ಜಿಲ್ಲೆಗೆ ಸರ್ ಎಂವಿ ಕೊಡುಗೆ ಅನನ್ಯ:ಎಸ್.ರುದ್ರೇಗೌಡ

rudregowda
ಸರ್‌ಎಂ.ವಿ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಆಯೋಜಿಸಿದ್ದ ಇಂಜಿನಿಯರ್ಸ್‌ ಡೇ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಯಿತು. ಎಸ್.ರುದ್ರೇಗೌಡ, ಬಿ.ಗೋಪಿನಾಥ್, ವಸಂತ್ ಹೋಬಳಿದಾರ್, ಜಿ.ವಿಜಯಕುಮಾರ್, ಕೆ.ಎಸ್.ಸುಕುಮಾರ್, ಆರ್.ಮನೋಹರ್ ಮುಂತಾದವರಿದ್ದರು.
Published on

ಶಿವಮೊಗ್ಗ: ಜಿಲ್ಲೆಯಲ್ಲಿ ಅನೇಕ ಪ್ರಮುಖ ಕಾರ್ಖಾನೆಗಳನ್ನು ಸ್ಥಾಪಿಸುವಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಪ್ರಮುಖ ಪಾತ್ರ ವಹಿಸಿದ್ದರು. ಅದರಲ್ಲೂ ವಿಐಎಸ್‌ಎಲ್ ಹಾಗೂ ಎಂಪಿಎಂ ಕಾರ್ಖಾನೆಗಳು ಇತಿಹಾಸದ ಪುಟ ಸೇರಲು ಕೆಲ ಐಎಎಸ್ ಅಧಿಕಾರಿಗಳೇ ಕಾರಣ ಎಂದು ಕೈಗಾರಿಕೋದ್ಯಮಿ ಎಸ್.ರುದ್ರೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಿಂದ ಸರ್ ಎಂವಿ ಜನ್ಮದಿನದ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಅಭಿಯಂತರ ದಿನಾಚರಣೆ, ಸಾಧಕ ಉದ್ದಿಮೆಗಳು ಹಾಗೂ ಶ್ರೇಷ್ಠ ಕಾರ್ಮಿಕರಿಗೆ ಸನ್ಮಾನ ಕಾರ್ಯಕ್ರಮ, ಶಿವಮೊಗ್ಗ ಜಿಲ್ಲೆಯ ಕೈಗಾರಿಕಾ ಪಿತಾಮಹ ಟಿ.ವಿ.ನಾರಾಯಣ ಶಾಸ್ತ್ರಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದಿನವರು ನೀಡಿರುವ ಕೊಡುಗೆಗಳನ್ನು ಸ್ಮರಿಸಿಯೇ ನಾವು ಮುಂದಿನ ಸವಾಲುಗಳನ್ನು ಎದುರಿಸಬೇಕು. ಅದರಲ್ಲೂ ಸರ್ ಎಂ.ವಿ ಅವರು ನಮ್ಮ ಜಿಲ್ಲೆಗೆ, ಈ ನಾಡಿಗೆ ನೀಡಿದ ಕೊಡುಗೆಗಳ ಬಗ್ಗೆ ಎಷ್ಟು ಮಾತನಾಡಿದರೂ ಕಡಿಮೆ. ವಿಐಎಸ್‌ಎಲ್, ಎಂಪಿಎಂ ಜತೆಗೆ ಶ್ರೀಗಂಧದ ಎಣ್ಣೆ ಕಾರ್ಖಾನೆ, ಅದಿರು ಮೈನಿಂಗ್, ವುಡ್ ಚಾರ್‌ಕೋಲ್ ಮುಂತಾದವುಗಳನ್ನು ಸ್ಥಾಪಿಸಿ ಜಾಗತಿಕ ಕೈಗಾರಿಕಾ ಭೂಪಟದಲ್ಲಿ ಶಿವಮೊಗ್ಗ ಜಿಲ್ಲೆಯೂ ಸ್ಥಾನ ಪಡೆಯುವಂತೆ ಮಾಡಿದವರು ವಿಶ್ವೇಶ್ವರಯ್ಯ ಎಂದು ಬಣ್ಣಿಸಿದರು.

ಭಾರತೀಯ ಸಣ್ಣ ಕೈಗಾರಿಕೆಗಳ ಮಹಾಸಂಘದ ಉಪಾಧ್ಯಕ್ಷ ಎಂ.ರಾಜು ಅವರಿಗೆ ವಿಶೇಷ ಗೌರವ ಸಲ್ಲಿಸಲಾಯಿತು. ಪಿಯರ್‌ಲೈಟ್ ಲೈನರ್ಸ್‌ನ ಕಾರ್ಮಿಕ ಬಿ.ಸಂತೋಷ್, ಮಲ್ನಾಡ್ ಅಲಾಯ್ ಕ್ಯಾಸ್ಟಿಂಗ್ಸ್‌ನ ಪಿ.ಕೆ.ವಿಜಯ್ ಅವರಿಗೆ ಅತ್ಯುತ್ತಮ ಕಾರ್ಮಿಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಮಾಚೇನಹಳ್ಳಿಯ ಮೇಕ್‌ವೈರ್ಸ್‌, ಮಂಡ್ಲಿಯ ದುರ್ಗಾ ಅಲಾಯ್ಸ, ಆಟೋ ಕಾಂಪ್ಲೆಕ್ಸ್‌ನ ಪ್ರಕಾಶ್ ಸೈನ್ ಸಿಸ್ಟಮ್ಸ್ ಉದ್ಯಮಗಳಿಗೆ ಉತ್ತಮ ಕೈಗಾರಿಕಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸರ್ ಎಂವಿ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್, ಪದಾಧಿಕಾರಿಗಳಾದ ಜಿ.ವಿಜಯಕುಮಾರ್, ಎ.ಎಂ.ಸುರೇಶ್, ಕೆ.ಎಸ್.ಸುಕುಮಾರ್, ವಸಂತ್ ಹೋಬಳಿದಾರ್, ಆರ್.ಮನೋಹರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net