

ಬೆಂಗಳೂರು: ಹೂಡಿಕೆದಾರರಿಂದ ಹಣ ಕಟ್ಟಿಸಿಕೊಂಡು ಹತ್ತಾರು ವರ್ಷಗಳಿಂದ ನಿವೇಶನ ಹಂಚಿಕೆ ಮಾಡದೆ ಕಾಡಿಸುತ್ತಿರುವ ಗೃಹನಿರ್ವಣ ಸಹಕಾರಿ ಸಂಘಗಳ ಕುರಿತು ಸೋಮವಾರ ‘ಸೊಸೈಟಿ ಸೈಟ್ ಧೋಖಾ!’ ಶೀರ್ಷಿಕೆಯಡಿ ವಿಜಯವಾಣಿಯಲ್ಲಿ ಪ್ರಕಟಗೊಂಡ ವಿಶೇಷ ವರದಿ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿದೆ. ಬಾಗಿಲು ಮುಚ್ಚುವ ಹಾಗೂ ಮುಚ್ಚಿರುವ ಸೊಸೈಟಿಗಳ ಮಾಹಿತಿ ಪಡೆಯಲು ವಿಜಯವಾಣಿ ಸಹಾಯವಾಣಿಗೆ ಕರೆ ಮಾಡಿದ್ದ ನೂರಾರು ಜನರು ಸೊಸೈಟಿಗಳ ಇನ್ನಷ್ಟು ವಂಚನೆಯ ದೈತ್ಯ ರೂಪವನ್ನು ತೆರೆದಿಟ್ಟಿದ್ದಾರೆ. ಹಣ ಕೊಟ್ಟು ಸೈಟ್ಗಾಗಿ ಅಲೆದಾಡುತ್ತಿರುವ ಹೂಡಿಕೆದಾರರ ಪರಿಸ್ಥಿತಿಗೆ ಬೆಳಕು ಚೆಲ್ಲಿದ ವಿಜಯವಾಣಿ ವರದಿಯಿಂದ ಜಾಗೃತರಾದ ಹೂಡಿಕೆದಾರರು ಸೊಸೈಟಿ ವಿರುದ್ಧ ಕಾನೂನು ಹೋರಾಟ ನಡೆಸಲು ಸಹಕಾರ ಇಲಾಖೆಗೆ ಕರೆ ಮಾಡಿ ಸಲಹೆ ಪಡೆಯುತ್ತಿದ್ದಾರೆ.
ಪ್ರಕರಣ ದಾಖಲಿಸಲು ನಿರ್ಧಾರ: ಬಹುತೇಕ ಗ್ರಾಹಕರಿಗೆ ತಾವು ಹೂಡಿಕೆ ಮಾಡಿರುವ ಸೊಸೈಟಿ ಮುಚ್ಚಿದೆ ಎಂಬ ಮಾಹಿತಿಯೇ ತಿಳಿದಿರಲಿಲ್ಲ. ಇದೀಗ ಸ್ಥಗಿತಗೊಂಡಿರುವ ಸೊಸೈಟಿಗಳ ವಿವರಗಳನ್ನು ವಿಜಯವಾಣಿ ವೆಬ್ಸೈಟ್ನಲ್ಲಿ ಪ್ರಕಟಿಸುತ್ತಿದ ಬಳಿಕ ಹೂಡಿಕೆದಾರರು ಸಹಕಾರ ಇಲಾಖೆಗೆ ಕರೆ ಮಾಡಿ ಗೃಹ ಮಂಡಳಿಗೆ ದೂರು ನೀಡುವ ವಿಧಾನದ ಮಾಹಿತಿ ಪಡೆದಿದ್ದಾರೆ. ಈ ರೀತಿ ಅನ್ಯಾಯಕ್ಕೆ ಒಳಗಾಗಿರುವ ಹೂಡಿಕೆದಾರರು ಸಹಕಾರ ಇಲಾಖೆಗೆ ಲಿಖಿತವಾಗಿ, ಇ-ಮೇಲ್ ಮೂಲಕವೂ ದೂರು ನೀಡಲು ಮುಂದಾಗಿದ್ದಾರೆ.
ಹಾಸನದಲ್ಲೂ ಅಕ್ರಮ: ಹಾಸನ ಹೊರವಲಯದ ಸತ್ಯಮಂಗಲ ವ್ಯಾಪ್ತಿಯಲ್ಲಿ ಪೊಲೀಸ್ ಅಧಿಕಾರಿಗಳ ಮತ್ತು ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ ನಿವೇಶನ ಹಂಚಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ ಎನ್ನುವ ಆರೋಪಿ ಕೇಳಿಬಂದಿದ್ದು, ನೂರಾರು ಸದಸ್ಯರು ಹೋರಾಟದ ಹಾದಿ ಹಿಡಿದಿದ್ದಾರೆ. ಪೊಲೀಸ್ ಲೇಔಟ್ನಲ್ಲಿ ನಿವೇಶನ ಹಂಚಿಕೆ ಮಾಡಲಾಗುವುದೆಂದು 6 ವರ್ಷಗಳ ಹಿಂದೆ ಹಣ ಕಟ್ಟಿಸಿಕೊಂಡಿದ್ದಾರೆ. ಆದರೆ ಈವರೆಗೂ ಸೈಟ್ ನೀಡಿಲ್ಲ. ಆರಂಭದಲ್ಲಿ ಸೊಸೈಟಿಯೊಂದನ್ನು ಮಾಡಿ ಅದರ ಮೂಲಕ ಹಣ ಕಟ್ಟಿಸಿಕೊಳ್ಳಲಾಯಿತು. ಆಗ ಚದರ ಅಡಿಗೆ 666 ರೂ. ಬೆಲೆ ನಿಗದಿ ಮಾಡಿದ್ದರು. ನಂತರ 725ಕ್ಕೆ ಏರಿಕೆ ಮಾಡಲಾಯಿತು. ಈಗ ಹೆಚ್ಚುವರಿಯಾಗಿ 145 ರೂ. ಪಾವತಿಸುವಂತೆ ಹೇಳುತ್ತಿದ್ದಾರೆ ಎನ್ನುವುದು ನಿವೇಶನದಾರರ ಆರೋಪ. ಅಲ್ಲದೆ, ನಿಗದಿಗಿಂತಲೂ ಕಡಿಮೆ ಅಳತೆಯ ನಿವೇಶನಗಳನ್ನು ಸಿದ್ಧಪಡಿಸಲಾಗಿದೆ ಎನ್ನುವ ದೂರು ಕೇಳಿ ಬರುತ್ತಿದೆ.
ಸುಳ್ಳಿನ ಕಂತೆ: ಒಮ್ಮೆ ಕರೆ ಮಾಡಿದರೆ, 3 ತಿಂಗಳಲ್ಲಿ ಇತ್ಯರ್ಥವಾಗಲಿದೆ ಎನ್ನುತ್ತಾರೆ. 3 ತಿಂಗಳ ನಂತರ ಮಾಡಿದರೆ, ಖಾತೆ ಬಾಕಿ ಇದೆ ಎನ್ನುತ್ತಾರೆ. ಆನಂತರ ಕರೆ ಮಾಡಿದರೆ, ಪ್ರಾಧಿಕಾರದಿಂದ ಅನುಮತಿ ಸಿಗಬೇಕಿದೆ ಎನ್ನುತ್ತಾರೆ. ಈ ರೀತಿ ಹತ್ತು ಬಾರಿ ಹತ್ತು ಸುಳ್ಳು ಹೇಳುವುದೇ ಸೊಸೈಟಿ ನೌಕರರ ಕೆಲಸ. ನಾವೇ ಮಾಡಬೇಕು ಸರ್? ಹಣ ಕಟ್ಟಿ 10 ವರ್ಷ ಕಳೆದಿದೆ. ನಿವೇಶನ ಹಂಚಿಕೆಯ ಪತ್ರ ನೀಡಿದ್ದಾರೆ. ಆದರೆ, ನೋಂದಣಿ ಮಾಡಿಕೊಡುತ್ತಿಲ್ಲ. ಸುಳ್ಳು ಹೇಳುವುದಕ್ಕೆ ನೌಕರರನ್ನು ನೇಮಕ ಮಾಡಿಕೊಂಡಿದ್ದಾರೆ. ಹಳ್ಳಿ ಜನರಿಗೆ ಅರ್ಥವಾಗಬಾರದು ಎಂಬ ಕಾರಣಕ್ಕೆ ಆರ್ಟಿಸಿ ಸಿಕ್ಕಿಲ್ಲ, ಪಹಣಿ ಆಗಬೇಕು, ಸ್ಕೆಚ್ ಬಾಕಿ ಇದೆ. ಈ ರೀತಿ ಕಂದಾಯದ ಪರಿಭಾಷೆಯಲ್ಲಿ ಮಾತನಾಡಿ ಕಳುಹಿಸುತ್ತಾರೆ ಎಂದೂ ಹಲಗೂರಿನ ನಿವಾಸಿ ಗುರುಪ್ರಸಾದ್ ತಮ್ಮ ನೋವು ಹೊರ ಹಾಕಿದ್ದಾರೆ.
ತಂದೆಯ ಪಿಂಚಣಿ ಹಣವನ್ನು ಮೈಸೂರಿನಲ್ಲಿ ನಿವೇಶನ ಖರೀದಿಸುವುದಕ್ಕಾಗಿ ಕೇಂದ್ರ ಸರ್ಕಾರ ಸ್ವಾಮ್ಯದ ನೌಕರರ ಗೃಹ ಮಂಡಳಿ ಸಹಕಾರ ಸಂಘದಲ್ಲಿ ಹೂಡಿಕೆ ಮಾಡಿದ್ದೆವು. ಈ ಸೊಸೈಟಿಯ ಮುಖ್ಯ ಕಚೇರಿ ಬೆಂಗಳೂರಿನ ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿ್ಲೆ. 10 ವರ್ಷ ಮೇಲ್ಪಟ್ಟರೂ ಈವರೆಗೆ ನಿವೇಶನ ಕೈಸೇರಿಲ್ಲ. ಪ್ರತಿ ಬಾರಿ ಕರೆ ಮಾಡಿದಾಗಲೂ ಒಂದೊಂದು ಬಾರಿ ಒಂದೊಂದು ಸುಳ್ಳು ಹೇಳುತ್ತಿದ್ದಾರೆ. ಸೈಟು ಇರೋದು ಮೈಸೂರಿನಲ್ಲಿ. ಕಚೇರಿ ಇರೋದು ಬೆಂಗಳೂರಿನಲ್ಲಿ. ಪ್ರತಿ ಬಾರಿ ಅಲೆದಾಡಿ ಹುಚ್ಚರಂತಾಗಿದ್ದೇವೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸಂತ್ರಸ್ತೆ.
ರಾಜ್ಯದಲ್ಲಿ 1,187 ಗೃಹ ನಿರ್ಮಾಣ ಸಹಕಾರ ಸಂಘಗಳಿವೆ. 279 ಸಂಘಗಳು ಸ್ಥಗಿತದ ಹಾದಿಯಲ್ಲಿದ್ದರೆ, 127 ಸಂಘಗಳು ಬಾಗಿಲು ಬಂದ್ ಮಾಡಿವೆ. ಇವುಗಳ ಸಂಪೂರ್ಣ ಮಾಹಿತಿಯನ್ನು ವಿಜಯವಾಣಿ ವೆಬ್ಸೈಟ್ https://www.vijayavani.netನಲ್ಲಿ ಪ್ರಕಟಿಸಿದೆ. ಸೋಮವಾರ ಒಂದೇ ದಿನ ಸಾವಿರಾರು ಜನರು ವೆಬ್ಸೈಟ್ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.