ಮೊಬೈಲ್​ಗೆ ತಮ್ಮ ಪಾಸ್ ವರ್ಡ್ ಇಟ್ಟಿದ್ದಕ್ಕೆ ಅಕ್ಕ ಹೀಗಾ ಮಾಡೋದು?

New Project (1)
Published on

ದೇವನಹಳ್ಳಿ: ಈಗಿನ ಕಾಲದಲ್ಲಿ ಮಕ್ಕಳಿಗೆ ಪೋಷಕರು ಬುದ್ಧಿ ಹೇಳಲೂ ಹಿಂದೆ ಮುಂದೆ ನೋಡಬೇಕಾದ ಪರಿಸ್ಥಿತಿ ಎದುರಾಗಿದೆ. ಇಲ್ಲೊಬ್ಬ ಹುಡುಗಿ ದಿನದ ಬಹುಪಾಲು ಸಮಯ ಮೊಬೈಲ್ ಫೋನ್‌ನಲ್ಲಿಯೇ ಮುಳುಗಿರುತ್ತಿದ್ದಳು. ಇದನ್ನು ಪ್ರತಿದಿನವೂ ಗಮನಿಸಿ ರೋಸಿ ಹೋಗಿದ್ದ ಆಕೆಯ ಕಿರಿಯ ಸಹೋದರ, ಒಂದು ಪ್ಲಾನ್ ಮಾಡಿದ. ‘ಯಾವಾಗಲೂ ಅಕ್ಕ ಫೋನಿನಲ್ಲಿಯೆ ಮುಳುಗಿರುತ್ತಾಳೆ, ಸ್ವಲ್ಪ ಸಮಯ ಮನೆಯಲ್ಲಿ ಎಲ್ಲರೊಂದಿಗೆ ಮಾತನಾಡಲಿ’ ಎಂದು ಯೋಚಿಸಿ ಅಕ್ಕನಿಂದ ಮೊಬೈಲ್ ಕಸಿದುಕೊಂಡ. ಅದನ್ನು ವಾಪಸ್ ಕೊಡುವುದಕ್ಕೆ ಮುನ್ನ ಪಾಸ್ ವರ್ಡ್ ಸೆಟ್ ಮಾಡಿದ. ಅಕ್ಕನ ಕೈಗೆ ಮೊಬೈಲ್ ಫೋನ್ ಸಿಕ್ಕಿದ್ದೇನೋ ಸರಿ, ಆದರೆ ಎಷ್ಟು ಪ್ರಯತ್ನಿಸಿದರೂ ಫೋನ್ ಓಪನ್ ಆಗಲಿಲ್ಲ. ಕೇಳಿದರೂ ತಮ್ಮ ಪಾಸ್‌ವರ್ಡ್ ಕೊಡಲಿಲ್ಲ. ಇದರಿಂದ ಬೇಸರಗೊಂಡ ಅಕ್ಕ ಅಷ್ಟಕ್ಕೇ ಮನೆಯಲ್ಲಿ ಜಗಳ ಮಾಡಿಕೊಂಡು ನೇಣಿಗೆ ಶರಣಾಗಿದ್ದಾಳೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಗಾಣಿಗರ ಪೇಟೆಯಲ್ಲಿ ಈ ಘಟನೆ ನಡೆದಿದೆ. ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರುಚಿತಾ (19) ನೇಣಿಗೆ ಶರಣಾದ ಯುವತಿ. ನೋಡಲು ಸುಂದರವಾಗಿದ್ದ ಈಕೆ, ಮನೆಯಲ್ಲಿ ಯಾವಾಗಲೂ ಪೋನಿನಲ್ಲಿಯೇ ಬ್ಯುಸಿಯಾಗಿರುತ್ತಿದ್ದಳು. ಕಾಲೇಜಿನಿಂದ ಮನೆಗೆ ಬಂದರೆ ಸಾಕು ಫೋನು ಹಿಡಿದುಕೊಂಡು ನಿಲ್ಲುತ್ತಿದ್ದಳು.

ಇದನ್ನು ಗಮನಿಸಿದ ಆಕೆಯ ತಮ್ಮ ಹೇಗಾದರೂ ಮಾಡಿ ಅಕ್ಕನ ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಎಂದು ಯೋಚಿಸಿದ. ಮೊಬೈಲ್ಗೆ ಪಾಸ್ ವರ್ಡ್ ಇಟ್ಟ. ಪಾಸ್ ವರ್ಡ್ ಹೇಳುವಂತೆ ತಮ್ಮನೊಂದಿಗೆ ಅಕ್ಕ ಸಾಕಷ್ಟು ಜಗಳವಾಡಿದಳು. ಕೊನೆಗೂ ಕೊಡದೇ ಇದ್ದಾಗ ಏಕಾಏಕಿ ಮನೆಯಲ್ಲಿರುವ ರೂಂಗೆ ಹೋಗಿ ನೇಣಿಗೆ ಶರಣಾಗಿದ್ದಾಳೆ.

ವಿಷಯ ತಿಳಿಯುತ್ತಿದ್ದಂತೆ ಪಾಲಕರು ಮತ್ತು ಅಕ್ಕಪಕ್ಕದ ಮನೆಯವರು ನಗರದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಯುವತಿಯನ್ನು ಪರೀಕ್ಷಿಸಿದ ವೈದ್ಯರು ಯುವತಿ ಆಗಲೇ ಮರಣಹೊಂದಿದ್ದಾಳೆ ಎಂದು ತಿಳಿಸಿದ್ದಾರೆ.

ಆದರೆ ಪೋಷಕರು ಮಾತ್ರ ಇದನ್ನು ಒಪ್ಪದೇ, ವೈದ್ಯರ ನಿರ್ಲಕ್ಷ್ಯದಿಂದಲೇ ತಮ್ಮ ಮಗಳು ಸಾವನಪ್ಪಿದ್ದಾಳೆ ಎಂದು ಆರೋಪಿಸಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ವೈದ್ಯ ಸುಭಾಷ್ ಅವರು, ‘‘ಆಕೆಯನ್ನು ಆಸ್ಪತ್ರೆಗೆ ಕರೆತಂದಾಗ ಕೂಡಲೇ ಅಟೆಂಡ್ ಮಾಡಿದ್ದೇವೆ. ಪಲ್ಸ್, ಹಾರ್ಟ್‌ಬೀಟ್ ಏನೂ ಇರಲಿಲ್ಲ. ದೇಹ ತಂಪಾಗಿತ್ತು. ಪಾಲಕರನ್ನು ಕಾರಣ ಕೇಳಿದಾಗ ತಲೆ ಸುತ್ತು ಬಂದು ಬಿದ್ದಿದ್ದಾಳೆ ಅಂತ ಹೇಳಿದರು. ಆದರೆ ದೇಹ ತಪಾಸಣೆ ನಡೆಸಿದಾಗ ಕುತ್ತಿಗೆ ಸುತ್ತ ಗುರುತುಗಳಿದ್ದವು. ಇದು ಪೊಲೀಸ್ ಕೇಸ್ ಆಗುತ್ತೆ ಸತ್ಯ ಹೇಳಿ ಅಂತ ಒತ್ತಾಯ ಮಾಡಿದಾಗ ಆಕೆಯ ತಮ್ಮ, ನಾವು ಮೊಬೈಲ್‌ಗೋಸ್ಕರ ಕಿತ್ತಾಡಿಕೊಂಡಿದ್ದೆವು. ನಾನು ಸ್ನಾನಕ್ಕೆ ಹೋದಾಗ ಈಕೆ ಹೀಗೆ ಮಾಡಿಕೊಂಡಿದ್ದಾಳೆ ಅಂತ ಹೇಳಿದ. ಆಗಲೂ ಚೆಕ್ ಮಾಡಿದರೆ ಆಕೆಯ ದೇಹದಲ್ಲಿ ಒಂದು ಪರ್ಸೆಂಟ್ ಕೂಡ ಹಾರ್ಟ್ ಬೀಟ್ ಇರಲಿಲ್ಲ. ಹೀಗಾಗಿ ಮುಂದಿನ ಪ್ರಕ್ರಿಯೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಿ ಅಂತ ಹೇಳಿದೆ’’ ಎಂದು ವಿವರಿಸಿದ್ದಾರೆ. ಇದೀಗ ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net