ಈಶಾನ್ಯ ದೆಹಲಿಯಲ್ಲಿ ತೀವ್ರ ಹಿಂಸಾಚಾರ; ಪರಿಸ್ಥಿತಿ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿರುವ ಪೊಲೀಸರು

CAA 25 Feb 20
Published on

ನವದೆಹಲಿ: ಈಶಾನ್ಯ ದೆಹಲಿಯ ಕೆಲವು ಏರಿಯಾಗಳಲ್ಲಿ ಸಿಎಎ ಪರ-ವಿರೋಧಿ ಪ್ರತಿಭಟನಾಕಾರರ ನಡುವಿನ ಸಂಘರ್ಷ ಮಿತಿ ಮೀರಿದೆ.

ಮೌಜ್​ಪುರ್, ಬ್ರಹಂಪುರಿ, ಜಾಫರಾಬಾದ್​ ಮತ್ತಿತರ ಕಡೆಗಳಲ್ಲಿ ಪರಸ್ಪರ ಕಲ್ಲುತೂರಾಟ ನಡೆಯುತ್ತಿದೆ. ಈ ಹಿಂಸಾಚಾರದಲ್ಲಿ ಓರ್ವ ಪೊಲೀಸ್​ ಪೇದೆ ಸೇರಿ ಐದು ಮಂದಿ ಮೃತಪಟ್ಟಿದ್ದಾರೆ. 105 ಮಂದಿ ಗಾಯಗೊಂಡಿದ್ದಾಗಿ ವರದಿಯಾಗಿದೆ. ಭಾನುವಾರದಿಂದ ಶುರುವಾದ ಸಂಘರ್ಷ ನಿಯಂತ್ರಣಕ್ಕೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ಪ್ರತಿಭಟನಾಕಾರರ ಗುಂಪು ಕಲ್ಲು ತೂರಾಟದೊಂದಿಗೆ ಗಾಜಿನ ಚೂರುಗಳನ್ನು ಎಸೆಯುತ್ತಿದ್ದಾರೆ. ಮನೆ, ಕಟ್ಟಡಗಳಿಗೆ ಹಾನಿಯನ್ನುಂಟು ಮಾಡುತ್ತಿದ್ದಾರೆ.

ಪ್ರತಿಭಟನೆ ನಡೆಯುತ್ತಿರುವ ದೆಹಲಿಯ ಸ್ಥಳಗಳಲ್ಲಿ ಪರಿಸ್ಥಿತಿ ಉದ್ವಿಗ್ನವಾಗಿದೆ. ಈಶಾನ್ಯ ದೆಹಲಿಯ ಹಲವು ಕಡೆಗಳಿಂದ ನಮಗೆ ಕರೆ ಬರುತ್ತಲೇ ಇದೆ. ಒಂದಲ್ಲ ಒಂದು ಕಡೆ ಕಲ್ಲು ತೂರಾಟ, ಹಿಂಸಾಚಾರ ನಡೆಯುತ್ತಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ. ಇಂದು ದೆಹಲಿ ಪೊಲೀಸ್​ ಆಯುಕ್ತರು ಸೀಲಾಂಪುರ ಡಿಸಿಪಿ ಕಚೇರಿಯಲ್ಲಿ ಪೊಲೀಸರೊಂದಿಗೆ ಸಭೆ ನಡೆಸಲಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಚರ್ಚಿಸಲಿದ್ದಾರೆ.

ಒಂದು ಅಗ್ನಿಶಾಮಕದಳದ ವಾಹನಕ್ಕೆ ಬೆಂಕಿ ಇಡಲಾಗಿದೆ. ಅಗ್ನಿಶಾಮಕದಳದ ಮೂವರು ಸಿಬ್ಬಂದಿ ಗಾಯಗೊಂಡಿದ್ದಾರೆ. ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಇಂದು ಬೆಳಗ್ಗೆಯವರೆಗೆ 45 ಕರೆಗಳು ಬಂದಿವೆ. ಎಲ್ಲರೂ ಹಿಂಸಾಚಾರದ ಬಗ್ಗೆಯೇ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net