ಎಲ್ಲೆಂದರಲ್ಲಿ ಕುಳಿತು ವಿಡಿಯೋ ಕಾನ್ಫೆರೆನ್ಸ್‌ಗೆ ಹಾಜರು: ವಕೀಲರ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ

highcourt
Published on

 ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಆರಂಭವಾದ ವಿಡಿಯೊ ಕಾನ್ಫರೆನ್ಸ್ ವಿಚಾರಣೆಗೆ ಕೆಲ ವಕೀಲರು ಎಲ್ಲೆಂದರಲ್ಲಿ ಕುಳಿತು ಹಾಜರಾಗುತ್ತಿರುವ ಕ್ರಮಕ್ಕೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿದೆ.

ಪ್ರಕರಣವೊಂದರ ವಿಚಾರಣೆ ವೇಳೆ ವಕೀಲೆಯೊಬ್ಬರು ಕಾರಿನಲ್ಲಿ ಕೂತು ವಿಚಾರಣೆಗೆ ಹಾಜರಾದ ನಡೆಗೆ ಅಸಹನೆ ವ್ಯಕ್ತಪಡಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ನ್ಯಾಯಪೀಠ, ವಕೀಲರು ಕಾರಿನಲ್ಲಿ ಕೂತು ವಿಚಾರಣೆಗೆ ಹಾಜರಾಗುವ ವೈಖರಿಯನ್ನು ಬಿಡಬೇಕು ಎಂದು ಮೌಖಿಕವಾಗಿ ಎಚ್ಚರಿಸಿದರು.

ಪ್ರಕರಣ ವಿಚಾರಣೆಗೆ ಕರೆದಾಗ, ಅರ್ಜಿದಾರರ ಪರ ವಕೀಲೆಯೊಬ್ಬರು ಹೈಕೋರ್ಟ್‌ನ ಹೊರಭಾಗದಲ್ಲಿ ಕಾರಿನಲ್ಲಿ ಕುಳಿತು ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾದರು. ಸ್ವಾಮಿ, ನಾನು ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದೇನೆ. ಇದರಿಂದ ನ್ಯಾಯಾಲಯಕ್ಕೆ ಬರಲು ತಡವಾಗಿದೆ.

ವಾದ ಮಂಡಿಸುತ್ತೇನೆ, ವಿಚಾರಣೆಯನ್ನು ಕೆಲ ಕಾಲ ಮುಂದೂಡಿ ಎಂದು ಕೋರಿದರು. ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು ಮೊದಲು ನೀವು ನ್ಯಾಯಾಲಯಕ್ಕೆ ಬನ್ನಿ ಎಂದು ಕಟುವಾಗಿ ನುಡಿದು ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net