Bihar Election | ಆಸಿಡ್​ ದಾಳಿ, ಯೋಗಿ ಬುಲ್ಡೋಜರ್​, ಓವೈಸಿ ಮುಸ್ಲಿಂ ಅಸ್ತ್ರ..ಇಲ್ಲಿದೆ ಇಡೀ ದೇಶದ ಗಮನ ಸೆಳೆದ ಸಿವಾನ್​ ಕ್ಷೇತ್ರದ ಕರಾಳ ಇತಿಹಾಸ

Bihar Election
Published on

Patna: ಬಿಹಾರ ವಿಧಾನಸಭಾ ಚುನಾವಣೆಯ (Bihar Election) ದಿನಾಂಕ ಸಮೀಪಿಸುತ್ತಿದ್ದಂತೆ, ಎಲ್ಲ ಪಕ್ಷಗಳು ಅಬ್ಬರದ ಪ್ರಚಾರ ನಡೆಸುತ್ತಿದ್ದು, ಒಂದು ಕಾಲದಲ್ಲಿ ಶಾಂತ ಜಿಲ್ಲೆಯಾಗಿದ್ದ ಸಿವಾನ್, ಇದ್ದಕ್ಕಿದ್ದಂತೆ ರಾಜ್ಯದ ಅತ್ಯಂತ ಬೇಡಿಕೆಯ ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಟ್ಟಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸೇರಿದಂತೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮತ್ತು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿಯವರೆಗೆ ಹಲವಾರು ಪ್ರಮುಖ ನಾಯಕರು ಈ ಸಣ್ಣ ಪಟ್ಟಣಕ್ಕೆ ಹೆಜ್ಜೆ ಹಾಕುತ್ತಿದ್ದಾರೆ.

ಅಸಾದುದ್ದೀನ್​​​ ಓವೈಸಿ..

ಬಿಹಾರದ ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇಕಡಾ 17 ರಷ್ಟು ಜನ ಮುಸ್ಲಿಮರಿದ್ದು, ಅವರೆಲ್ಲಾ ನ್ಯಾಯ ಮತ್ತು ಪ್ರಾತಿನಿಧ್ಯದಿಂದ ವಂಚಿತರಾಗಿದ್ದಾರೆ ಎಂದು ಆರೋಪಿಸುವ ಮೂಲಕ ಸಂಸದ ಅಸಾದುದ್ದೀನ್​ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜ್ಯದ ಎಲ್ಲ ಪ್ರಮುಖ ನಾಯಕರ ವಿರುದ್ಧ ಬೆಂಕಿಯುಗುಳಿದ್ದಾರೆ.

ಶೇಕಡಾ 3 ಅಥವಾ ಶೇಕಡ 14 ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯಗಳು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳನ್ನು ಹೊಂದಬಹುದಾದರೆ, ಶೇಕಡ 17 ರಷ್ಟಿರುವ ಮುಸ್ಲಿಮರು ಅವರಿಗೆ ಕಾರ್ಪೆಟ್ ಹಾಸಬೇಕೇ?ಎಂದು ಪ್ರಶ್ನಿಸಿದರು. ಬಿಹಾರದಲ್ಲಿ 20 ವರ್ಷಗಳ ಕಾಲ ಅಧಿಕಾರ ನಡೆಸಿದ ನಿತೀಶ್ ಕುಮಾರ್​ ಹೃದಯ ರಾಜ್‌ಗೀರ್‌ಗಾಗಿ ಬಡಿದುಕೊಳ್ಳುತ್ತಿದೆ, ಲಾಲು ಮತ್ತು ರಾಬ್ರಿ ಮನಸ್ಸು ತಮ್ಮ ಮಗ ತೇಜಶ್ವಿಗಾಗಿ ಮಿಡಿಯುತ್ತಿದೆ, ಪ್ರಧಾನಿ ಮೋದಿಯ ಹೃದಯ? ಅದು ಅಹಮದಾಬಾದ್‌ಗಾಗಿ ಮಾತ್ರ ಬಡಿದುಕೊಳ್ಳುತ್ತದೆ, ಆದರೆ ಬಿಹಾರದ ಮುಸ್ಲಿಮರ ಹೃದಯಗಳಿಗಾಗಿ ಯಾರು ಮಾತನಾಡುತ್ತಾರೆ? ಎಂದು ಪ್ರಶ್ನಿಸಿದರು. ಬಿಜೆಪಿ ಸದಾ ದ್ವೇಷವನ್ನು ಹರಡುತ್ತಿದೆ, ಆದರೆ ಆರ್‌ಜೆಡಿ ಮತ್ತು ಜೆಡಿಯು ಮುಸ್ಲಿಮರನ್ನು ಮೌನಗೊಳಿಸಲು ಭಯವನ್ನು ಬಳಸಿಕೊಂಡಿವೆ ಎಂದು ಆರೋಪಿಸಿದರು.

ಯೋಗಿ ಆದಿತ್ಯನಾಥ್​ ಪ್ರತಿದಾಳಿ...

ಇದಾದ ಒಂದು ದಿನದ ಬಳಿಕ ಸಿವಾನ್​ ಕ್ಷೇತ್ರಕ್ಕೆ ಬಂದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ತಮ್ಮ ಆಕ್ರಮಣಕಾರಿ ಶೈಲಿಯಲ್ಲಿ ಜಂಗಲ್ ರಾಜ್ ಆಡಳಿತಕ್ಕೆ ಅವಕಾಶ ನೀಡಬೇಡಿ, ಮೂರು ದಶಕಗಳ ಹಿಂದೆ ರಾಮ ರಥಯಾತ್ರೆ ನಡೆಸಿದ್ದ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರನ್ನು ಬಂಧಿಸುವ ಮೂಲಕ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ದೊಡ್ಡ ಪಾಪ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬುಧವಾರ (ಅ 29) ಆರೋಪಿಸಿದ್ದಾರೆ.

ಬಿಹಾರದಲ್ಲಿ ಸಿವಾನ್, ಭೋಜ್‌ಪುರ ಮತ್ತು ಬಕ್ಸಾರ್ ಜಿಲ್ಲೆಗಳಲ್ಲಿ ನಡೆಸ ಪ್ರಚಾರ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, 1990 ರ ಸಮಷ್ಟಿಪುರದಲ್ಲಿ ನಡೆದ ಘಟನೆಯನ್ನು ನೆನಪಿಸಿಕೊಂಡರು, ಆರ್‌ಜೆಡಿ ವರಿಷ್ಠರು ತಮ್ಮ ಜಾತ್ಯತೀತ ನಿಲುವುಗಳನ್ನು ಪ್ರತಿಪಾದಿಸುವಾಗ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 500 ವರ್ಷಗಳಿಂದ ದೇಶವನ್ನು ಕಲುಷಿತಗೊಳಿಸಿದ್ದ ಕಳಂಕವನ್ನು ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣವು ಅಳಿಸಿಹಾಕಿದೆ ಎಂದರು.

ತಮ್ಮ ಭಾಷಣದುದ್ದಕ್ಕೂ ಹಿಂದೂ ಮತದಾರರನ್ನು ಒಟ್ಟುಗೂಡಿಸುವ ಸ್ಪಷ್ಟ ಸಂದೇಶ ಸಾರಿದ ಯೋಗಿ, ಎಲ್ಲರೂ ಒಗ್ಗಟ್ಟಾಗಿರಿ, ಮುಸ್ಲಿಮರು ನಿಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ ಎಂದರು .ರಾಜ್ಯದಲ್ಲಿ 2005 ಕ್ಕಿಂತ ಮೊದಲು, 'ಸಬ್ಕಾ ಸಾಥ್, ಪರಿವಾರ್ ಕಾ ವಿಕಾಸ್' ಇತ್ತು, ಈಗ ಡಬಲ್ ಎಂಜಿನ್ ಸರ್ಕಾರದ ನೆರವಿನಿಂದ ಬಿಹಾರದ ಮಹಿಳೆಯರು ಸಬಲರಾಗುತ್ತಿದ್ದಾರೆ, ಈ ಸರ್ಕಾರ ಅಭಿವೃದ್ಧಿ ಮತ್ತು ಮಹಿಳಾ ಸುರಕ್ಷತೆಯನ್ನು ಮಾತ್ರ ಖಾತರಿಪಡಿಸುತ್ತದೆ, ಸಬ್ಕಾ ಸಾಥ್, ಸಬ್ಕಾ ವಿಕಾಸ್ ತತ್ವದ ಮೇಲೆ ಕಾರ್ಯನಿರ್ವಹಿಸುತ್ತಿದೆ.

AIMIM ಪಕ್ಕದ ಸೀಟ್ ಅಲ್ಲ, ಮುಖ್ಯ ಸೀಟ್

ಈ ಬಾರಿ ರಾಜಕೀಯ ಪರಿಸ್ಥಿತಿ ಬದಲಾಗಬಹುದು ಎಂದು ಸ್ಥಳೀಯ AIMIM ನಾಯಕರು ವಿಶ್ವಾಸವಿಟ್ಟುಕೊಂಡಿದ್ದು, ಸಿವಾನ್‌ನ AIMIM ಅಭ್ಯರ್ಥಿ ಮೊಹಮ್ಮದ್ ಕೈಫ್ ಇಂಡಿಯಾ ಟುಡೇಯೊಂದಿಗೆ ಮಾತನಾಡಿದ್ದು, ನಿತೀಶ್ ಕುಮಾರ್ ಶೇಕಡಾ 16 ರಷ್ಟು ಮತಗಳೊಂದಿಗೆ ಮುಖ್ಯಮಂತ್ರಿಯಾಗಲು ಸಾಧ್ಯವಾದರೆ, ನಾವು ಶೇಕಡಾ 17 ರಷ್ಟು ಮತಗಳೊಂದಿಗೆ ಏಕೆ ಮುಖ್ಯಮಂತ್ರಿಯಾಗಬಾರದು? ಈ ಬಾರಿ ನಮ್ಮ ಪ್ರಮುಖ ಗುರಿ ಆ ಹುದ್ದೆಯೇ ಎಂದರು.

ಯೋಗಿ ಆದಿತ್ಯನಾಥ್​ಗೆ ಯಾವುದೋ ಹಂತದಲ್ಲಿ ರಕ್ತ ವರ್ಗಾವಣೆ ಆಗಿರಬೇಕು. ಅವರು ಅಸ್ವಸ್ಥರಾಗಿದ್ದರೆ, ಈಗ ಮುಸ್ಲಿಮರೆಲ್ಲರೂ ಒಂದಾಗಿದ್ದೇವೆ, ನಾವು ರಾಜ್ಯವನ್ನು ಆಳುತ್ತೇವೆ. ಯಾವುದೇ ಪಕ್ಷವನ್ನು ಏಕೆ ಬೇಡಿಕೊಳ್ಳಬೇಕು? ಈ ಚುನಾವಣೆಯನ್ನು ಒಗ್ಗಟ್ಟಿನಿಂದ ಗೆಲ್ಲುತ್ತೇವೆ. ಈ ಬಾರಿಯ ಹೋರಾಟ ನಮ್ಮ ಸಮುದಾಯಕ್ಕಾಗಿ. ತೇಜಸ್ವಿ ಯಾದವ್ ಮುಸ್ಲಿಮರನ್ನು ವೋಟ್​ಗಾಗಿ ಮಾತ್ರ ಬಳಸಿಕೊಂಡಿದ್ದಾರೆ. ಈ ಬಾರಿ ಅವರಿಗೆ ತಕ್ಕ ಉತ್ತರ ಸಿಗಲಿದೆ ಎಂದರು.

ಶಹಾಬುದ್ದೀನ್ ಯುಗದ ನೆರಳುಗಳು

ಸಿವಾನ್‌ನ ಹಳೆಯ ತಲೆಮಾರಿನ ಜನರು 1990 ಮತ್ತು 2000ದ ದಶಕದ ಆಘಾತವನ್ನು ಇನ್ನೂ ಮರೆತಿಲ್ಲ. ಶಹಾಬುದ್ದೀನ್ ಯುಗವನ್ನು ಹಿಂದೂ ಮತದಾರರು ಇನ್ನೂ ನೆನಪಿಸಿಕೊಳ್ಳುತ್ತಾರೆ. ಈ ವಿಷಯವಾಗಿ ಮಾತನಾಡಿದ ಸ್ಥಳೀಯ ನಿವಾಸಿಯೊಬ್ಬರು, ನಮಗೆ ಆ ಆಸಿಡ್ ದಾಳಿಗಳು ನೆನಪಿವೆ. ಜನರು ಹೊರಗೆ ಹೆಜ್ಜೆ ಇಡಲು ಸಹ ಹೆದರುತ್ತಿದ್ದರು, ಆ ದಿನಗಳು ಮರುಕಳಿಸಲು ನಾವು ಬಿಡುವುದಿಲ್ಲ ಎಂದರು.

ಯೋಗಿ ಆದಿತ್ಯನಾಥ್ ಹೇಳಿದ್ದು ಸರಿಯಾಗಿದೆ, ಆರ್‌ಜೆಡಿ ಸೇರಿದಂತೆ ಇತರ ಮಿತ್ರಪಕ್ಷಗಳು ಬಿಹಾರವನ್ನು ಮತ್ತೆ ಜಂಗಲ್​​ ರಾಜ್​​ದತ್ತ ತೆಗೆದುಕೊಂಡು ಹೋಗಲಿದ್ದು, ನಾವು ಅದಕ್ಕೆ ಅವಕಾಶ ನೀಡುವುದಿಲ್ಲ. ಶಹಬುದ್ದೀನ್ ಆಕ್ರಮಣದ ಬಗ್ಗೆ ನಮಗೆ ಅರಿವಿದೆ, ಹಿಂದು ಧರ್ಮದ ಪ್ರಕಾರ ನಾವು ಸತ್ತವರನ್ನು ಚಿತೆಯಲ್ಲಿ ಸುಡುತ್ತೇವೆ, ಆದರೆ, ಆಸಿಡ್​ ದಾಳಿಯಿಂದ ಆ ಕುಟುಂಬದ ಸದಸ್ಯರು ಅಂತಿಮ ವಿಧಿ ವಿಧಾನಗಳನ್ನು ಸಹ ಮಾಡಲು ಸಾಧ್ಯವಾಗಲಿಲ್ಲ ಎಂದು ಹಳೆಯ ಕ್ರೌರ್ಯವನ್ನು ನೆನಪಿಸಿಕೊಂಡರು.

ಗಾಳಿಪಟ ಚಿಹ್ನೆ..

AIMIM ಪಕ್ಷದ ಗಾಳಿಪಟ ಚಿಹ್ನೆಯನ್ನು ತಮ್ಮ ಕೈಯಲ್ಲಿ ಹಾರಾಡಿಸುತ್ತಿರುವ ಮುಸ್ಲಿಂ ಮಹಿಳೆಯರು, ಚುನಾವಣೆಯ ಕುರಿತಾದ ನಿರ್ಧಾರವನ್ನು ಈಗಾಗಲೇ ತೆಗೆದುಕೊಳ್ಳಲಾಗಿದ್ದು, ಇಲ್ಲಿಯವರೆಗೆ ಯಾರೂ ನಮ್ಮ ಬಗ್ಗೆ ಯೋಚಿಸಲಿಲ್ಲ. ಓವೈಸಿ ಮಾತ್ರ ಮುಸ್ಲಿಮರ ಪರವಾಗಿ ಧ್ಯವಿ ಎತ್ತುತ್ತಾರೆ, ನಾವೆಲ್ಲರು ಒಗ್ಗಟ್ಟಿನಿಂದ ಗಾಳಿಪಟಕ್ಕಾಗಿ ಮತ ಚಲಾಯಿಸುತ್ತೇವೆ ಎಂದು ತಿಳಿಸಿದ್ದಾರೆ.

ಬಿಹಾರ ವಿಧಾನಸಭಾ ಚುನಾವಣೆಗಳು ನವೆಂಬರ್ 6 ಮತ್ತು 11 ರಂದು ಎರಡು ಹಂತಗಳಲ್ಲಿ ನಡೆಯಲಿದ್ದು, ನವೆಂಬರ್ 14 ಫಲಿತಾಂಶ ಹೊರಬೀಳಲಿದೆ. ಮಹಾಘಟಬಂದನ್​ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ವಿಪಕ್ಷ ನಾಯಕ ತೇಜಸ್ವಿ ಯಾದವ್​ ಹೆಸರನ್ನು ಘೋಷಿಸಲಾಗಿದ್ದು, ಇತ್ತ ಎನ್​ಡಿಎ ಮೈತ್ರಿಕೂಟ ಯಾರನ್ನು ತನ್ನ ಸಿಎಂ ಅಭ್ಯರ್ಥಿಯಾಗಿ ಆಯ್ಕೆ ಮಾಡಿಲ್ಲ, ಆದರೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಅನೇಕ ನಾಯಕರು, ಮುಖ್ಯಮಂತ್ರಿ ನಿತೀಶ್​ ಕುಮಾರ್​ ನೇತೃತ್ವದಲ್ಲಿ ಚುನಾವಣೆ ಎದುರಿಸುವುದಾಗಿ ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net