನ ಬಾರ್​ ಅಸೋಸಿಯೇಷನ್​ (ಎಸ್​ಸಿಬಿಎ) ಅಧ್ಯಕ್ಷರನ್ನು ಕರೆದಿರುವುದಾಗಿ ತಿಳಿಸಲಾಗಿದೆ. ಸರ್ಕಾರವು ಸುಪ್ರೀಂ ಕೋರ್ಟ್​ನ ಆವರಣದಲ್ಲಿ ವಕೀಲರು ಮತ್ತು ನ್ಯಾಯಮೂರ್ತಿಗಳಿಗೆ ಚುಚ್ಚುಮದ್ದನ್ನು ನೀಡುವ ಸಲುವಾಗಿ ವ್ಯಾಕ್ಸಿನೇಷನ್​ ಶಿಬಿರವನ್ನು ಮಾಡಲಿದೆ ಎನ್ನಲಾಗಿದೆ. ಇದಕ್ಕೆಂದು ಎಸ್​ಸಿಬಿಎ 10 ಲಕ್ಷ ಹಣವನ್ನು ಮೀಸಲಿಡಲಿದ್ದು ನಾಳೆಯಿಂದಲೇ ಶಿಬಿರ ಆರಂಭವಾಗಲಿದೆ ಎನ್ನಲಾಗಿದೆ.

ಏನಿದು H1N1?: H1N1 ಅನ್ನು ಹಂದಿ ಜ್ವರವೆಂದು ಕರೆಯಲಾಗುತ್ತಿತ್ತು. ಮೊದಲಿಗೆ ಹಂದಿಯೊಂದಿಗೆ ನೇರ ಸಂಪರ್ಕ ಹೊಂದಿದ್ದ ಜನರಲ್ಲಿ ಈ ರೋಗ ಕಾಣಿಸಿಕೊಂಡ ಹಿನ್ನೆಲೆ ಇದನ್ನು ಆ ಹೆಸರಿನಿಂದ ಕರೆಯಲಾಗುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಇದು ವೈರಸ್​ನಿಂದ ಹರಡುವ ಕಾಯಿಲೆ ಎನ್ನುವುದು ಧೃಡವಾದ ಮೇಲೆ ಇದಕ್ಕೆ ಅಧಿಕೃತವಾಗಿ H1N1 ಎಂದು ಕರೆಯಲಾಯಿತು. ಈ ಕಾಯಿಲೆ ಇದ್ದವರಿಗೆ ಶೀತ, ಕೆಮ್ಮು, ಗಂಟಲು ನೋವು, ಉಸಿರು ಕಟ್ಟಕೊಳ್ಳುವುದು, ಕಣ್ಣು ಕೆಂಪಗಾಗುವುದು, ದೇಹದಲ್ಲಿ ನೋವು, ತಲೆ ನೋವು, ಆಯಾಸ, ಅತಿಸಾರ, ವಾಕರಿಕೆ, ವಾಂತಿ ಕಾಣಿಸಿಕೊಳ್ಳುತ್ತದೆ. ಆಗಾಗ ದೇಹದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net