

ಬೆಂಗಳೂರು: ಎಸಿ (ಉಪ ವಿಭಾಗಾಧಿಕಾರಿ) ನ್ಯಾಯಾಲಯಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳನ್ನು ಮುಂದಿನ ಆರು ತಿಂಗಳಲ್ಲಿ ವಿಲೇಗೊಳಿಸಿ ಎಂದು ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸಮಯದ ಗಡುವು ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಬುಧವಾರ ರಾಜ್ಯದ ಎಲ್ಲಾ ಉಪ ವಿಭಾಗಾಧಿಕಾರಿಗಳ ಜತೆ ಎಸಿ ಕೋರ್ಟ್‌ಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.
ಕಳೆದ ವರ್ಷ ನಾನು ಕಂದಾಯ ಇಲಾಖೆ ಸಚಿವನಾಗಿ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಎಸಿ ನ್ಯಾಯಾಲಯಗಳಲ್ಲಿ 73,682 ತಕರಾರು ಪ್ರಕರಣಗಳು ಬಾಕಿ ಇದ್ದವು. ಈ ಪೈಕಿ 33,207 ಪ್ರಕರಣಗಳನ್ನು ಕೇವಲ ಒಂದು ವರ್ಷದ ಅವಧಿಯಲ್ಲಿ ಇತ್ಯರ್ಥಗೊಳಿಸಿರುವುದು ಉತ್ತಮ ಬೆಳವಣಿಗೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಸಿ ಕೋರ್ಟ್‌ನಲ್ಲಿರುವ ತಕರಾರು ಪ್ರಕರಣಗಳನ್ನು ಆರು ತಿಂಗಳ ಒಳಗೆ ವಿಲೇವಾರಿಗೊಳಿಸಬೇಕು ಎಂಬುದು ಕಾನೂನು. ಸಾಗಿಬಂದ ಹಾದಿ ಸಣ್ಣದಿದ್ದು, ಕ್ರಮಿಸಬೇಕಾದ ದೂರ ಇನ್ನೂ ಸಾಕಷ್ಟಿದೆ. ಕನಿಷ್ಟ 40 ಸಾವಿರ ತಕರಾರು ಪ್ರಕರಣಗಳು ಇನ್ನೂ ಬಾಕಿ ಇವೆ. ಮುಂದಿನ ಆರು ತಿಂಗಳಲ್ಲಿ ಈ ಪ್ರಕರಣಗಳನ್ನೂ ಇತ್ಯರ್ಥಗೊಳಿಸಬೇಕು. ಕೆಲವರು ಇನ್ನೂ ಟ್ರ್ಯಾಕ್‌ಗೆ ಬಂದಿಲ್ಲ ಎಂದು ಎಚ್ಚರಿಸಿದರು.
ಮುಂದಿನ ತಿಂಗಳ ಮೊದಲ ವಾರವೂ ಮತ್ತೊಂದು ಸಭೆ ನಡೆಸಲಾಗುವುದು. ಆ ವೇಳೆಗೆ ಅಧಿಕಾರಿಗಳು ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ಎಷ್ಟು ಪ್ರಕರಣಗಳನ್ನು ವಿಲೇಗೊಳಿಸಿದ್ದೀರಿ ಎಂದು ಪ್ರಗತಿ ಪರಿಶೀಲನೆ ನಡೆಸಲಾಗುವುದು. ಹೀಗಾಗಿ ತಮ್ಮ ಕೆಲಸಗಳಿಗೆ ಮತ್ತಷ್ಟು ವೇಗ ನೀಡಿ ಎಂದು ಬಿಸಿಮುಟ್ಟಿಸಿದರು.
ತಕರಾರು ಪ್ರಕರಣಗಳನ್ನು ಇತ್ಯರ್ಥಗೊಳಿಸಿ ರೈತರಿಗೆ ಶೀಘ್ರ ನ್ಯಾಯ ಒದಗಿಸುವ ಸಲುವಾಗಿ, ರೆಗ್ಯುಲರ್ ಕೋರ್ಟ್‌ಗಳ ಜತೆ ತುಮಕೂರು, ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಕುಂದಾಪುರ ಸೇರಿ 11 ಜಿಲ್ಲೆಗಳಲ್ಲಿ 20ಕ್ಕೂ ಅಧಿಕ ವಿಶೇಷ ನ್ಯಾಯಾಲಯಗಳಿಗೆ ಚಾಲನೆ ನೀಡಲಾಗಿದೆ. ಈ ಮೂಲಕ ಪ್ರಕರಣಗಳ ವಿಲೇವಾರಿಗೆ ವೇಗ ತುಂಬಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.