

ಕಾಸರಗೋಡು: ತಿರುವನಂತಪುರದ ಸಿಬಿಐ ವಿಶೇಷ ನ್ಯಾಯಾಲಯ 28 ವರ್ಷಗಳ ಬಳಿಕ ಸಿಸ್ಟರ್ ಅಭಯಾಳಿಗೆ ನ್ಯಾಯ ಒದಗಿಸಿದ್ದು, ಫಾದರ್ ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಶಿಕ್ಷೆಯ ಪ್ರಮಾಣವನ್ನು ಬುಧವಾರ ಘೊಷಿಸಲಿದೆ. ಸ್ಥಳೀಯ ಪೊಲೀಸರು ಆತ್ಮಹತ್ಯೆ ಎಂದು ಈ ಪ್ರಕರಣ ಮುಗಿಸಿದ್ದರು.
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ 1993ರ ಮಾರ್ಚ್ 23ರಂದು ಸಿಬಿಐ ತನಿಖೆ ಆರಂಭಿಸಿತು. ಮೂರು ಬಾರಿ ಸಿಬಿಐ ವರದಿಯನ್ನು ತಿರಸ್ಕರಿಸಿದ್ದ ನ್ಯಾಯಾಲಯ ಮರುವಿಚಾರಣೆಗೆ ಆದೇಶಿಸಿತ್ತು. 2008ರ ನ.19ರಂದು ಫಾದರ್ ಥಾಮಸ್ ಕೊಟ್ಟೂರ್, ಸಿಸ್ಟರ್ ಸೆಫಿ ಮತ್ತು ಫಾದರ್ ಜೋಸ್ ಪುತ್ತುಕ್ಕಾಯಿಲ್ ಅವರನ್ನು ಬಂಧಿಸಲಾಯಿತು. ಜೋಸ್ ಪುತ್ತುಕ್ಕಾಯಲ್ ವಿರುದ್ಧ ಪುರಾವೆಗಳಿಲ್ಲ ಎಂಬ ಕಾರಣಕ್ಕೆ ಖುಲಾಸೆಗೊಳಿಸಲಾಯಿತು. ಸಾಮಾಜಿಕ ಕಾರ್ಯಕರ್ತ ಜೋಮನ್ ಪುತ್ತನ್ಪುರಕ್ಕಲ್ ಈ ಪ್ರಕರಣದಲ್ಲಿ ನ್ಯಾಯಕ್ಕಾಗಿ ಅವಿರತ ಶ್ರಮಿಸಿದ್ದರು.
ನಿರಂತರವಾಗಿ ಕಾನೂನು ಹೋರಾಟ ನಡೆಸಿದ್ದ ಸಿಸ್ಟರ್ ಅಭಯಳ ತಂದೆ ಥೋಮಸ್ ಹಾಗೂ ತಾಯಿ ಲೀಲಾಮ್ಮ 2016ರಲ್ಲೇ ಕೊನೆಯುಸಿರೆಳೆದರು. ಅಭಯಾಳ ಸಹೋದರ ಬಿಜು ಜೋಸೆಫ್ ಹೋರಾಟವನ್ನು ಮುಂದುವರಿಸಿದ್ದರು. ಕೋರ್ಟ್ ಸತತವಾಗಿ ಒಂದು ವರ್ಷ ಮೂರೂವರೆ ತಿಂಗಳು ಈ ಪ್ರಕರಣದ ವಿಚಾರಣೆ ನಡೆಸಿತ್ತು. ರಾಜ್ಯದ ಕುತೂಹಲ ಕೆರಳಿಸಿದ್ದ ಪ್ರಕರಣ ಇದಾಗಿತ್ತು.
ಕಳ್ಳ ಪ್ರಮುಖ ಸಾಕ್ಷಿ!: ಅಭಯಾ ಕೊಲ್ಲಲ್ಪಟ್ಟ ದಿನ ಬೆಳಗ್ಗೆ ಕಾನ್ವೆಂಟ್ಗೆ ಬಂದಾಗ ಆರೋಪಿಗಳನ್ನು ನೋಡಿದ ಬಗ್ಗೆ ಆ ಪರಿಸರದಲ್ಲಿ ಕದಿಯಲು ಹೊಂಚು ಹಾಕಿದ್ದ ರಾಜು ಎಂಬುವ ನುಡಿದ ಸಾಕ್ಷ್ಯ ಮಹತ್ವದ್ದಾಗಿತ್ತು. ಸಿಸ್ಟರ್ ಸೆಫಿ ತನ್ನ ಕನ್ಯತ್ವವನ್ನು ಸಾಬೀತುಪಡಿಸಲು ಶಸ್ತ್ರಚಿಕಿತ್ಸೆ ಮಾಡಿಸಿದ್ದಾಳೆಂದು ವಿಧಿವಿಜ್ಞಾನ ಶಸ್ತ್ರಚಿಕಿತ್ಸಕರ ಹೇಳಿಕೆ ನಿರ್ಣಾಯಕವಾಯಿತು.
ಏನು ಕಾರಣ?: ಸಿಸ್ಟರ್ ಅಭಯಾ ಕಾನ್ವೆಂಟಿನಲ್ಲಿದ್ದುಕೊಂಡು ದ್ವಿತೀಯ ಪಿಯುಸಿ ಓದುತ್ತಿದ್ದಾಗ 1992ರ ಮಾ.27ರಂದು ಕಾನ್ವೆಂಟ್ನ ಕೋಣೆಯಲ್ಲಿ ಧರ್ಮಗುರು ಥಾಮಸ್ ಕೊಟ್ಟೂರ್ ಮತ್ತು ಸಿಸ್ಟರ್ ಸೆಫಿ ಲೈಂಗಿಕ ಸಂಬಂಧ ಹೊಂದಿರುವುದನ್ನು ನೋಡಿದ್ದರು. ಇದು ಸಮಸ್ಯೆಯಾಗಬಹುದು ಎಂದು ಥಾಮಸ್ ಕೊಟ್ಟೂರ್, ಜೋಸ್ ಪುತ್ರಿಕ್ಕಾಯಲ್ ಮತ್ತು ಸಿಸ್ಟರ್ ಸೆಫಿ ಸೇರಿ ಕೊಲೆ ಮಾಡಿದ್ದರು. ನೀರು ಕುಡಿಯಲೆಂದು ಅಡುಗೆ ಕೋಣೆಗೆ ಹೋದಾಗ ಕೊಡಲಿಯಿಂದ ಕೊಚ್ಚಿ ಹತ್ಯೆಗೈದು ಶವವನ್ನು ಬಾವಿಗೆ ಎಸೆದಿದ್ದರು.