

ಬೆಂಗಳೂರು: ದರೋಡೆ ಮಾಡಲು ಮಾರಕಾಸ್ತ್ರಗಳೊಂದಿಗೆ ಹೊಂಚು ಹಾಕಿ ಕಾದು ಕುಳಿತ್ತಿದ್ದ ಆರು ಮಂದಿ ಆರೋಪಿಗಳನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಗೋವಿಂದಪುರದ ಮೊಹಮ್ಮದ್ ಜಿಶಾನ್(೨೦), ಸೈಯದ್ ಅಬ್ದುಲ್ ಫರ್ಜಾನ್(೨೦), ಶೇಕ್ ಮೋಸಾ(೨೪), ಮೊಹಮದ್ ಬಿಲಾಲ್(೨೪), ಅಬ್ಬಾಸ್(೨೦), ಸೈಯದ್(೨೦) ಬಂಧಿತರು. ಆರೋಪಿಗಳಿಂದ ೪ ಲಕ್ಷ ರೂ. ಮೌಲ್ಯದ ಒಂದು ಎಲೆಕ್ಟ್ರಿಕ್ ದ್ವಿಚಕ್ರ ವಾಹನ, ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಮೂರು ದ್ವಿಚಕ್ರ ವಾಹನಗಳು ಹಾಗೂ ಮೂರು ಲಾಂಗ್‌ಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ನಾಗವಾರ ವೈಯಾಲಿ ಕಾವಲ್ ಲೇಔಟ್ ಸಮೀಪದ ರಸ್ತೆಯಲ್ಲಿ ಕೆಲವರು ಮಾರಕಾಸ್ತ್ರ ಹಿಡಿದು ದರೋಡೆಗೆ ಹೊಂಚು ಹಾಕಿ ನಿಂತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರು ಮಂದಿ ಆರೋಪಿಗಳ ಪೈಕಿ ಇಬ್ಬರು ಅಪರಾಧ ಹಿನ್ನೆವುಳ್ಳವರಾಗಿದ್ದಾರೆ. ಸದ್ಯ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.