ಜಾಗದ ವಿಚಾರಕ್ಕೆ ದೊಡ್ಡಪ್ಪನ ಮಗನ ಮೇಲೆ ಹಲ್ಲೆ : ಆರು ಮಂದಿಯ ಸೆರೆ

Arrest Kaidhi
Published on

ಬೆಂಗಳೂರು: ಜಾಗದ ವಿಚಾರಕ್ಕೆ ಜಗಳ ನಡೆದು ದೊಡ್ಡಪ್ಪನ ಮಗನ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ ಆರೋಪದಡಿ ಗಾಯಾಳುವಿನ ಚಿಕ್ಕಪ್ಪನ ಅಪ್ರಾಪ್ತ ಪುತ್ರ ಸೇರಿ ಆರು ಮಂದಿ ಆರೋಪಿಗಳನ್ನು ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಹಕಾರನಗರದ ಸತೀಶ್, ಭರತ್, ತೇಜಸ್, ಗಣೇಶ್, ಪ್ರೇಮ್ ಹಾಗೂ ಓರ್ವ ಅಪ್ರಾಪ್ತ ಬಂಧಿತರು. ಆರೋಪಿಗಳು ಏ.೨೫ರಂದು ರಾತ್ರಿ ಸಹಕಾರದ ಬಿಬಿಎಂಪಿ ಇನ್‌ಡೋರ್ ಸ್ಟೇಡಿಯಂನ ಜಿಮ್‌ನಲ್ಲಿ ಮುನಿಕುಮಾರ್(೩೦) ಎಂಬಾತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು. ಈ ಸಂಬಂಧ ನೀಡಲಾದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ಕಾರ್ಯಾಚರಣೆ ನಡೆಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಲ್ಲೆಗೊಳಗಾದ ಮುನಿಕುಮಾರ್ ತಂದೆಯಾದ ಮುನಿರಾಜು ಕುಟುಂಬಕ್ಕೂ ಮತ್ತು ಅವರ ತಮ್ಮ ಚಿಕ್ಕಮುನಿಯಪ್ಪ ಕುಟುಂಬದ ನಡುವೆ ಜಾಗದ ವಿಚಾರಕ್ಕೆ ಗಲಾಟೆಗಳು ಆಗುತ್ತಿದ್ದವು. ಇದೇ ವಿಚಾರಕ್ಕೆ ಏ.೨೨ರಂದು ಕೂಡ ಎರಡೂ ಕುಟುಂಬಗಳು ನಡುವೆ ಗಲಾಟೆಯಾಗಿತ್ತು. ಈ ವೇಳೆ ಚಿಕ್ಕಮುನಿಯಪ್ಪನ ಅಪ್ರಾಪ್ತ ಮಗ ತನ್ನ ದೊಡ್ಡಪ್ಪನ ಮಗನಾದ ಮುನಿಕುಮಾರ್‌ಗೆ ಜೀವ ಬೆದರಿಕೆ ಹಾಕಿದ್ದ. ಅದರಂತೆ ಏ.೨೫ರಂದು ರಾತ್ರಿ ಮುನಿಕುಮಾರ್ ಸಹಕಾರದ ಬಿಬಿಎಂಪಿ ಇನ್‌ಡೋರ್ ಸ್ಟೇಡಿಯಂನ ಜಿಮ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಹೊರಟ್ಟಿದ್ದ. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿದ್ದ ಅಪ್ರಾಪ್ತ ಹಾಗೂ ಆತನ ಸಹಚರರು ರಾಡ್‌ನಿಂದ ಮುನಿಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ದ್ವಿಚಕ್ರ ವಾಹನ ಬಿಟ್ಟು ಜಿಮ್‌ನೊಳಗೆ ಮುನಿಕುಮಾರ್ ಓಡಿ ಹೋಗಿದ್ದರು. ಅಲ್ಲಿಗೆ ಬಂದಿರುವ ಆರೋಪಿಗಳು ರಾಡ್ ಹಾಗೂ ಲಾಂಗ್‌ನಿಂದ ಮುನಿಕುಮಾರ್ ಕುತ್ತಿಗೆ, ಕೈ, ತಲೆಗೆ ಹಲ್ಲೆ ಮಾಡಿದ್ದಾರೆ. ಅಷ್ಟರಲ್ಲಿ ಜಿಮ್‌ನಲ್ಲಿದ್ದವರು ಓಡಿ ಬಂದ ಹಿನ್ನೆಲೆಯಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಬಳಿಕ ಮಾರಣಾಂತಿಕ ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡಿದ್ದ ಮುನಿಕುಮಾರ್‌ನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಈ ಸಂಬಂಧ ಮುನಿಕುಮಾರ್ ಪತ್ನಿ ನೀಡಿದ ದೂರಿನ ಮೇರೆಗೆ ಕೊಡಿಗೇಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಬಳಿಕ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net