ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಜನರು ಬೈತಾರೆ; ಅಧಿಕಾರಿಗಳ ವಿರುದ್ಧ ಸದಸ್ಯರ ಆಕ್ರೋಶ

sirwar pachayati meeting
ಸಿರವಾರ ಪಪಂನಲ್ಲಿ ಅಧ್ಯಕ್ಷ ವೈ.ಭೂಪನಗೌಡ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಉಪಾಧ್ಯಕ್ಷೆ ಲಕ್ಷ್ಮೀ ಆದೆಪ್ಪ, ಸದಸ್ಯರಾದ ಸೂರಿ ದುರಗಣ್ಣ ನಾಯಕ, ಸಂದೀಪ್ ಪಾಟೀಲ್, ಗಡ್ಲ್ ಅಮರೇಶ, ಹಸೇನ್ ಅಲಿ ಸಾಬ್, ಹಾಜಿ ಚೌದ್ರಿ ಇತರರಿದ್ದರು.
Published on

ಸಿರವಾರ: ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರು ಹಾಗೂ ಚರಂಡಿ ಸಮಸ್ಯೆಯಿದ್ದು, ಕೂಡಲೇ ಪರಿಹರಿಸಬೇಕು. ಸದಸ್ಯರಾಗಿ ಆಯ್ಕೆಯಾಗಿ ಎರಡು ವರ್ಷ ಕಳೆದಿದ್ದು, ಸಮಸ್ಯೆಗಳಿಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ಜನರು ನಮ್ಮನ್ನು ಬೈತಿದ್ದಾರೆ ಎಂದು ಸದಸ್ಯರು ಪಪಂ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಪಂ ಕಚೇರಿಯಲ್ಲಿ ಗುರುವಾರ ಮೊದಲ ಸಾಮಾನ್ಯ ಸಭೆ ನಡೆಯಿತು. ಕೆಲ ವಾರ್ಡ್‌ಗಳ ರಸ್ತೆಗಳಲ್ಲಿ ತಗ್ಗು ಬಿದ್ದಿದ್ದು ಮರಂ ಹಾಕಬೇಕೆಂದು ಒತ್ತಾಯಿಸಿದರು. 13ನೇ ವಾರ್ಡ್‌ನ ಚಂದಮ್ಮ ಮಾತನಾಡಿ, 92ನೇ ವಿತರಣೆ ಕಾಲುವೆಗೆ ಬಹುತೇಕ ಜನರು ಮನೆಯ ಶೌಚಗೃಹದ ನೀರು ಬಿಡುತ್ತಿದ್ದು, ತಡೆಯಬೇಕು ಎಂದು ಆಗ್ರಹಿಸಿದರು.

ಹಾಜಿ ಚೌದ್ರಿ ಮಾತನಾಡಿ, ಪಟ್ಟಣದಲ್ಲಿ ಕುಡಿಯುವ ನೀರಿನ ಪೈಪ್ ಒಡೆದಿದ್ದು ಹಾಗೂ ಇತರ ಯಾವುದೇ ಸಮಸ್ಯೆ ಹೇಳಿದರೂ ಅಧಿಕಾರಿಗಳು, ಸಿಬ್ಬಂದಿ ಸ್ಪಂದಿಸುವುದಿಲ್ಲ. ವಾರ್ಡ್ ಜನರಿಗೆ ಉತ್ತರ ನೀಡಲು ಆಗುವುದಿಲ್ಲ ಎಂದು ದೂರಿದರು. ಮೌಲಸಾಬ್ ವರ್ಚಸ್ ಮಾತನಾಡಿ, ಪಟ್ಟಣದಲ್ಲಿ ಆರೋಗ್ಯ ಕೇಂದ್ರ ಹೆಸರಿಗೆ ಮಾತ್ರ ಇದೆ. ಒಬ್ಬ ಎಂಬಿಬಿಎಸ್, ಒಬ್ಬ ಆಯುಷ್ ವೈದ್ಯರಿದ್ದು, ಸಾವಿರಾರು ಸಾವಿರ ಜನರು ಚಿಕಿತ್ಸೆಗೆ ಬರುತ್ತಾರೆ. ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಲು ಜಿಲ್ಲಾಧಿಕಾರಿ ಮೇಲೆ ಒತ್ತಡ ಹಾಕಬೇಕೆಂದು ತಿಳಿಸಿದರು.

ಕೃಷ್ಣನಾಯಕ ಮಾತನಾಡಿ, ಮಾಂಸಹಾರ ಮಾರಾಟ ಮಾಡುವುದಕ್ಕೆ ಪ್ರತ್ಯೇಕ ಮಳಿಗೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು. ಅಧ್ಯಕ್ಷ ವೈ.ಭೂಪನಗೌಡ ಮಾತನಾಡಿ, ಚರಂಡಿಗಳ ದುರಸ್ತಿ, ರಸ್ತೆಗಳಲ್ಲಿನ ತಗ್ಗುಗಳಿಗೆ ಮರಂ ಹಾಕುವುದು, ಕುಡಿಯುವ ನೀರಿನ ವ್ಯವಸ್ಥೆಗೆ ಶೀಘ್ರ ಕ್ರಮ ವಹಿಸಲಾಗುವುದು. ಉಳಿದ ಸಮಸ್ಯೆಗಳನ್ನು ಹಂತ ಹಂತವಾಗಿ ಸರಿಪಡಿಸಲಾಗುವುದು ಎಂದು ಹೇಳಿದರು. ಮಾರ್ಕಾಂಡಪ್ಪ, ಗಡ್ಲ್ ಚನ್ನಪ್ಪ, ಅಜಿತ ಕುಮಾರ ಹೊನ್ನಟಗಿ, ಅಮರಮ್ಮ ವೀರಭದ್ರಪ್ಪ, ಚಂದಮ್ಮ, ಹನುಮಂತಿ ಮಲ್ಲಪ್ಪ, ಅಮರಮ್ಮ, ಖಾಜಮ್ಮ, ಬಸ್ಸಮ್ಮ ಗ್ಯಾನಪ್ಪ, ಮುಖ್ಯಾಧಿಕಾರಿ ತಿಮ್ಮಪ್ಪ ಜಗ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net