ಬೀರೂರಿನಲ್ಲಿ ಉಪಾಹಾರ ಸವಿದ ಶಿವರಾಜ್‌ಕುಮಾರ್ ದಂಪತಿ

shivarajkumarkumr.
ಬೀರೂರಿನ ಪ್ರೀತಿ ಕ್ಯಾಂಟೀನ್‌ನಲ್ಲಿ ಗೀತಾ ಶಿವರಾಜ್‌ಕುಮಾರ್ ದಂಪತಿ ಉಪಾಹಾರ ಸೇವಿಸಿದರು. ಮಧು ಬಂಗಾರಪ್ಪ, ಕೆ.ಎಸ್.ಆನಂದ್, ಬೇಳೂರು ಗೋಪಾಲಕೃಷ್ಣ , ಬಿ.ಕೆ.ಶಶಿಧರ್, ಅಭಿಮಾನಿಗಳು, ಕಾರ್ಯಕರ್ತರು ಇದ್ದರು.
Published on

ಬೀರೂರು: ಶಿವಮೊಗ್ಗ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಗೀತಾ ಅವರು ಪತಿ ಶಿವರಾಜ್‌ಕುಮಾರ್ ಜತೆ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಚುನಾವಣಾ ಪ್ರಚಾರಕ್ಕೆಂದು ತೆರಳುವ ಮಾರ್ಗಮಧ್ಯೆ ಬೀರೂರಿನ ಎನ್.ಎಚ್.206ರ ಪ್ರೀತಿ ಕ್ಯಾಂಟೀನ್‌ವೊಂದರಲ್ಲಿ ಬುಧವಾರ ಬೆಳಗ್ಗೆ ಉಪಾಹಾರ ಸೇವಿಸಿ ಪ್ರಯಾಣ ಬೆಳೆಸಿದರು.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಈ ರಸ್ತೆ ಮಾರ್ಗವಾಗಿ ಸಂಚರಿಸುವ ವೇಳೆ ಪ್ರೀತಿ ಕ್ಯಾಂಟೀನ್‌ನಲ್ಲಿ ತಿಂಡಿ ಸವಿದು ಪ್ರಯಾಣ ಮುಂದುವರಿಸುತ್ತಿದ್ದರು. ಅದೇ ರೀತಿ ಅವರ ಮಕ್ಕಳಾದ ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಇಲ್ಲಿಯೇ ತಿಂಡಿ ತಿಂದು ಹೋಗುತ್ತಾರೆ. ಮಗಳು ಗೀತಾ ಶಿವರಾಜ್‌ಕುಮಾರ್ ಕೂಡ ಅದನ್ನೇ ಪಾಲಿಸಿಕೊಂಡು ಬರುತ್ತಿರುವುದು ಪಕ್ಷದ ಕಾರ್ಯಕರ್ತರಲ್ಲಿ ಸಂತಸ ಮೂಡಿಸಿದೆ.
ಶಾಸಕ ಕೆ.ಎಸ್.ಆನಂದ್ ಅವರು ಗೀತಾ ಶಿವರಾಜ್‌ಕುಮಾರ್ ದಂಪತಿಯನ್ನು ಸ್ವಾಗತಿಸಿ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಗೀತಾ ಅವರು 2 ಲಕ್ಷ ಮತಗಳ ಅಂತರದಲ್ಲಿ ಜಯ ಗಳಿಸುತ್ತಾರೆ ಎಂಬ ನಿರೀಕ್ಷೆ ಇದೆ. ಕಾಂಗ್ರೆಸ್‌ನ ಎಲ್ಲ ಶಾಸಕರ ಸಹಕಾರ ಮತ್ತು ಜನತೆಯ ಆಶೀರ್ವಾದದಿಂದ ಗೆಲ್ಲುವುದು ನಿಶ್ಚಿತ ಎಂದರು.
ಸಾಮಾನ್ಯನಂತೆ ಕುಳಿತು ದೋಸೆ ಸವಿದ ಶಿವಣ್ಣ ಅವರಿಗೆ ಅಭಿಮಾನಿಗಳು ಜೈಕಾರ ಕೂಗಿದರು. ಮೊಬೈಲ್‌ನಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ನೂರಾರು ಮಂದಿ ಸೇರಿದ್ದರು.
ಶಿಕ್ಷಣ ಸಚಿವ ಮಧು ಬಂಗಾರಪ್ಪ, ಶಾಸಕ ಬೇಳೂರು ಗೋಪಾಲಕೃಷ್ಣ, ಪುರಸಭೆ ಸದಸ್ಯ ಬಿ.ಕೆ.ಶಶಿಧರ್, ಪಕ್ಷದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net