

ನವದೆಹಲಿ: ದೇಶದ ವೀರ ಯೋಧರಿಗೆ ನೀಡುವ ಶೌರ್ಯ ಚಕ್ರ ಪ್ರಶಸ್ತಿ ಪ್ರಕಟವಾಗಿದ್ದು ಈ ಬಾರಿ ಆರು ಮಂದಿ ಯೋಧರು ಭಾಜನರಾಗಿದ್ದಾರೆ. ಅದರಲ್ಲಿ ಓರ್ವರಿಗೆ ಮರಣೋತ್ತರವಾಗಿ ನೀಡಲಾಗುತ್ತಿದೆ.
ಲೆಫ್ಟಿನಂಟ್ ಕರ್ನಲ್ ಜ್ಯೋತಿ ಲಾಮಾ, ಮೇಜರ್ ಕೊಂಜೆಂಗ್‌ಭಾಮ್ ಬಿಜೆಂದ್ರ ಸಿಂಗ್, ನಾಯಬ್ ಸುಬೇಧಾರ್ ನರೇಂದ್ರ್ ಸಿಂಗ್, ನಾಯಕ್ ನರೇಶ್ ಕುಮಾರ್ ಮತ್ತು ಸಿಪಾಯಿ ಕೆ. ಒರಾನ್ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ನಾಳೆ (ಜ.26) ಶೌರ್ಯ ಚಕ್ರ ಪ್ರಶಸ್ತಿ ಸ್ವೀಕಾರ ಮಾಡಲಿದ್ದಾರೆ.
ಸುಬೇಧಾರ್ ಸೋಂಬೀರ್ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸೋಂಬೀರ್ ಅವರು ಜಮ್ಮುಕಾಶ್ಮೀರದಲ್ಲಿ ಉಗ್ರರ ವಿರುದ್ಧ ಹೋರಾಡುವಾಗ ಹುತಾತ್ಮರಾಗಿದ್ದಾರೆ.
ಇನ್ನು ಸಿಪಾಯಿ ಒರಾನ್ ಅವರು ಗಡಿ ನಿಯಂತ್ರಣಾ ರೇಖೆ ಬಳಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗ ಉಗ್ರರು ಹೊಡೆದ ಗುಂಡು ಅವರ ಬುಲೆಟ್ ಪ್ರೂಫ್ ಜಾಕೆಟ್ಗೆ ಬಿದ್ದಿತ್ತು. ಆದರೆ ಧೃತಿಗೆಡದ ಒರಾನ್, ಒಂಭತ್ತು ಗ್ರೆನೇಡ್ಗಳನ್ನು ಉಗ್ರರೆಡೆಗೆ ಫೈರ್ ಮಾಡಿದ್ದರು. ಅವರ ದಾಳಿಗೆ ಇಬ್ಬರು ಉಗ್ರರು ಹತರಾಗಿದ್ದರು.
ಇನ್ನು ಲೆಫ್ಟಿನೆಂಟ್ ಜನರಲ್ ಜ್ಯೋತಿ ಲಾಮಾ ಅವರು ಕಳೆದ ಜುಲೈನಲ್ಲಿ ಮಣಿಪುರದಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸಕ್ರಿಯ ಉಗ್ರ ಸಂಘಟನೆಗಳ 14 ಉಗ್ರರನ್ನು ಜೀವಂತ ಸೆರೆಹಿಡಿದಿದ್ದಾರೆ. ಇದೇ ಕಾರಣಕ್ಕೆ ಅವರಿಗೆ ಶೌರ್ಯ ಚಕ್ರ ಪ್ರದಾನ ಮಾಡಲಾಗುತ್ತಿದೆ.
ಭಾರತೀಯ ಸೇನೆಯ ಪ್ಯಾರಾಚೂಟ್ ರೆಜಿಮೆಂಟ್ನ (ವಿಶೇಷ ಪಡೆ) ಸುಬೇಧಾರ್ ನರೇಂದ್ರ ಸಿಂಗ್ ಅವರು ಗಡಿ ನಿಯಂತ್ರಣಾ ರೇಖೆ ಬಳಿ ಉಗ್ರರ ವಿರುದ್ಧ ಹೋರಾಡಿ ಇಬ್ಬರನ್ನು ಕೊಂದಿದ್ದಾರೆ. ಅಲ್ಲದೆ, ಓರ್ವ ಉಗ್ರ ಇವರ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ. ಈ ಉಗ್ರರು ಭಾರತೀಯ ಸೇನಾ ನೆಲೆಗಳನ್ನು ಗುರಿಯಾಗಿಟ್ಟುಕೊಂದು ದಾಳಿ ಮಾಡಲು ಹೊಂಚು ಹಾಕಿದ್ದರು.
ಇವರೊಟ್ಟಿಗೆ ಸೇನಾ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಎಸ್.ಕೆ.ಸೈನಿ, ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ ಸಿಂಗ್ ಮತ್ತು ಅಡ್ಜಟಂಟ್ ಜನರಲ್ ಲೆಫ್ಟಿನೆಂಟ್ ಜನರಲ್ ಅರವಿಂದ್ ದತ್ತಾ ಸೇರಿ ಒಟ್ಟು 19 ಅಧಿಕಾರಿಗಳು ಪರಮ ವಿಶಿಷ್ಟ ಸೇವಾ ಪದಕವನ್ನು ಪಡೆಯಲಿದ್ದಾರೆ.
ನಾಲ್ವರು ಸೇನಾ ಅಧಿಕಾರಿಗಳು ಹಾಗೂ 104 ಸೇನಾ ಸಿಬ್ಬಂದಿ ಆರ್ಮಿ ಶೌರ್ಯ ಮೆಡಲ್ ಸ್ವೀಕರಿಸಲಿದ್ದಾರೆ.
ಕಾರ್ಗಿಲ್ ಯುದ್ಧದ ಹೀರೋಗಳಾದ ಲೆಫ್ಟಿನೆಂಟ್ ಜನರಲ್ ವೈ.ಕೆ.ಜೋಶಿ, 15 ಕಾರ್ಪ್ಸ್ನ ಕಮಾಂಡರ್ ಕೆ.ಜೆ.ಧಿಲ್ಲಾನ್, 3 ಕಾರ್ಪ್ಸ್ ಕಮಾಂಡರ್ ರಾಜೀವ್ ಸಿರೋಹಿ ಮತ್ತು 16 ಕಾರ್ಪ್ಸ್ನ ಮಾಜಿ ಮುಖ್ಯಸ್ಥ ಪರಮಜಿತ್ ಸಿಂಗ್ ಅವರು ಅತ್ಯುತ್ತಮ ಯುದ್ಧ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.(ಏಜೆನ್ಸೀಸ್)
ಶೌರ್ಯ ಚಕ್ರ, ಅತ್ಯುತ್ತಮ ಯುದ್ಧ ಸೇವಾ ಪದಕ, ಯೋಧರು, Soldiers, Shaurya Chakra, Republic Day,