ಸುರ್ಜೇವಾಲಾ ನಿರ್ದೇಶನದಂತೆ ಎಸ್ ಐಟಿ ತನಿಖೆ: ಆರ್.ಅಶೋಕ್ ಆರೋಪ

R Ashok
Published on

ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಪೆನ್ ಡ್ರೈವ್ ಹಂಚಿಕೆ ಪ್ರಕರಣದ ಎಸ್ ಐಟಿ ತನಿಖೆ ಜಾಡು ಕಾಂಗ್ರೆಸ್ ನತ್ತ ಸಾಗಿತ್ತು. ಪ್ರಕರಣದಲ್ಲಿ ತಮ್ಮ ಪಕ್ಷ ಸಿಲುಕುತ್ತದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದೆಲ್ಲ ನಿಜವಾಗುತ್ತದೆ ಎಂದು ಕಾಂಗ್ರೆಸ್ ನಾಯಕರು ದಿಗಿಲುಗೊಂಡು ತನಿಖೆಯನ್ನು ಬಿಜೆಪಿಯತ್ತ ತಿರುಗಿಸಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದರು.

ಸುದ್ದಿಗಾರರಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಪೆನ್ ಡ್ರೈವ್ ಮೊದಲು ಹಂಚಿದವರೇ ಕಾಂಗ್ರೆಸ್ ಕಾರ್ಯಕರ್ತರು. ಆದರೆ ಬಿಜೆಪಿ ಕಾರ್ಯಕರ್ತರನ್ನು ಮಾತ್ರ ಬಂಧಿಸಿ, ಅವರ ಮನೆ ಶೋಧಿಸುತ್ತಿದ್ದಾರೆ.  ಕಾಂಗ್ರೆಸ್ ಕಾರ್ಯಕರ್ತರಬಳಿ ಇಲ್ಲವೆ ? ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಂದೀಪ್ ಸಿಂಗ್ ಸುರ್ಜೇವಾಲಾ ನಿರ್ದೇಶನದಂತೆ ಎಸ್ ಐಟಿ ತನಿಖೆ ನಡೆಯುತ್ತಿದೆ ಎಂದು ದೂರಿದರು.

ಈ ಪ್ರಕರಣವೊಂದು ಪೂರ್ವನಿಯೋಜಿತ ಸಂಚು. ಸದ್ಯದ ವಿದ್ಯಮಾನ ಈ ಸಂಶಯಕ್ಕೆ ಪುಷ್ಟಿ ನೀಡುತ್ತದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಕಳಂಕ ಮೆತ್ತಿ ಒಕ್ಕಲಿಗ ಸಮುದಾಯದ ಹಿಡಿತ ಸಾಧಿಸಲು ಹವಣಿಕೆ ಎದ್ದು ಕಾಣುತ್ತಿದ್ದು, ಕುಮಾರಸ್ವಾಮಿ ಹೇಳಿದಂತೆ ತಿಮಿಂಗಿಲು ಯಾವುದು ಗೊತ್ತಾಗಬೇಕಿದೆ ಎಂದು ಆರ್.ಅಶೋಕ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net